ಬೆಂಗಳೂರು: ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಒಂದು ಸ್ವಂತ ಮನೆ ಕಟ್ಟಬೇಕೆಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಬಹಳಷ್ಟು ಶ್ರಮವಹಿಸಿ ಹಣ ಕೂಡಿಟ್ಟು ಮನೆ ಕಟ್ಟುತ್ತಾರೆ. ಹಾಗೆ ಕಟ್ಟುವ ಮನೆಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ಮನೆಗಳು ಸುಟ್ಟಇಟ್ಟಿಗೆ ಅಥವಾ ಇತ್ತೀಚೆಗೆ ಹಾಲೋಬ್ರಿಕ್ಸ್‌ನಿಂದ ಕಟ್ಟುತ್ತಾರೆ. ಆದರೆ ಸುದೀರ್ಘ ಬಾಳಿಕೆ, ಸುರಕ್ಷತೆ, ಸೌಂದರ್ಯದ ದೃಷ್ಟಿಯಿಂದ ಕಲ್ಲಿನ ಮನೆಗಳು ಹೆಚ್ಚು ಗಮನ ಸೆಳೆಯುತ್ತವೆ.
ಕಲ್ಲು ಎಂಬುದೇ ದೃಢತೆಯ ಸಂಕೇತ. ಆ ಹಿನ್ನೆಲೆಯಲ್ಲಿ ಕಲ್ಲಿನ ಮನೆಗಳು ಎಲ್ಲರೀತಿಯಿಂದಲೂ ಸುಭದ್ರವಾಗಿರುತ್ತದೆ. ಹಿಂದಿನ ಕಾಲದಲ್ಲಿ ವಾಡೆ, ಕೋಟೆ, ದೇವಸ್ಥಾನ, ಮಠ-ಮಂದಿರಗಳನ್ನು ಕಲ್ಲಿನಿಂದಲೇ ಕಟ್ಟುತ್ತಿದ್ದರು. ಇದರ ಗುಟ್ಟು ದೀರ್ಘಕಾಲೀನ ಬಳಕೆ. ಅಂತೆಯೇ ಈಗಲೂ ಅಲ್ಲೊಬ್ಬರು ಇಲ್ಲೊಬ್ಬರು ಕಲ್ಲಿನ ಮನೆಗಳನ್ನು ಕಟ್ಟಿಸುವವರಿದ್ದಾರೆ. ಅದರಲ್ಲಿ ಬಹುಪಾಲ ಜನರು ಕೇವಲ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದಷ್ಟೇ ಕಲ್ಲಿನ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಸೌಂದರ್ಯದ ಜೊತೆಗೆ ಕಲ್ಲಿನ ಮನೆಗಳು ಸುರಕ್ಷತೆ ಮತ್ತು ಸುದೀರ್ಘಕಾಲ ಬಾಳಿಕೆ ಕೂಡಾ ಬರುತ್ತದೆ.
ಕಲ್ಲಿನ ಮನೆಗಳ ಬಹುದೊಡ್ಡ ಉಪಯೋಗವೆಂದರೆ ಬೇಸಿಗೆ ಕಾಲದಲ್ಲಿ ತಂಪಾಗಿರುತ್ತವೆ. ಹೊರಗಿನ ಬಿಸಿಲ ಜಳವನ್ನು ಮನೆಯ ಒಳಗೆ ಬಾರದಂತೆ ಕಲ್ಲು ತಡೆಯುತ್ತದೆ. ಅದೇ ರೀತಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೊರಗಿನ ತಂಪು ವಾತಾರವಣವನ್ನು ಪ್ರತಿಬಂಧಿಸಿ ಮನೆಯ ಒಳಗೆ ಬೆಚ್ಚಗಿಡುತ್ತದೆ. ಈ ದೃಷ್ಟಿಯಿಂದ ಕಲ್ಲಿನ ಮನೆಗಳು ಎಲ್ಲ ಕಾಲಕ್ಕೂ ಸುರಕ್ಷಿತ ಎನ್ನಬಹುದು.
ಇಟ್ಟಿಗೆ, ಹಾಲೋಬ್ರಿಕ್ಸ್‌ಗಳಿಗೆ ಹೋಲಿಸಿದರೆ ಕಲ್ಲಿನ ಮನೆಗಳನ್ನು ನಿರ್ಮಿಸುವುದಕ್ಕೆ ಹೆಚ್ಚು ವೆಚ್ಚವಾಗಲಿದೆ. ಮೆಟೀರಿಯಲ್ ಹಾಗೂ ಕಾಮಗಾರಿ ವೆಚ್ಚ ದುಬಾರಿ ಏನಿಸಿದರು ಈ ಮನೆಗಳು ಸುಭದ್ರ ಎನ್ನುವ ಕಾರಣಕ್ಕೆ ಕಲ್ಲಿನ ಮನೆಗೆ ಆದ್ಯತೆ ನೀಡಲಾಗುತ್ತದೆ. ಮನೆಗೆ ಕನ್ನ ಹಾಕಿ ಕಳ್ಳತನ ಮಾಡುವ ಸಂದರ್ಭ ತೀರಾ ವಿರಳ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮನೆ ಉರುಳಿ ಬೀಳುವ ಸಾಧ್ಯತೆ ಕಡಿಮೆ. ಇದರಿಂದ ಜೀವ ಹಾನಿ, ಆಸ್ತಿಪಾಸ್ತಿ ನಾಶದಿಂದಾಗುವ ನಷ್ಟ ಸಂಭವಿಸುವುದಿಲ್ಲ. ಹಾಗೂ ಇಟ್ಟಿಗೆ ಪ್ಲಾಸ್ಟರ್ ಮಾಡಿದ ಮನೆಗಳಿಗೆ ಕನಿಷ್ಟ ನಾಲ್ಕೈದು ವರ್ಷಕ್ಕೊಮ್ಮೆಯಾದರೂ ಬಣ್ಣ ಹಚ್ಚಬೇಕು. ಕಲ್ಲಿನ ಮನೆಗಳಿಗೆ ಬಣ್ಣ ಹಚ್ಚುವ ಅವಶ್ಯಕತೆ ಇರುವುದಿಲ್ಲ.
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಲ್ಲಿನ ಕಟ್ಟಡಗಳ ಸಂಖ್ಯೆ ಹೆಚ್ಚಾಗಿತ್ತು. ಬ್ರಿಟೀಷರು, ರಾಜ-ಮಹಾರಾಜರ ಕಾಲದಲ್ಲಿ ಕಟ್ಟಿದ್ದ ಅಂತಹ ಕಲ್ಲಿನ ಕಟ್ಟಡಗಳು ಇಂದಿಗೂ ಉಪಯುಕ್ತವಾಗಿವೆ. ಇನ್ನು ದೇವಾಲಯಗಳಂತೂ ಸಾವಿರಾರು ವರ್ಷಗಳಿಂದ ಇರುವುದು ಕಣ್ಣ ಮುಂದಿದೆ. ಕಟ್ಟಡ ನಿರ್ಮಾಣ ಎರಡು ಬಗೆಯ ಕಲ್ಲುಗಳನ್ನು ಬಳಸಲಾಗುತ್ತದೆ. ಒಂದು ಬಿಳಿಕಲ್ಲು ಹಾಗೂ ಕೆಂಪುಕಲ್ಲು. ಕೆಂಪುಕಲ್ಲಿನ ಮನೆಗಳು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲಿನ ಬಿಸಿಲಿನ ಜಳವನ್ನು ತಗ್ಗಿಸಲು ಈ ಕೆಂಪು ಕಲ್ಲಿನ ಮನೆಗಳು ಪೂರಕವಾಗಿವೆ. ಇನ್ನು ಯಾವುದೇ ಕಟ್ಟಡದ ತಳಪಾಯಕ್ಕೆ ಬಳಸುವ ಬಿಳಿ ಕಲ್ಲುಗಳಿಂದ ಇಡೀ ಮನೆಯನ್ನು ಕಟ್ಟುತ್ತಾರೆ. ಇವೆರಡೂ ಕಲ್ಲುಗಳ ಮನೆಗಳು ಸುದೀರ್ಘ ಬಾಳಿಕೆ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಸಾಕ್ಷಿಯಾಗಿರುವುದರಿಂದ ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಕಲ್ಲಿನ ಮನೆಗಳ ಟ್ರೆಂಡ್ ಹೆಚ್ಚಾಗುತ್ತಿದೆ.