ಲೈಫ್‌ಸ್ಟೈಲ್

ಸಾಂಪ್ರದಾಯಿಕವಾಗಿ ಮಹತ್ವ ಪಡೆದ ಬಾಳೆ ಎಲೆ ಆರೋಗ್ಯಕ್ಕೂ ಹಿತಕರ...

ಭಾರತೀಯ ಸಂಪ್ರದಾಯದಲ್ಲಿ ಬಾಳೆ ಎಲೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪೂಜೆ ಪುನಸ್ಕಾರಗಳಲ್ಲಿ ಬಾಳೆಲೆಯನ್ನು ಬಳಸಲಾಗುತ್ತದೆ. ಶುಭ ಸಮಾರಂಭಗಳಲ್ಲಿ ಬಾಳೆಲೆಗೆ ತುಂಬ ಮಹತ್ವವಿದೆ. ಬಹಳ ಹಿಂದಿನಿಂದಲೂ ಬಾಳೆಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ. ಕೆಲವು ಅಡುಗೆ ಪದಾರ್ಥಗಳ ತಯಾರಿಯಲ್ಲಿಯೂ ಬಾಳೆಲೆಯನ್ನು ಬಳಸಲಾಗುತ್ತದೆ. ಬಾಳೆಲೆಯ ಕಡುಬು ತುಂಬ ಪ್ರಸಿದ್ಧ. ಹೆಚ್ಚು ತೇವಾಂಶವಿರುವ ಕಡೆ ಮಾತ್ರ ಬಾಳೆ ಚೆನ್ನಾಗಿ ಬೆಳೆಯುವುದರಿಂದ ತೋಟ ಗದ್ದೆಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೆ ಮನೆಯ ಸುತ್ತಮುತ್ತ ಕೂಡ ಸುಲಭವಾಗಿ ಬೆಳೆಯಬಹುದು. ಇದರ ವೈಜ್ಞಾನಿಕ ಹೆಸರು ಮ್ಯೂಸ ಅಕ್ಯುಮಿನಿಟ(Musa Acuminata). ಹೀಗೆ ನಾನಾ ರೀತಿಯಲ್ಲಿ ಬಳಕೆಯಾಗುತ್ತಿರುವ ಬಾಳೆಲೆಗೆ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುವ ಗುಣವಿದೆ. ಬಾಳೆ ಮರದ ಎಲ್ಲ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ. ರಾಸಾಯನಿಕ ಗೊಬ್ಬರ ಹಾಕದ, ಹೈಬ್ರಿಡ್ ಅಲ್ಲದ ದೇಸಿ ಪದ್ಧತಿಯಲ್ಲಿ ಬೆಳೆಸಿದ ತಳಿಯ ಬಾಳೆ ಹೆಚ್ಚು ಪರಿಣಾಮಕಾರಿ.

  1. ಬಾಳೆಲೆಯ ಕಷಾಯವನ್ನು ಮಾಡಿ ದಿನಕ್ಕೆ ಒಂದು ಸಲ ಕುಡಿಯುವುದರಿಂದ ಜ್ವರ ನಿಯಂತ್ರಣಕ್ಕೆ ಬರುತ್ತದೆ.
  2. ಬಾಳೆಲೆಯ ಮೇಲ್ಪದರದಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಕರಗಿ ನಮ್ಮ ಹೊಟ್ಟೆಗೆ ಸೇರುವುದರಿಂದ ಹೋಗುತ್ತದೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
  3. ಗಾಯವಾದ ಚರ್ಮದ ಭಾಗಕ್ಕೆ ತಾಜಾ ಬಾಳೆಲೆಯನ್ನು ಜಜ್ಜಿ ಹಚ್ಚಿಕೊಳ್ಳಬೇಕು. ಹೀಗೆ ದಿನಕ್ಕೆ 3-4 ಬಾರಿಹಚ್ಚಿಕೊಳ್ಳುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.
  4. ತಾಜಾ ಬಾಳೆಲೆಯ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತಲೆಸ್ನಾನ ಮಾಡಬೇಕು. ಇದರಿಂದ ಹೊಟ್ಟಿನ ಸಮಸ್ಯೆ ದೂರವಾಗಿ, ಕೂದಲು ಚೆನ್ನಾಗಿ ಬೆಳೆಯುತ್ತದೆ.
  5. ಬಾಳೆಲೆ ಕುಡಿಯ ರಸಕ್ಕೆ ಆಲಿವ್ ಎಣ್ಣೆ ಮತ್ತು ಸ್ವಲ್ಪ ಜೇನುಮೇಣವನ್ನು ಸೇರಿಸಿ ಹಚ್ಚುವುದರಿಂದ ಚಿಕ್ಕಮಕ್ಕಳ ಚರ್ಮದ ಮೇಲಿನ ಗುಳ್ಳೆಗಳು ಕಡಿಮೆಯಾಗುತ್ತವೆ.
  6. ಬಾಳೆಲೆಯನ್ನು ಶುಂಠಿ ಎಣ್ಣೆಯಲ್ಲಿ ಸ್ವಲ್ಪ ಅದ್ದಿ ಗಾಯದ ಮೇಲೆ ಬಟ್ಟೆ ಹಾಕಿ ಕಟ್ಟುವುದರಿಂದ ಸುಟ್ಟ ಗಾಯ ಬೇಗನೆ ಗುಣವಾಗುತ್ತದೆ.
  7. ಬಾಳೆಲೆಯನ್ನು ಬಳಸಿ ಸೂರ್ಯಸ್ನಾನ ಮಾಡಿದರೆ ದೇಹ ಆರೋಗ್ಯದಿಂದ ಇರುತ್ತದೆ