- ಬಾಳೆ ಹೂವಿನ ಆಹಾರವು ದೇಹಕ್ಕೆಷ್ಟು ಪ್ರಯೋಜನಕಾರಿ ಗೊತ್ತಾ?
- ಮಧುಮೇಹ, ತೂಕ ಇಳಿಕೆ , ಹೃದಯದ ಆರೋಗ್ಯಕ್ಕೆ ಭಾರಿ ಸಹಾಕಾರಿ
- ಬಾಳೆ ಹೂವಿನ ಪಲ್ಯವು ಮೂಳೆ ಹಾಗೂ ಮೂತ್ರಪಿಂಡದ ಆರೋಗ್ಯಕ್ಕೆ ಮದ್ದು
Banana Blossom Dry Curry: ಬಾಳೆ ಹಣ್ಣು, ಎಲೆ, ಕಾಂಡದಿಂದ ಮಾತ್ರವಲ್ಲ ಅದರ ಹೂವಿನಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ. ಇದರಲ್ಲಿರುವ ವಿಟಮಿನ್ ಎ, ಸಿ ಹಾಗೂ ಫೈಬರ್ ರಂಜಕ, ಪೊಟ್ಯಾಷಿಯಂ ದೇಹದ ಆರೋಗ್ಯಕ್ಕೆ ಸಾಕಷ್ಟು ಸಹಕಾರಿ. ಬಾಳೆ ಹಣ್ಣಿನ ಹೂವಿನಿಂದ ಪಲ್ಯವನ್ನು ಮಾಡುವುದು ಹೇಗೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ
ಬಾಳೆ ಹೂವಿನ ಪ್ರಯೋಜನವೇನು?
- ಬಾಳೆ ಹೂವಿನ ಸೇವನೆಯಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿಡುತ್ತದೆ.
- ಬಾಳೆ ಹೂವಿನಲ್ಲಿರುವ ಮೆಗ್ನೀಶಿಯಂ ಅಂಶವು ನೈಸರ್ಗಿಕವಾಗಿ ಖಿನ್ನತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.
- ನಾರಿನಾಂಶದಿಂದ ಕೂಡಿರುವ ಇದು ಹೊಟ್ಟೆ ತುಂಬಿರುವಂತೆ ನೋಡಿಕೊಂಡು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುವುದನ್ನು ತಡೆಯುವ ಮೂಲಕ ಕ್ಯಾಲೋರಿ ಹೆಚ್ಚಳವನ್ನು ಕಡಿಮೆ ಮಾಡುತ್ತದೆ.
- ಮೂತ್ರ ಪಿಂಡದ ಆರೋಗ್ಯವನ್ನು ಹಾಗೂ ಮೂಳೆಗಳನ್ನು ಬಲ ಪಡಿಸಲು ಬಾಳೆ ಹೂವಿನ ಆಹಾರವು ಸಹಾಯ ಮಾಡುತ್ತದೆ. ಹಲವರಲ್ಲಿ ಸಾಮಾನ್ಯವಾಗಿ ಕಾಡುವ ಜೀರ್ಣಕ್ರಿಯೆ ಸಮಸ್ಯೆಯನ್ನು ದೂರಮಾಡುವ ಶಕ್ತಿಯನ್ನು ಈ ಬಾಳೆ ಹೂವು ಹೊಂದಿದೆ.
ಬಾಳೆ ಹೂವಿನ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಸಣ್ಣದಾಗಿ ಹೆಚ್ಚಿಟ್ಟುಕೊಂಡ ಬಾಳೆ ಹೂವು, ಅರಿಶಿನ, ಧನಿಯಾ ಪುಡಿ. ಖಾರದ ಪುಡಿ, ತೆಂಗಿನ ತುರಿ, ಹುಣಸೆ, ಸಾಸಿವೆ, ಕರಿಬೇವು, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ ರೆಡಿಮಾಡಿ ಇಟ್ಟುಕೊಳ್ಳಿ.
ಪಲ್ಯ ತಯಾರಿ ಮಾಡುವುದು ಹೀಗೆ
ಕತ್ತರಿಸಿದ ಬಾಳೆ ಹೂವಿನ ಎಸಳನ್ನು ನೀರಿಗೆ ಹಾಕಿಡಿ, ಇಲ್ಲದಿದ್ದರೆ ಕಪ್ಪಾಗುವ ಸಾಧ್ಯತೆ ಇರುತ್ತದೆ. ಆ ನಂತರ ಅದಕ್ಕೆ ಉಪ್ಪು ಅಥವಾ ಅರಿಶಿನ ಹಾಕಿ ಒಂದೆರಡು ಬಾರಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
ತೊಳೆದ ಬಾಳೆ ಹೂವಿನ ಎಸಳನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಕುಕ್ಕರ್ಗೆ ಹಾಕದೆ ಬೆಂದ ಬಾಳೆ ಎಸಳಿಗೆ ಧನಿಯಾ, ಅರಶಿನ, ಖಾರದ ಪುಡಿ ಹಾಕಿ ಆನಂತರ ಹುಣಸೆ ನೀರನ್ನು ಹಿಂಡಿಕೊಳ್ಳಿ. ಸ್ವಲ್ಪ ಸಮಯದ ನಂತರ ಜೀರಿಗೆ ಪುಡಿ ಹಾಗೂ ಚೆನ್ನಾಗಿ ಬೆಂದ ನಂತರ ತೆಂಗಿನ ಕಾಯಿಯ ತುರಿಯನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಬೇಯಲು ಬಿಡಿ.
ಒಗ್ಗರಣೆ ಹಾಕುವುದು ಹೀಗೆ
ಒಗ್ಗರಣೆಗೆ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಸಿವೆ ಕರಿಬೇವು ಹಾಗೂ ಸಣ್ಣದಾಗಿ ಹೆಚ್ಚಿ ಈರುಳ್ಳಿ ಅಥಥವಾ ಬೆಳ್ಳುಳ್ಳಿ ಹಾಕಿ ಇದು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಬೇಯಿಸಿದ ಬಾಳೆ ಹೂವಿನ ಎಸಸಳನ್ನು ಬಾಂಡ್ಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಫ್ರೈ ಮಾಡಿ,(ಏಜೆನ್ಸೀಸ್).