ವಿಶ್ವವನ್ನೇ ಕಾಡುತ್ತಿರುವ ಕರೊನಾ ಸೋಂಕಿಗೆ ಔಷಧ ಸಂಶೋಧನೆಗಾಗಿ ಸಂಶೋಧಕರು, ವೈದ್ಯರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಭಾರತೀಯ ಪುರಾತನ ವೈದ್ಯಪದ್ಧತಿ ಆಯುರ್ವೆದದಿಂದ ಕರೊನಾ ಗುಣಪಡಿಸುವ ಸಾಧ್ಯತೆಯು ಆಯುರ್ವೆದ ವೈದ್ಯ ಡಾ.ಗಿರಿಧರ ಕಜೆ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿದ ಕ್ಲಿನಿಕಲ್ ಟ್ರಯಲ್ನಲ್ಲಿ ಕಂಡುಬಂದಿದ್ದನ್ನು ಮೊದಲ ಬಾರಿಗೆ ವಿಜಯವಾಣಿ ಬುಧವಾರ ವರದಿ ಮಾಡಿತ್ತು. ಈ ಕುರಿತು ಮತ್ತಷ್ಟು ವಿಚಾರಗಳನ್ನು ಡಾ. ಗಿರಿಧರ ಕಜೆ ಹಂಚಿಕೊಂಡಿದ್ದಾರೆ.
| ರಮೇಶ ದೊಡ್ಡಪುರ ಬೆಂಗಳೂರು # ಇದು ಔಷಧವೋ ಅಥವಾ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವೋ?
ಆಯುರ್ವೆದದಲ್ಲಿ ಔಷಧ ಎಂದು ಯಾವುದು ಕರೆಸಿ ಕೊಳ್ಳುತ್ತದೆಯೋ ಅದರಲ್ಲಿ ರೋಗನಿರೋಧಕ ಶಕ್ತಿಯೂ ಇರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ವೈರಸ್ ಯಾವುದೇ ಪ್ರತಿಕ್ರಿಯೆ ತೋರದು.
# ಕೇವಲ 10 ಸ್ಯಾಂಪಲ್ ಹೇಗೆ ಸಕ್ಸಸ್ ಎನ್ನಬಹುದು?
ಶೇ.90 ಕರೊನಾ ಸೋಂಕಿತರಲ್ಲಿ ಗುಣಲಕ್ಷಣ ಇರುವುದಿಲ್ಲ. ಶೇ.10 ಸೋಂಕಿತರಲ್ಲಿ ಮಾತ್ರ ಇರುತ್ತದೆ. ನಾವು ಸಂಶೋಧನೆ ನಡೆಸಿದ ಎಲ್ಲರೂ ಈ ಶೇ.10ರೊಳಗಿನ ಸೋಂಕಿತರೇ ಎಂಬುದನ್ನು ಗಮನಿಸಬೇಕು. ಕ್ಲಿನಿಕಲ್ ಟ್ರಯಲ್ಗೆ ಪ್ರಸ್ತಾವನೆ ಸಲ್ಲಿಸಿದಾಗ (ಏ.8) ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ನೂರನ್ನೂ ದಾಟಿರಲಿಲ್ಲ. ಅದಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯವರು 10 ಸೋಂಕಿತರನ್ನು ಉಪಚರಿಸುವಂತೆ ಅವಕಾಶ ನೀಡಿದ್ದರು. ಈಗ ಶೇ.100 ಗುಣಮುಖವಾಗಿದೆ. ಟಿಬಿ, 400ರಷ್ಟು ಮಧುಮೇಹದ ಮಟ್ಟ ಇದ್ದವರೂ ಕೇವಲ 9 ದಿನದಲ್ಲಿ ಗುಣವಾಗಿದ್ದಾರೆ. 10 ಸ್ಯಾಂಪಲ್ನಿಂದ ಫಲಿತಾಂಶ ತಿಳಿಯಲು ಸಾಧ್ಯವಾಗುವುದಿಲ್ಲ ಎಂದಾದರೆ ಐಸಿಎಂಆರ್, ಎಥಿಕ್ಸ್ ಕಮಿಟಿ ಈ ಟ್ರಯಲ್ಗೆ ಅನುಮತಿ ನೀಡುತ್ತಿದ್ದವೇ?
# ನೂರಿನ್ನೂರು ಸೋಂಕಿತರನ್ನು ಪರೀಕ್ಷೆಗೆ ನೀಡಲು ಚಿಂತನೆ ನಡೆಸಿರುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.
ನಾವು ಸಿದ್ಧರಿದ್ದೇವೆ. ಆಯುರ್ವೆದ ಎಂಬ ಕಾರಣಕ್ಕೆ ಅನೇಕ ವಿಚಾರಗಳಲ್ಲಿ ಈಗಾಗಲೆ ನಿಧಾನವಾಗಿದೆ. ಈ ಔಷಧ ಬಳಸಿ ಏನು ಮಾಡಬಹುದು ಎಂದು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ, ಸರ್ಕಾರದ ನಿರ್ಧಾರದ ಮೇಲೆ ಉಳಿದದ್ದು ಅವಲಂಬಿತವಾಗಿದೆ. ಸಕಾರಾತ್ಮಕವಾಗಿ ನಿರ್ಧಾರವಾಗುತ್ತದೆ ಎಂಬ ಆಶಾಭಾವನೆ ಇದೆ.
# ಸೋಂಕು ಗುಣಪಡಿಸಲು ವಿಶ್ವವೇ ಅಷ್ಟು ಕಷ್ಟಪಡುತ್ತಿರುವಾಗ ಇಷ್ಟು ಸರಳವಾಗಿ ಔಷಧ ಇದೆ ಎಂದರೆ ಹೇಗೆ ನಂಬುವುದು?
ತೀವ್ರ ಬಾಯಾರಿಕೆ ಉಂಟಾದಾಗ ಕೇಸರಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಬೆರೆಸಿದ ಪಾಯಸ ನೀಡಿದರೆ ಬಾಯಾರಿಕೆ ಇಂಗುವುದಿಲ್ಲ. ಅವರಿಗೆ ನೀರನ್ನೇ ಕೊಡಬೇಕು. ಯಾವ ಕಾಯಿಲೆಗೆ ಯಾವುದು ಸೂಕ್ತವೋ ಅದನ್ನು ಕೊಡಬೇಕೇ ವಿನಾ ಹೆಚ್ಚಿನ ಬೆಲೆಯದ್ದನ್ನಲ್ಲ. ಆಯುರ್ವೆದ ಕೇವಲ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಸರಳ ಔಷಧ ಹಾಗೂ ಗುಣಪಡಿಸಬಲ್ಲದು ಎಂಬುದು ಸಾಬೀತಾಗಿದೆ.
# ಕ್ಲಿನಿಕಲ್ ಟ್ರಯಲ್ ಆದ ತಕ್ಷಣ ಔಷಧ ಸಿಕ್ಕಿತು ಎಂದರ್ಥವೇ?
ಕ್ಲಿನಿಕಲ್ ಟ್ರಯಲ್ ಸಫಲ ಎಂದರೆ ಹಾಗೆ ಪರಿಗಣಿಸ ಬಹುದಾದರೂ, ಅಲ್ಲಿ ಸಫಲವಾದ ಅನೇಕ ಔಷಧಗಳು 4-5 ವರ್ಷದಲ್ಲಿ ಏಕೆ ಬ್ಯಾನ್ ಆಗುತ್ತವೆ? ಟ್ರಯಲ್ನಲ್ಲಿ ಗಮನಕ್ಕೆ ಬಾರದ ಅನೇಕ ಅಂಶಗಳು ನಿಜವಾಗಿ ಬಳಸುವಾಗ ತಿಳಿದುಬರುತ್ತವೆ, ಹಾಗಾಗಿ ಬ್ಯಾನ್ ಮಾಡುತ್ತಾರೆ. ಸ್ಯಾಂಪಲ್ ಹೆಚ್ಚಿದ್ದಷ್ಟೂ ಒಳ್ಳೆಯದು.
# ಔಷಧ ಕಂಡುಹಿಡಿದವರಿಗೆ ನಂಬಿಕೆ ಇದ್ದರೆ ಕೋವಿಡ್ ವಾರ್ಡ್ ನಲ್ಲಿ ಪಿಪಿಇ ಇಲ್ಲದೆ ಕಳಿಸಬೇಕೆಂಬ ಮಾತಿಗೆ ನಿಮ್ಮ ಪ್ರತಿಕ್ರಿಯೆ?
ಜೀವನದಲ್ಲಿ ಕಾಯಿಲೆಯಿಂದ ದೂರ ಇರಬೇಕು ಎಂಬುದೇ ಎಲ್ಲರ ಆಶಯ. ಅಲ್ಲಿಗೆ ಹೋದವರಿಗೆ ಸೋಂಕು ತಗುಲಬಾರದು ಎಂದಿಲ್ಲ. ಒಮ್ಮೆ ರೋಗ ಬರಿಸಿಕೊಳ್ಳಲಿ, ನಂತರ ಕ್ಯೂರ್ ಮಾಡಿಕೊಳ್ಳಲಿ ಎಂಬುದು ವಿತಂಡವಾದ. ಇಡೀ ಜಗತ್ತಿನಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯುವುದು ಹೀಗೆಯೇ. ಅದೇ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇದೂ ನಡೆದಿದೆ. ಆ ರೀತಿ ವಿತಂಡವಾದ, ಹಗುರ ಮಾತು ಬೇಡ.
# ನಿಮ್ಮ ಔಷಧದ ಜತೆಗೆ ಅಲೋಪಥಿಯನ್ನೂ ನೀಡಲಾಗಿತ್ತು. ಆಯುರ್ವೆದದಿಂದಲೇ ಗುಣಮುಖವಾಗಿದ್ದಾರೆ ಎಂದು ಹೇಗೆ ನಂಬುವುದು?
ಈ ಔಷಧದ ಜತೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ (ಎಚ್ಸಿಕ್ಯೂ) ಕೊಡುತ್ತಿದ್ದಾರೆ. ಅದರಿಂದ ಗುಣ ಆಗಿದೆಯಾ? ಎಚ್ಸಿಕ್ಯೂ ತೆಗೆದುಕೊಂಡವರು ಅಮೆರಿಕದಲ್ಲಿ ಮೃತಪಟ್ಟಿದ್ದಾರೆ. ಅದನ್ನೇ ಇಲ್ಲಿ ಮುಖ್ಯ ಔಷಧವಾಗಿ ನೀಡುತ್ತಿದ್ದಾರೆ. ಅದರಲ್ಲಿ ಎಷ್ಟು ಅಡ್ಡಪರಿಣಾಮ ಇದೆ ಎಂಬುದು ಇಂಟರ್ನೆಟ್ನಲ್ಲಿ ನೋಡಿದರೆ ಸಾಕು ತಿಳಿಯುತ್ತದೆ. ಆಂಟಿವೈರಲ್ ಗುಣ ಇರುವ ಭಾರತೀಯ ಔಷಧ ಏಕೆ ನೀಡಬಾರದು?
ನನಗೂ ರಿಸ್ಕ್ ಫ್ಯಾಕ್ಟರ್
ನಾನು ದಿನಕ್ಕೆ 150-200 ರೋಗಿಗಳನ್ನು ಪರೀಕ್ಷಿಸುತ್ತೇನೆ. ಕಳೆದ 20 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಂಬಿಕೆ ಗಳಿಸಿದ್ದೇನೆ. ಕರೊನಾಗೆ ಔಷಧ ನೀಡಿದ್ದೇನೆ ಎಂದು ಸುಖಾಸುಮ್ಮನೆ ಹೇಳಿಕೊಂಡು ಓಡಾಡಿ ಅದು ಸುಳ್ಳು ಎಂದಾದರೆ ನನ್ನ ಇಷ್ಟು ವರ್ಷದ ಪರಿಶ್ರಮಕ್ಕೆ ಧಕ್ಕೆ ಆಗುತ್ತದಲ್ಲವೇ? ಆ ಅಪಾಯದ ನಡುವೆಯೂ ನಾನು ಹೀಗೆ ಹೇಳುತ್ತಿದ್ದೇನೆ ಎಂದರೆ, ಅಪಾಯಕ್ಕಿಂತಲೂ ಔಷಧದ ಮೇಲಿನ ನಂಬಿಕೆ ಹೆಚ್ಚಿದೆ ಎಂದರ್ಥ. ಇದನ್ನು ಎಲ್ಲರೂ ತಿಳಿಯಬೇಕು. ವೈದ್ಯರ ಮಾತಿಗೆ ಬೆಲೆ ಕೊಡಬೇಕು ಎಂದು ಡಾ.ಗಿರಿಧರ ಕಜೆ ಹೇಳಿದ್ದಾರೆ.