ಲೈಫ್‌ಸ್ಟೈಲ್

ನೂರು ವರ್ಷ ಬಾಳುವುದಕ್ಕೆ ಆಚಾರ್ಯ ರಸಾಯನ

Mandara
ಆಯುರ್ವೇದವೆಂದರೆ ಖುಷಿಯಾಗುವುದಕ್ಕೆ, ಹೆಮ್ಮೆಪಡುವುದಕ್ಕೆ ಹಲವಾರು ಕಾರಣಗಳಿವೆ. ಅದು ಕೇವಲ ರೋಗತಪಾಸಣಾ ವರದಿಗಳ ಆಧಾರದಲ್ಲಿ ನಿಂತಿರುವುದಲ್ಲ. ಜನರಿಗೆ ಸ್ವಾಸ್ಥ್ಯ ಸೌಭಾಗ್ಯ ಬೇಕಾದರೆ ದೈಹಿಕ ಸ್ಥಿತಿಗತಿಗಳಿಗಷ್ಟೇ ಒತ್ತು ನೀಡದೆ ಮಾನಸಿಕ ಅಂಶಗಳ ಸಮನ್ವಯ ಮಾಡಿದ ಪರಿಯಂತೂ ತುಂಬಾ ಇಷ್ಟವಾಗುತ್ತದೆ. ಸ್ವಾಸ್ಥ್ಯ ಬೇಕೆಂದರೆ ಕೇವಲ ಔಷಧಿಗಳ ಸಮರ್ಪಕ ಪೂರೈಕೆ ಏನೇನೂ ಸಾಕಾಗುವುದಿಲ್ಲ. ಮನಸ್ಸು, ವ್ಯಕ್ತಿಯ ನಡೆ, ನಡತೆಗಳೆಲ್ಲವೂ ಬಹುಮುಖ್ಯ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟ ವಿಶಾಲ ಜ್ಞಾನರಾಶಿಯದು. ಸುದೀರ್ಘ ಬದುಕು ನಡೆಸಿ ಸದಾ ಸಂತಸದಿಂದ ಇರಲು ಅನೇಕ ಸೂತ್ರಗಳನ್ನು ಹೆಣೆದಿರುವ ಆಯುರ್ವೆದ ಆಚಾರ ರಸಾಯನವೆಂಬ ದಿವ್ಯದಾರಿಯನ್ನು ತೋರಿಕೊಟ್ಟಿದೆ.

ಯಾವ ರೀತಿ ಬದುಕಬೇಕು, ಗುಣನಡತೆಗಳು ಹೇಗಿರಬೇಕು ಎಂಬುದನ್ನು ಸದ್ವೃ್ತದಲ್ಲಿ ವಿವರವಾಗಿ ತಿಳಿಸಿರುವ ಆಯುರ್ವೆದವು ನೂರಾರು ವರ್ಷ ಚೆನ್ನಾಗಿ ಬಾಳಬೇಕಾದರೆ ಆಚಾರ ರಸಾಯನ ಅನಿವಾರ್ಯ ಎಂಬ ಸತ್ಯವನ್ನು ನಮ್ಮ ಮುಂದಿಟ್ಟಿದೆ. ಸದಾಚಾರಗಳ ಮೂಲಕ ಜೀವನದಲ್ಲಿ ನೆಮ್ಮದಿ ಪ್ರಾಪ್ತವಾಗಿ ನೂರ್ಕಾಲದ ಬದುಕಿಗೆ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂಬುದನ್ನು ಸ್ಪಷ್ಟಾಕ್ಷರಗಳಲ್ಲಿ ನಮೂದಿಸಿದೆ. ‘ಸದಾ ಸತ್ಯವನ್ನೇ ಆಡುವುದು ಹಾಗೂ ಹಿತವಾಗಿ ಮಾತನಾಡುವುದು. ಮನಸ್ಸನ್ನು ನಿಯಂತ್ರಿಸುವುದು ಹಾಗೂ ಮನಃಶಾಂತಿಯನ್ನು ಕಾಪಾಡಿಕೊಳ್ಳುವುದು. ಮನಸ್ಸನ್ನು ಏಕಾಗ್ರಗೊಳಿಸುವುದು. ಸದುದ್ದೇಶಪೂರ್ವಕ ಧೈರ್ಯ ಬೆಳೆಸಿಕೊಳ್ಳುವುದು. ಹಿರಿಯರಿಗೆ, ಗುರುಗಳಿಗೆ, ವಿದ್ವಜ್ಜನರಿಗೆ, ದೇವರಿಗೆ ಗೌರವ ನೀಡಿ ಎಲ್ಲರೊಂದಿಗೆ ಸ್ನೇಹ ಮನೋಭಾವದಿಂದ ಇರುವುದು. ಸಕಲ ಪ್ರಾಣಿಗಳ ಮೇಲೆ ಕರುಣೆ ಹೊಂದಿರುವುದು. ನಿತ್ಯ ಸರಿಯಾದ ಸಮಯಕ್ಕೆ ನಿದ್ರೆ ಹಾಗೂ ಆಹಾರ ಸೇವಿಸುವುದು. ಸ್ಥಳ ಹಾಗೂ ಸಮಯದ ಪರಿಜ್ಞಾನ ಇಟ್ಟುಕೊಳ್ಳುವುದು. ಯುಕ್ತಿಜ್ಞಾನದ ಯಥಾಸಾಧ್ಯ ಬಳಕೆ ಮಾಡುವುದು. ಅಧ್ಯಾತ್ಮಚಿಂತನೆಯತ್ತ ಜ್ಞಾನೇಂದ್ರಿಯಗಳು ಹಾಗೂ ಮನಸ್ಸನ್ನು ಸೆಳೆದೊಯ್ಯುವುದು. ದೇವರಲ್ಲಿ ನಂಬಿಕೆಯನ್ನಿಡುವುದು. ಸ್ವಾಸ್ಥ್ಯಕ್ಕೆ ಪೂರಕವಾದ ಹವ್ಯಾಸಗಳು ಹಾಗೂ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು. ಲೋಕೋಪಕಾರ ಮಾಡುವುದು. ದೇಸಿಗೋವಿನ ತುಪ್ಪ ಹಾಗೂ ಹಾಲುಗಳನ್ನು ಪ್ರತಿನಿತ್ಯ ಸೇವಿಸುವುದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ನಿಗ್ರಹಿಸುವುದು’ - ಈ ಹದಿನೈದು ವಿಚಾರಗಳೇ ಆಚಾರ ರಸಾಯನದ ಮುಖ್ಯ ಅಂಶಗಳು.

ಯಾವಾಗಲೂ ಸತ್ಯವನ್ನೇ ಹೇಳಲು ಪ್ರಾರಂಭಿಸಿದರೆ ಅದು ಮನಸ್ಸಿನ ಮೇಲಾಗುವ ಒತ್ತಡವನ್ನು ತಡೆಯಲು ಬೇಕಾಗುವ ಮೊದಲ ಹೆಜ್ಜೆ. ಒಂದೇ ವಿಷಯವನ್ನು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಹೇಳಿದರೆ ಅದನ್ನು ನೆನಪಿಡುವುದು ಎಷ್ಟೊಂದು ಕಷ್ಟ! ಮಾನಸಿಕ ನೆಮ್ಮದಿ ಹಾಳಾಗಲು ಬೇರೇನೂ ಬೇಡ. ಸತ್ಯ ಹೇಳುವುದೇ ಅಭ್ಯಾಸವಾದರೆ ಮೂಲ ವಿಷಯ ಮಾತ್ರ ನೆನಪಿನಲ್ಲಿದ್ದರೆ ಸಾಕು. ಯಾರಲ್ಲಿ ಏನು ಹೇಳಿದ್ದೇನೆಂಬುದರ ಅಗತ್ಯವಿರುವುದಿಲ್ಲ. ಮನಸ್ಸಿನ ನಿಯಂತ್ರಣವೂ ಸುಲಭವಾದುದಲ್ಲ. ಹಾಗೆಂದು ತೋಚಿದಂತೆಲ್ಲ ಬದುಕಲಾರಂಬಿಸಿದರೆ ಮನುಷ್ಯರಿಗೂ, ಅನ್ಯಪ್ರಾಣಿಗಳಿಗೂ ಉಳಿಯುವ ವ್ಯತ್ಯಾಸವಾದರೂ ಏನು? ಮಾನವ ಪ್ರಯತ್ನವೆಂಬುದು ಸದಾ ನಮ್ಮಲ್ಲಿ ಜಾಗೃತವಾಗಿರಬೇಕು. ಧೀರತೆ ಎಂದಾಕ್ಷಣ ಮೊಂಡು ಧೈರ್ಯ ಇದ್ದು ಪ್ರಯೋಜನವಿಲ್ಲ. ಉದ್ದೇಶ ಸರಿಯಿದ್ದರೆ ಧೈರ್ಯ ತನ್ನಿಂದತಾನೇ ಹುಟ್ಟಿಕೊಳ್ಳುತ್ತದೆ. ಗೌರವಭಾವ, ಕರುಣೆಗಳು ಇಲ್ಲದಿದ್ದರೆ ಅದು ಮನುಷ್ಯತ್ವ ಎನಿಸಿಕೊಳ್ಳುವುದಿಲ್ಲ. ಆಚಾರ ರಸಾಯನ ಪಾಲಿಸಿದರೆ ರೋಗವನ್ನು ಮಾತ್ರವಲ್ಲ, ಜೀವನವನ್ನೇ ಬಹುಪಾಲು ಗೆದ್ದಂತೆ.

ಪಂಚಸೂತ್ರಗಳು

  • ಏಲಕ್ಕಿ: ಮೂಲವ್ಯಾಧಿ ಗುಣಕಾರಿ.
  • ದರ್ಭೆಹುಲ್ಲು: ಆಮ್ಲಪಿತ್ತ ಶಾಮಕ.
  • ಮಾದಲಹಣ್ಣು: ಕಿವಿನೋವು ಗುಣಕಾರಿ.
  • ರುದ್ರಾಕ್ಷಿ: ಆಸ್ತಮಾ ನಿಯಂತ್ರಣಕ್ಕೆ ಸಹಕಾರಿ.
  • ಕ್ಯಾರೆಟ್: ಹೊಟ್ಟೆಯಲ್ಲಿ ತುಂಬಿದ ನೀರು ನಿರ್ಹಾರಕ.