ಬೆಂಗಳೂರು: ಗಿರೀಶ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ಈ ಚಿತ್ರಕ್ಕೆ ಜರ್ಮನಿಯ ಸ್ಟುಟ್ಗಾರ್ಟ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ( ಡೈರೆಕ್ಟರ್ಸ್ ವಿಷನ್ ಅವಾರ್ಡ್) ಸಿಕ್ಕಿದೆ.
‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ಜಯಂತ ಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದೆ. ಈ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ, ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಕ್ಕಳ ಬದುಕಿನ ಮೂಲಕ ಅನಾವರಣಗೊಳ್ಳುವ ಈ ಕಥೆಯಲ್ಲಿ ನಾಲ್ವರು ಮಕ್ಕಳು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಚಿತ್ರದ ಕಥೆ ಎರಡು ಕಾಲಘಟ್ಟಗಳಲ್ಲಿ ಮತ್ತು ಎರಡು ವಿಭಿನ್ನ ಪರಿಸರಗಳಲ್ಲಿ ನಡೆಯಲಿದೆ.
ಗಿರೀಶ್ ಕಾಸರವಳ್ಳಿ ಈ ಚಿತ್ರವನ್ನು ತಮ್ಮ ಮಗ ಅಪೂರ್ವ ಜತೆಗೆ ಜಂಟಿಯಾಗಿ ನಿರ್ದೇಶಿಸಿದ್ದು, ಸಂಗಮ ಫಿಲಂಸ್ನಡಿ ಶಿವಕುಮಾರ್ ನಿರ್ವಿುಸಿದ್ದಾರೆ. ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಛಾಯಾಗ್ರಹಣ, ಎಸ್.ಆರ್.ರಾಮಕೃಷ್ಣ ಸಂಗೀತ ಈ ಚಿತ್ರಕ್ಕಿದೆ.
ದೃಶಾ ಕೊಡಗು, ಆರಾಧ್ಯಾ, ಪ್ರವರ್ಥ ರಾಜು, ನಲ್ಮೆ, ಪವಿತ್ರಾ, ಮಾಲತೇಶ್. ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತಾ ಶೆಟ್ಟಿ ನಟಿಸಿದ್ದಾರೆ.