ಲೈಫ್‌ಸ್ಟೈಲ್

ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕೆ?; ಹಾಗಾದ್ರೆ ಈ ಹವ್ಯಾಸಗಳನ್ನು ಮೊದಲು ಬಿಡಿ

ದಿನದಿಂದ ದಿನಕ್ಕೆ ಒತ್ತಡ ಜೀವನವು ಎಲ್ಲರಿಗೂ ಅಭ್ಯಾಸ ಆಗಿದೆ. ಹೆಚ್ಚು ಕಾಲ ಆತಂಕವನ್ನು ಅನುಭವಸಿದರೆ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಒಟ್ಟಾರೆ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಐದು ಹವ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಿಂದ ದೂರವಿಡಿ.

  • ಅತಿಯಾಗಿ ಚಿಂತಿಸುವುದು: ಚಿಂತೆ ಚಿತೆಯನ್ನು ಏರಿಸುತ್ತದೆ ಎಂಬ ಮಾತಿದೆ. ಅತಿಯಾಗಿ ಯೋಚಿಸುವುದು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಸನ್ನಿವೇಶಗಳನ್ನು ನೆನೆಸಿಕೊಂಡು ಅದರ ಬಗ್ಗೆಯೇ ಆಲೋಚಿಸುವುದು ಮತ್ತು ಅದಕ್ಕೆ ಅನುಗುಣವಾಗಿ ವಿಷಯಗಳನ್ನು ಕಲ್ಪಿಸಿಕೊಳ್ಳುವುದು ಮಾನಸಿಕ ನೆಮ್ಮದಿಗೆ ಮಾರಕವಾಗಿದೆ. ಆದ್ದರಿಂದ ಚಿಂತೆ ಮಾಡುವುದನ್ನು ಬಿಡಿ.
  • ಆಪ್ತರಿಂದ ದೂರ ಉಳಿಯುವುದು: ಪ್ರಸ್ತುತ ಜೀವನದಲ್ಲಿ ಒಂಟಿಯಾಗಿ ಇರಲು ಹಲವರು ಇಚ್ಛಿಸುತ್ತಾರೆ. ಕುಟುಂಬ, ಸ್ನೇಹಿತರು, ಸಂಗಾತಿಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಇಂತಹ ದೂರಗಳು ನಕಾರಾತ್ಮಕ ಮನಸ್ಥಿತಿಯನ್ನು ಉಂಟುಮಾಡಬಹುದು. ಬದಲಿಗೆ ಸಮಸ್ಯೆಗಳನ್ನು ಒಪ್ಪಿಕೊಂಡು, ಅವುಗಳನ್ನು ಸಕಾರಾತ್ಮಕ ರೀತಿಯಲ್ಲಿ ಪರಿಹರಿಸಿ.
  • ದೀರ್ಘಕಾಲ ಕುಳಿತಲ್ಲೇ ಕುಳಿತುಕೊಳ್ಳುವುದು: ಸುದೀರ್ಘ ಕಾಲ ಕುಳಿತುಕೊಳ್ಳುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಅಲಸ್ಯ ಅತಿಯಾಗುತ್ತದೆ. ಮಾನಸಿಕವಾಗಿಯೂ ಚಿಂತೆಗೆ ದೂಡುತ್ತದೆ. ಆದ್ದರಿಂದ ನೀವು ಹೆಚ್ಚು ಸಕ್ರಿಯರಾಗಿರುವಂತೆ ನೋಡಿಕೊಳ್ಳಿ.
  • ಮುಂಜಾನೆ ಆತುರದಿಂದ ಏಳುವುದು: ಮುಂಜಾನೆ ಅವಸರದಲ್ಲಿ ಏಳುವುದರಿಂದ ಒತ್ತಡ ಉಂಟಾಗುತ್ತದೆ. ಬೆಳಗ್ಗೆ ಬೇಗ ನಿದ್ರೆಯಿಂದ ಎಚ್ಚರವಾಗಿ ಆದ್ರೆ ಆತುರದಿಂದ ಏಳುವುದು ಬೇಡ. ಕೆಲಸ ಆರಂಭಿಸುವ ಮುನ್ನ ನಿಮಗಾಗಿ ಸಮಯವನ್ನು ಕೊಡಿ.
  • ಮಲ್ಟಿ ಟಾಸ್ಕ್​​: ಹೆಚ್ಚು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೊರೆ ಮತ್ತು ದಣಿದ ಭಾವನೆಯನ್ನು ಉಂಟುಮಾಡಬಹುದು. ಇದು ದೈಹಿಕ ಮತ್ತು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ.