ಲೈಫ್‌ಸ್ಟೈಲ್

Marriages: ಮದುವೆಯಲ್ಲಿ ಪತಿಯು ಪತ್ನಿಗೆ ಅರುಂಧತಿ ನಕ್ಷತ್ರವನ್ನುತೋರಿಸೋದ್ಯಾಕೆ? ನಿಮಗೆ ತಿಳಿದಿದೆಯೇ?

Marriages : ಮದುವೆ ಎಂದರೆ  ಎರಡು ಕುಟುಂಬವನ್ನು ಬೆಸೆಯುವ ಸುಂದರವಾದ ಬಂಧವಾಗಿದೆ. ಮದುವೆ ಸಮಾರಂಭದಲ್ಲಿ ಮದುವೆಯಿಂದ ಆರಂಭವಾಗಿ ಮದುವೆ ಮುಗಿಯುವವರೆಗೂ ಅನೇಕ  ಆಚರಣೆಗಳನ್ನೂ ಆಚರಿಸಲಾಗುತ್ತದೆ.  ತಾಳಿಬೊಟ್ಟು ಕಟ್ಟಿದ ನಂತರ ಅರುಂಧತಿ ನಕ್ಷತ್ರವನ್ನು ತೋರಿಸಲಾಗುತ್ತದೆ. ಆದರೆ ಈ ಅರುಂಧತಿ ನಕ್ಷತ್ರವನ್ನು ಏಕೆ ತೋರಿಸಲಾಗ್ತದೆ? ಎನ್ನುವ ಕುರಿತಾಗಿ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.. ಇಂದು ನಾವು  ಈ ಕುರಿತಾಗಿ ತಿಳಿಸಿ ಕೊಡಲಿದ್ದೇವೆ....

ವಿವಾಹ ಆಚರಣೆಗಳಲ್ಲಿ ಅರುಂಧತಿ ನಕ್ಷತ್ರ ತೋರಿಸುವುದೊಂದು ವಾಡಿಕೆ. ವಧು ವರರಿಬ್ಬರನ್ನೂ ಪುರೋಹಿತರು ಹೊರಾಂಗಣಕ್ಕೆ ಕರೆದುಕೊಂಡು ಹೋಗಿ ಕಾಣದ ಅರುಂಧತಿ ನಕ್ಷತ್ರದತ್ತ ಕೈ ತೋರುವಂತೆ ಮಾಡುತ್ತಾರೆ. ಇದರ ಹಿಂದೆ ಉದ್ದೇಶವಿದೆ.

ವಾಸ್ತವವಾಗಿ, ಈ ನಕ್ಷತ್ರಗಳು ಗೋಚರವಾಗುವುದು ಬೆಳಗಿನ ಜಾವ 3.45ರ ಸಮಯದಲ್ಲಿ. ಆದರೆ, ಈ ಸಮಯದಲ್ಲಿ ವಿವಾಹವಾಗದ ಕಾರಣ ಹಾಗೂ ನಮ್ಮಲ್ಲಿ ಯಾರಿಗೂ ಸಮಯವಿಲ್ಲದ ಕಾರಣ ಮದುವೆ ನಂತ್ರ ತೋರಿಸಲಾಗುತ್ತದೆ.

ವೈದಿಕ ಗ್ರಂಥಗಳಲ್ಲಿ ಋಷಿ ವಸಿಷ್ಠ (ಶ್ರೀರಾಮನ ಗುರು) ದೇವಿ ಅರುಂಧತಿಯನ್ನು ವಿವಾಹವಾದರು. ಅವರಿಬ್ಬರೂ ಪರಿಪೂರ್ಣ ದಂಪತಿಯಾಗಿದ್ದರು. ಇಬ್ಬರೂ ಬೇರೆ ಬೇರೆ ವರ್ಣ ವ್ಯವಸ್ಥೆಯಿಂದ ಬಂದರೂ, ಅವರು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಮತ್ತು ಎಲ್ಲರಿಂದ ಗೌರವವನ್ನು ಪಡೆದಿದ್ದರು. ಅವರ ವೈವಾಹಿಕ ಜೀವನ ಎಲ್ಲ ದಂಪತಿಗೆ ಮಾದರಿಯಾಗಿತ್ತು. ಅವರು ಒಬ್ಬರಿಗೊಬ್ಬರು ಹೇಗಿದ್ದರು ಎಂಬುದನ್ನು ಸೂಚಿಸುವಂತೆ ಜೋಡಿಯಾಗಿರುವ ಎರಡು ನಕ್ಷತ್ರಪುಂಜಗಳಿಗೆ ಅರುಂಧತಿ ವಸಿಷ್ಠ ಎಂದು ಹೆಸರಿಸಲಾಗಿದೆ.

ಅರುಂಧತಿ ವಸಿಷ್ಠ ಎಂಬುದು ಎರಡು ನಕ್ಷತ್ರಪುಂಜಗಳ ರಾಶಿ. ಸಾಮಾನ್ಯವಾಗಿ ಎರಡು ನಕ್ಷತ್ರಗಳ ಪುಂಜವು ಜೊತೆಗಿದ್ದಾಗ ಒಂದು ನಕ್ಷತ್ರವು ಮಧ್ಯದಲ್ಲಿದ್ದರೆ ಇನ್ನೊಂದು ಕೇಂದ್ರ ನಕ್ಷತ್ರದ ಸುತ್ತ ಸುತ್ತುತ್ತಿರುತ್ತದೆ. ಆದರೆ ಅರುಂಧತಿ ವಸಿಷ್ಠ ನಕ್ಷತ್ರಪುಂಜಗಳು ಹಾಗಲ್ಲ. ಅವು ಪರಸ್ಪರ ಒಂದನ್ನೊಂದು ಸುತ್ತುತ್ತವೆ. ಎರಡರಲ್ಲಿ ಯಾವುದೇ ಒಂದು ಮಾತ್ರ ಕೇಂದ್ರದಲ್ಲಿ ಉಳಿಯದೆ ಸಮಾನವಾಗಿ ಒಂದರ ಸುತ್ತ ಮತ್ತೊಂದು ಸುತ್ತುತ್ತದೆ. ಜೊತೆಯಾಗಿ ಚಲಿಸುತ್ತವೆ. ವಿವಾಹಿತ ದಂಪತಿ ಹೇಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಆದರ್ಶ ದಾಂಪತ್ಯದಲ್ಲಿ ಯಾರೊಬ್ಬರದೂ ಮೇಲುಗೈಯಾಗದೆ ಇಬ್ಬರೂ ಸಮಾನ ಸ್ಥಾನ ಹೊಂದಿರಬೇಕು. ಇದರಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ಪೂರ್ವಜರು ಅಂತಹ ಅವಳಿ ನಕ್ಷತ್ರ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದನ್ನು ಆಧುನಿಕ ಉಪಕರಣಗಳ್ಯಾವುದರ ಸಹಾಯವೂ ಇಲ್ಲದೆ ಗುರುತಿಸಿದ್ದರು.

ಪುರೋಹಿತರು ವಿವಾಹಿತ ದಂಪತಿಗೆ ಈ ನಕ್ಷತ್ರಪುಂಜವನ್ನು ತೋರಿಸಿ ದಾಂಪತ್ಯ ಜೀವನ ಹೀಗಿರಲಿ ಎಂದು ಹಾರೈಸುತ್ತಿದ್ದರು.  ಆದರೆ ಇಂದು ಆಚರಣೆಯ ಉದ್ದೇಶವರಿಯದೆ ಸುಮ್ಮನೆ ಏನೋ ತಮಾಷೆಯಾಗಿ ಆಕಾಶ ನೋಡಿ ಬರುತ್ತಾರೆ. ಈ ಸಂದರ್ಭದಲ್ಲಿ ವಸಿಷ್ಠ ಮತ್ತು ಅರುಂಧತಿ ನವ ದಂಪತಿ ಶಾಶ್ವತವಾಗಿ ದಂಪತಿಯಾಗಿ ಬಾಳುವಂತೆ ಆಶೀರ್ವದಿಸುತ್ತಾರೆ ಎನ್ನುವ  ನಂಬಿಕೆ ಇಂದಿಗೂ ಕೂಡಾ ನಡೆದುಕೊಂಡು ಬಂದಿದೆ.