Scary Dreams: ಪ್ರತಿಯೊಬ್ಬರು ಎಂದೇಳುವುದು ಸ್ವಲ್ಪ ಕಷ್ಟಸಾಧ್ಯವಾದರೂ ಬಹುತೇಕ ಮಂದಿ ನಿದ್ರೆಗೆ ಜಾರಿದ ಕೆಲ ಗಂಟೆಗಳಲ್ಲಿ ಅಥವಾ ತಡರಾತ್ರಿ ಗಾಢವಾದ ಕನಸಿಗೆ ಜಾರುತ್ತಾರೆ. ಹೀಗೆ, ಕನಸು ಕಾಣುವುದು ತೀರ ಸಾಮಾನ್ಯ ಬಿಡಿ. ಒಂದಷ್ಟು ನಮಗೆ ಸಂತೋಷ, ಅಚ್ಚರಿಯನ್ನು ಮೂಡಿಸಿದರೆ, ಇನ್ನೂ ಕೆಲವು ತೀವ್ರ ಭಯ, ಆತಂಕವನ್ನು ಸೃಷ್ಟಿಸುತ್ತವೆ.
ಇದು ನಿದ್ರೆಯಲ್ಲಿ ಮಾತ್ರವಲ್ಲದೆ ಎಚ್ಚರಗೊಂಡ ಬಳಿಕವೂ ಮನಸ್ಸಿನಲ್ಲಿ ಭಯ, ಗೊಂದಲ ಅಥವಾ ಆತಂಕ ಉಳಿಯುವಂತೆ ಮಾಡುತ್ತದೆ. ಅದರಲ್ಲೂ ಸಾವು, ಅಪಘಾತ, ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು, ಯಾರಾದರೂ ಬೆನ್ನಟ್ಟುವುದು, ಇಂತಹ ಭೀತಿ ಹುಟ್ಟಿಸುವ ಕನಸುಗಳು ಬಂದಾಗ, ಇದು ಯಾವುದಾದರೂ ಅಪಾಯದ ಮುನ್ಸೂಚನೆ ಇರಬಹುದಾ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ತೀರ ಸಹಜ.
ಆದರೆ, ಕನಸು ಕಂಡ ಕೂಡಲೇ ಅದನ್ನು ಕೆಟ್ಟ ಘಟನೆ ನಡೆಯಲಿದೆ ಎಂಬ ಸೂಚನೆ ಎಂದು ಭಾವಿಸುವ ಅಗತ್ಯವಿಲ್ಲ. ನಮ್ಮ ಒತ್ತಡ, ಭಯ, ದಿನವಿಡೀ ಯೋಚಿಸಿದ ವಿಷಯಗಳು, ಹಳೆಯ ನೆನಪುಗಳು ಹಾಗೂ ನಿದ್ರೆಯ ಗುಣಮಟ್ಟವೂ ಕನಸುಗಳ ಮೇಲೆ ಪ್ರಭಾವ ಬೀರುತ್ತವೆ. ಹಾಗಾದರೆ, ಆಗಾಗ್ಗೆ ಬೀಳುವ ಇಂತಹ ಕನಸುಗಳು ಏನನ್ನು ಸೂಚಿಸಬಹುದು? ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
ನಿದ್ರೆಯಲ್ಲಿ ನಮ್ಮ ಮನಸ್ಸು ಕಾಣುವ ಕನಸುಗಳ ಹಿಂದೆ ಅತ್ಯಂತ ಕುತೂಹಲಕಾರಿ ಜೈವಿಕ ರಹಸ್ಯವಿದೆ. ನಾವು ಮಲಗಿ ದೇಹಕ್ಕೆ ವಿಶ್ರಾಂತಿ ನೀಡಿದಾಗಲು ಸಹ ನಮ್ಮ ಮಿದುಳು ಮಾತ್ರ ದಿನವಿಡೀ ಸಂಗ್ರಹಿಸಿದ ಅನುಭವಗಳ ಹುಡುಕಾಟದಲ್ಲಿ ಸಖತ್ ಬಿಜಿಯಾಗಿರುತ್ತದೆ. ಹಗಲಿನಲ್ಲಿ ನಾವು ಅನುಭವಿಸಿದ ಸಂತೋಷ, ಆತಂಕ, ನೆನಪುಗಳು ಮತ್ತು ವ್ಯಕ್ತಪಡಿಸಲಾಗದ ಸುಪ್ತ ಆಸೆಗಳನ್ನು ಮಿದುಳು ಸಂಸ್ಕರಿಸಿ, ನಮಗೆ ದೃಶ್ಯಾವಳಿಗಳ ರೂಪದಲ್ಲಿ ಅವುಗಳನ್ನು ಮರುಪ್ರಸಾರ ಮಾಡುತ್ತದೆ. ವಿಶೇಷವಾಗಿ ನಿದ್ರೆಯ 'REM' (Rapid Eye Movement) ಎಂಬ ಹಂತದಲ್ಲಿ ನಮ್ಮ ಮಿದುಳು ಜಾಗೃತ ಸ್ಥಿತಿಯಷ್ಟೇ ವೇಗವಾಗಿ ಕೆಲಸ ಮಾಡುವುದರಿಂದ, ಕನಸುಗಳು ಮೂಡಲು ಶುರುವಾಗುತ್ತವೆ.
ಕೆಲವು ಭಯಾನಕ ಕನಸುಗಳು ಬಂದಾಗ ಮುಂದೆ ಏನಾದರೂ ಕೆಟ್ಟ ಘಟನೆ ಸಂಭವಿಸಬಹುದೇ? ಇದು ಅದರ ಮುನ್ಸೂಚನೆಯೇ ಎಂಬ ಆತಂಕಗಳು ನಿದ್ರೆಯಿಂದ ಎದ್ದ ಮೇಲೂ ಕಾಡುವುದು ಇನ್ನೂ ಸಹಜ. ಆದರೆ, ಕನಸುಗಳು ಭವಿಷ್ಯದಲ್ಲಿ ನಡೆಯಲಿರುವ ಅಪಾಯವನ್ನು ಖಚಿತವಾಗಿ ಹೇಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಸಾಮಾನ್ಯವಾಗಿ ಇಂತಹ ಕನಸುಗಳು ನಮ್ಮ ಒತ್ತಡ, ಭಯ, ಆತಂಕ, ದಿನನಿತ್ಯದ ಅನುಭವಗಳು ಅಥವಾ ಹಳೆಯ ನೆನಪುಗಳೊಂದಿಗೆ ಸಂಬಂಧ ಹೊಂದಿರಬಹುದು. ಹೀಗಾಗಿ, ಭಯಾನಕ ಕನಸು ಬಂದ ಮಾತ್ರಕ್ಕೆ ಅದನ್ನು ಅಪಾಯದ ಸೂಚನೆ ಎಂದು ಭಾವಿಸಿ, ಹೆದರುವ ಅಗತ್ಯವೇನಿಲ್ಲ.
ಪ್ರತಿಯೊಬ್ಬರಿಗೂ ಕನಸಿನಲ್ಲಿ ಒಂದಲ್ಲ ಒಂದು ಬಾರಿ ವ್ಯಕ್ತಿಗಳು ಸತ್ತಂತೆ ಗೋಚರವಾಗುತ್ತದೆ. ಇಂತಹ ಕನಸು ಆತಂಕ ಅಥವಾ ಭಯ ಉಂಟುಮಾಡಬಹುದು. ಆದರೆ, ಇದು ನಿಜ ಜೀವನದಲ್ಲಿ ಆ ವ್ಯಕ್ತಿಗೆ ಏನಾದರೂ ಅಪಾಯ ಸಂಭವಿಸುತ್ತದೆ ಎಂಬ ಮುನ್ಸೂಚನೆಯೂ ಅಲ್ಲ ಅಥವಾ ಅವರು ಸಾಯುತ್ತಾರೆ ಎಂಬುದೂ ಅಲ್ಲ. ಇಂತಹ ಕನಸುಗಳು ಮನಸ್ಸಿನಲ್ಲಿರುವ ಭಯ, ಆ ವ್ಯಕ್ತಿಯ ಬಗ್ಗೆ ಇರುವ ಕಾಳಜಿ, ಹಳೆಯ ನೆನಪುಗಳು ಅಥವಾ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಗಳ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇಂತಹ ಕನಸು ಬಿದ್ದಾಗ ಗಾಬರಿ ಆಗುವುದು ಅಥವಾ ಗಾಬರಿ ಪಡಿಸುವುದು ಬೇಡ.
ಭಯಾನಕ ಕನಸುಗಳು ಪದೇ ಪದೇ ಕಾಣಿಸಿಕೊಂಡಾಗ ಗಾಢವಾದ ನಿದ್ರೆಗೆ ಅಡ್ಡಿಯಾಗುವುದು ಸಾಮಾನ್ಯ. ಆದರೆ ಕನಸಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುವುದರಿಂದ ನಿರಂತರವಾಗಿ ನಿದ್ದೆ ಕಡಿಮೆಯಾಗುತ್ತದೆ. ಎಚ್ಚರಿಕೆ ಆದಾಗ ಕನಸಿನ ಬಗ್ಗೆ ಯೋಚಿಸುತ್ತಾ ಅಥವಾ ಭಯಪಡುತ್ತಾ ಇರುವುದರಿಂದ ಮತ್ತೆ ನಿದ್ರೆಗೆ ಜಾರಲು ಕಷ್ಟವಾಗಬಹುದು. ಇಲ್ಲವೇ ನಿದ್ರೆಗೆ ಫುಲ್ಸ್ಟಾಪ್ ಬೀಳಬಹುದು. ಇದರಿಂದ ಮರುದಿನ ಬೆಳಗ್ಗೆ ನಿದ್ರೆ ಅಪೂರ್ಣ ಎನಿಸಬಹುದು. ಇದರಿಂದ ಆಯಾಸ, ಏಕಾಗ್ರತೆಯ ಕೊರತೆ ಮತ್ತು ಆತಂಕ ಕಾಡಬಹುದು. ಇಂತಹ ಅನುಭವಗಳು ನಿರಂತರವಾಗಿ ಮುಂದುವರಿದು ದಿನನಿತ್ಯದ ಕೆಲಸಗಳ ಮೇಲೂ ಪರಿಣಾಮ ಬೀರಿದರೆ, ವೈದ್ಯರ ಸಲಹೆ ಪಡೆಯುವುದು ಸೂಕ್ತ,(ಮಾಹಿತಿ ಸಂಗ್ರಹ).