Almond Facts: ನಮ್ಮಲ್ಲಿ ಹಣ್ಣು-ತರಕಾರಿ ತಿನ್ನುವುದನ್ನು ರೂಢಿಸಿಕೊಳ್ಳಿ ಎಂದು ಹಲವರು ಕಿವಿಮಾತು ನೀಡ್ತಾರೆ. ಆದರೆ, ದೈನಂದಿನ ಕೆಲಸಗಳ ಜಂಜಾಟದಲ್ಲಿ ಅವುಗಳತ್ತ ತಿರುಗಿ ನೋಡಲು ಸಹ ನಮ್ಮಲ್ಲಿ ಸಮಯವಿಲ್ಲ ಎಂದು ಹೇಳುವವರೇ ಹೆಚ್ಚು. ಪೌಷ್ಟಿಕಾಂಶಗಳ ಆಗರ ಎನ್ನಲಾದ ಡ್ರೈಫ್ರೂಟ್ಸ್ಗಳ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುವುದರ ಜತೆಗೆ ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಪೈಕಿ ಬಾದಾಮಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂಬ ಮಾತಿದೆ! ಇದು ನಿಜವೇ? ದಿನನಿತ್ಯ ಬಾದಾಮಿ ತಿಂದ್ರೆ ತೂಕ ಇಳಿಯುತ್ತಾ? ಎಂಬ ಪ್ರಶ್ನೆ, ಗೊಂದಲಕ್ಕೆ ಹೀಗಿದೆ ನೋಡಿ ಉತ್ತರ.
ಬಾದಾಮಿ ಹೃದಯಕ್ಕೆ ಆರೋಗ್ಯಕರವಾದ ಗುಣಗಳಿಗೆ ಹೆಸರುವಾಸಿಯಾಗಿದೆ. ವಿಟಮಿನ್ ಇ, ಫೈಬರ್, ಪ್ರೋಟೀನ್, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್‌ನಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿವೆ ಎಂದು ವೈದ್ಯರು ಹೇಳುತ್ತಾರೆ. ಇವು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಬಾದಾಮಿಯಲ್ಲಿ ಕೊಬ್ಬು ಅಧಿಕವಾಗಿದೆ ಮತ್ತು ಅವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಎಂಬುದು ಮತ್ತೊಂದು ಮಾತು.
ಬಾದಾಮಿ ಶೂನ್ಯ ಕೊಲೆಸ್ಟ್ರಾಲ್ ಸಸ್ಯಾಹಾರಿ ಕೊಬ್ಬಿನ ಮೂಲವಾಗಿದೆ ಎಂದು ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಆರೋಗ್ಯಕರ ಕೊಬ್ಬುಗಳಿವೆ ಎನ್ನಲಾಗಿದೆ. ಎಲ್ಲ ಕೊಬ್ಬುಗಳು ಕೆಟ್ಟದ್ದಲ್ಲ ಎಂಬ ಸಂಗತಿ ಇಲ್ಲಿ ಗಮನಾರ್ಹ. ಮತ್ತು ದೇಹಕ್ಕೆ ಪ್ರತಿದಿನ ಕೆಲವು ಆರೋಗ್ಯಕರ ಕೊಬ್ಬುಗಳು ಅಗತ್ಯ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಬಾದಾಮಿಗಳು ಏಕಪರ್ಯಾಪ್ತ ಕೊಬ್ಬಿನಾಮ್ಲಗಳಿಂದ ಹೇರಳವಾಗಿದ್ದು, ಅವು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ.
ನೆನೆಸಿದ ಬಾದಾಮಿಯನ್ನು ತಿನ್ನುವುದು ಉತ್ತಮ ಎಂದು ಅನೇಕ ತಜ್ಞರು ಹೇಳುತ್ತಾರೆ. ಇನ್ನೂ ಕೆಲವರು, ಅದೇ ಬಾದಾಮಿಯನ್ನು ನೆನೆಸಿಡುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳ ಮಟ್ಟ ಕಡಿಮೆಯಾಗುತ್ತದೆ ಎನ್ನುತ್ತಾರೆ. ವಾಸ್ತವವಾಗಿ, ಅವುಗಳನ್ನು ಹಾಗೆಯೇ ಸೇವಿಸಿದ್ರೆ ಉತ್ತಮ. ಏಕೆಂದರೆ, ಒಂದು ಹಿಡಿ ಬಾದಾಮಿಯಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಇರುತ್ತದೆ. ಅವುಗಳನ್ನು ತಿನ್ನುವುದರಿಂದ ಬೇಗ ಹಾಗೂ ಅನಗತ್ಯ ಹಸಿವಾಗುವುದಿಲ್ಲ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಬಾದಾಮಿ ತಿನ್ನುವುದರಿಂದ LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ವೈದ್ಯಕೀಯ ತಜ್ಞರು ಹೇಳ್ತಾರೆ. ಅದೇ ಸಮಯದಲ್ಲಿ, ಅವು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಬಾದಾಮಿಯಲ್ಲಿ ಏಕಪರ್ಯಾಪ್ತ ಕೊಬ್ಬುಗಳು ಅಧಿಕವಾಗಿವೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ನಿಯಂತ್ರಗೊಳಿಸಲು ವಿಶೇಷವಾಗಿ ಸಹಾಯಕವಾಗಿವೆ ಎಂದು ಹೇಳಲಾಗಿದೆ. ಅವು ಹೃದಯಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಆಹಾರದ ನಾರಿನ ಉತ್ತಮ ಮೂಲ ಬಾದಾಮಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಆರೋಗ್ಯಕ್ಕೂ ಸಹಕಾರಿ. ಒಟ್ಟಾರೆ ಹೃದಯದ ಆರೋಗ್ಯಕ್ಕೆ ಬಾದಾಮಿ ಪ್ರಯೋಜನಕಾರಿ.
ಬಾದಾಮಿಯ ನಿಯಮಿತ ಸೇವನೆಯು ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ. ಅವು ಪೊಟ್ಯಾಸಿಯಮ್ ಅಂಶವನ್ನು ಹೊಂದಿರುತ್ತವೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾದಾಮಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ವಿಶೇಷವಾಗಿ ವಿಟಮಿನ್ ಇ. ಇದು ಹೃದಯ ಕಾಯಿಲೆಗೆ ಕಾರಣವಾಗುವ ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತದಿಂದ ಜೀವಕೋಶಗಳನ್ನು ರಕ್ಷಿಸುವಲ್ಲಿ ವಿಶೇಷವಾಗಿ ಸಹಾಯಕವಾಗಿದೆ. ಬಾದಾಮಿಯನ್ನು ಮಿತವಾಗಿ ಮಾತ್ರ ಸೇವಿಸುವುದು ಉತ್ತಮ. ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.