ಭಾರತೀಯರಾದ ನಮಗೆ ಮುಂಜಾನೆ ಎದ್ದ ತಕ್ಷಣ ಒಂದು ಕಪ್ ಬಿಸಿ ಚಹಾ ಸಿಗದಿದ್ದರೆ ದಿನವೇ ಆರಂಭವಾಗುವುದಿಲ್ಲ. ಆದರೆ, ಇಂದು ನಾವು ಕುಡಿಯುವ ಸಾಂಪ್ರದಾಯಿಕ ಹಾಲು-ಸಕ್ಕರೆಯ ಚಹಾ ದೇಹಕ್ಕೆ ತಾತ್ಕಾಲಿಕ ಆಹ್ಲಾದ ನೀಡಿದರೂ, ದೀರ್ಘಾವಧಿಯಲ್ಲಿ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಇದಕ್ಕೆ ಅತ್ಯುತ್ತಮ ಪರ್ಯಾಯ ಹಾಗೂ ಆರೋಗ್ಯದ ದೃಷ್ಟಿಯಿಂದ ಅಮೃತ ಸಮಾನವಾಗಿರುವುದು ಆರೋಗ್ಯವರ್ಧಕ ಚಹಾಗಳು. ಗಿಡಮೂಲಿಕೆ, ಸಾಂಬಾರ ಪದಾರ್ಥ ಮುಂತಾದವುಗಳಿಂದ ತಯಾರಾಗುವ ಈ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮನಸ್ಸಿಗೂ ನೆಮ್ಮದಿ ನೀಡುತ್ತದೆ. ದಿನಚರಿಯಲ್ಲಿ ಅಳವಡಿಸಿಕೊಳ್ಳಬಹುದಾದ ಪ್ರಮುಖ ಆರೋಗ್ಯವರ್ಧಕ ಚಹಾಗಳ ವೆರೈಟಿ, ಅವುಗಳ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನದ ವಿವರ ಇಲ್ಲಿದೆ.
ಒತ್ತಡ ನಿವಾರಣೆಗೆ ಸೇವಂತಿ ಟೀ
ಇಂದಿನ ಇಂಟರ್ನೆಟ್ ಯುಗದ ಅತಿ ದೊಡ್ಡ ಸಮಸ್ಯೆ ಎಂದರೆ ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ. ಇದಕ್ಕೆ ಶಾಮೊಮೈಲ್ (ಸೇವಂತಿ) ಹೂವಿನ ಚಹಾ ಅತ್ಯುತ್ತಮ ಮದ್ದು. ಸೇವಂತಿ ಹೂವುಗಳಲ್ಲಿ ನರಗಳನ್ನು ಶಾಂತಗೊಳಿಸುವ ಗುಣವಿದೆ. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದರೆ ಗಾಢವಾದ ಮತ್ತು ನೆಮ್ಮದಿಯ ನಿದ್ರೆ ಬರುತ್ತದೆ. ಇದು ಮುಟ್ಟಿನ ಸಮಯದ ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ.
ತಯಾರಿಸುವ ವಿಧಾನ: ಒಣಗಿದ ಸೇವಂತಿ ಹೂವುಗಳನ್ನು ಬಿಸಿ ನೀರಿಗೆ ಹಾಕಿ 5 ನಿಮಿಷ ನೆನೆಯಲು ಬಿಡಿ. ನಂತರ ಸೋಸಿ, ಹದವಾದ ಬಿಸಿಯಿರುವಾಗಲೇ ಕುಡಿಯಿರಿ.
ಜೀರ್ಣಕ್ರಿಯೆ ಸುಧಾರಿಸಲು ಜೀರಿಗೆ-ಕೊತ್ತಂಬರಿ-ಸೋಂಪು ಚಹಾ
ಇದನ್ನು ತ್ರಿದೋಷಶಾಮಕ ಚಹಾ ಎಂದೂ ಕರೆಯುತ್ತಾರೆ. ಅಡುಗೆಮನೆಯ ಮೂರು ಮುಖ್ಯ ಸಾಂಬಾರ ಪದಾರ್ಥಗಳ ಮಿಶ್ರಣ ಇದಾಗಿದೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಪಚನ ಮುಂತಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಇದು ತಕ್ಷಣ ಪರಿಹಾರ ನೀಡುತ್ತದೆ. ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.
ತಯಾರಿಸುವ ವಿಧಾನ: ಸಮಪ್ರಮಾಣದ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಸೋಂಪನ್ನು ತೆಗೆದುಕೊಂಡು ನೀರಿಗೆ ಹಾಕಿ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಈ ಕಷಾಯವನ್ನು ದಿನದ ಯಾವುದೇ ಅವಧಿಯಲ್ಲಾದರೂ ಕುಡಿಯಬಹುದು.
ರೋಗನಿರೋಧಕ ಶಕ್ತಿಗೆ ಶುಂಠಿ-ತುಳಸಿ ಚಹಾ
ಭಾರತೀಯ ಮನೆಮದ್ದುಗಳಲ್ಲಿ ಶುಂಠಿ ಮತ್ತು ತುಳಸಿಗೆ ಅಗ್ರಸ್ಥಾನವಿದೆ. ಹವಾಮಾನ ಬದಲಾದಾಗ ಕಾಡುವ ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ ಇದು ರಾಮಬಾಣ. ತುಳಸಿಯಲ್ಲಿ ಆಂಟಿವೈರಲ್ ಗುಣಗಳಿದ್ದರೆ, ಶುಂಠಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಗಂಟಲು ನೋವಿಗೂ ತಕ್ಷಣದ ಉಪಶಮನ ನೀಡುತ್ತದೆ.
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಹಾಕಿ. ಅದಕ್ಕೆ ಜಜ್ಜಿದ ಹಸಿ ಶುಂಠಿ ಮತ್ತು 5-6 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಒಂದು ಕಪ್‌ನಷ್ಟಾದಾಗ ಸೋಸಿಕೊಂಡು, ಸ್ವಲ್ಪ ಜೇನುತುಪ್ಪ ಅಥವಾ ನಿಂಬೆ ರಸ ಸೇರಿಸಿ ಕುಡಿಯಿರಿ.
ಚಯಾಪಚಯ ಕ್ರಿಯೆಯ ವೇಗವರ್ಧಕ ಹಸಿರು ಚಹಾ
ತೂಕ ಇಳಿಸಿಕೊಳ್ಳಲು ಬಯಸುವವರ ಮೊದಲ ಆಯ್ಕೆ ಗ್ರೀನ್ ಟೀ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ‘ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್’ (ಇಜಿಸಿಜಿ) ಎಂಬ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಇದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೂ ಇದು ಉತ್ತಮ.
ತಯಾರಿಸುವ ವಿಧಾನ: ನೀರನ್ನು ಚೆನ್ನಾಗಿ ಕುದಿಸಿ ಉರಿಯಿಂದ ಕೆಳಗಿಳಿಸಿ. ಅದಕ್ಕೆ ಗ್ರೀನ್ ಟೀ ಎಲೆಗಳು ಅಥವಾ ಟೀ ಬ್ಯಾಗ್ ಹಾಕಿ 2-3 ನಿಮಿಷ ಮುಚ್ಚಿಡಿ. ಎಲೆಗಳನ್ನು ಹೆಚ್ಚು ಹೊತ್ತು ಕುದಿಸಬೇಡಿ, ಚಹಾ ಕಹಿಯಾಗುತ್ತದೆ. ನಂತರ ಸೋಸಿ ಕುಡಿಯಿರಿ.
ನೈಸರ್ಗಿಕ ಡಿಟಾಕ್ಸ್ ಲೆಮನ್‌ಗ್ರಾಸ್ ಚಹಾ
ಲೆಮನ್‌ಗ್ರಾಸ್ (ನಿಂಬೆಹುಲ್ಲು) ಅದ್ಭುತ ಸುಗಂಧವನ್ನು ಹೊಂದಿರುವಂಥದ್ದು. ಪ್ರಕೃತಿ ನಮಗೆ ನೀಡಿರುವ ಅತ್ಯುತ್ತಮ ಡಿಟಾಕ್ಸ್ ಏಜೆಂಟ್ ಇದು. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು (ಟಾಕ್ಸಿನ್ಸ್) ಹೊರಹಾಕಲು ಸಹಾಯ ಮಾಡುತ್ತದೆ. ಕಿಡ್ನಿ ಮತ್ತು ಲಿವರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.
ತಯಾರಿಸುವ ವಿಧಾನ: ಲೆಮನ್‌ಗ್ರಾಸ್‌ನ ಸಣ್ಣ ತುಂಡುಗಳನ್ನು ನೀರಿಗೆ ಹಾಕಿ 5-7 ನಿಮಿಷ ಚೆನ್ನಾಗಿ ಕುದಿಸಿ. ಈ ಚಹಾಕ್ಕೆ ಕೊಂಚ ಪುದೀನಾ ಎಲೆಗಳನ್ನು ಸೇರಿಸಿದರೆ ಇದರ ಸುವಾಸನೆ ಮತ್ತು ರುಚಿ ದುಪ್ಪಟ್ಟಾಗುತ್ತದೆ.
ಸೌಂದರ್ಯ, ಆರೋಗ್ಯಕ್ಕೆ ದಾಸವಾಳದ ಟೀ
ಕೆಂಪು ದಾಸವಾಳದ ಹೂವುಗಳಿಂದ ತಯಾರಾಗುವ ಈ ಚಹಾ ನೋಡಲು ಎಷ್ಟು ಆಕರ್ಷಕವೋ, ಆರೋಗ್ಯಕ್ಕೂ ಅಷ್ಟೇ ಹಿತಕರ. ಇದು ಹುಳಿ ಮತ್ತು ಸಿಹಿಯ ಮಿಶ್ರಣದ ರುಚಿ ಹೊಂದಿರುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಕೃತ್ತಿನ ಆರೋಗ್ಯವನ್ನೂ ಕಾಪಾಡುತ್ತದೆ.
ತಯಾರಿಸುವ ವಿಧಾನ: ಒಣಗಿದ ದಾಸವಾಳದ ದಳಗಳನ್ನು ಕುದಿಯುವ ನೀರಿಗೆ ಹಾಕಿ ಸ್ಟವ್ ಆಫ್ ಮಾಡಿ. ನೀರು ಗಾಢ ಕೆಂಪು ಬಣ್ಣಕ್ಕೆ ತಿರುಗಿದಾಗ ಸೋಸಿಕೊಳ್ಳಿ. ಇದನ್ನು ಬಿಸಿಯಾಗಿಯೂ ಕುಡಿಯಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟು ಐಸ್ಡ್ ಟೀ ತರಹವೂ ಸವಿಯಬಹುದು.
ಪಾಲಿಸಬೇಕಾದ ಅಂಶಗಳು
ಈ ಚಹಾಗಳಿಗೆ ಬಿಳಿ ಸಕ್ಕರೆಯನ್ನು ಬಳಸಬೇಡಿ. ಬದಲಿಗೆ ಜೇನುತುಪ್ಪ, ಬೆಲ್ಲ ಅಥವಾ ಜ್ಯೇಷ್ಠಮಧುವನ್ನು ಬಳಸಿ.
ತೂಕ ಇಳಿಕೆಗೆ ಗ್ರೀನ್ ಟೀ ಬೆಳಗ್ಗೆ ಅಥವಾ ಮಧ್ಯಾಹ್ನ ಒಳ್ಳೆಯದು. ನಿದ್ರೆಯ ಸಮಸ್ಯೆಗೆ ಶಾಮೊಮೈಲ್ ಚಹಾ ರಾತ್ರಿ ಸೇವಿಸುವುದು ಸೂಕ್ತ.
ಅತಿಯಾದರೆ ಅಮೃತವೂ ವಿಷ ಅಲ್ಲವೇ? ಇವು ಆರೋಗ್ಯಕ್ಕೆ ಒಳ್ಳೆಯದೆಂದು ದಿನಕ್ಕೆ 4-5 ಕಪ್ ಕುಡಿಯಬೇಡಿ. ದಿನಕ್ಕೆ 2 ಕಪ್ ಅತ್ಯಂತ ಸೂಕ್ತ ಪ್ರಮಾಣ.
ಆಂಟಿ ಏಜಿಂಗ್ ಸೀಕ್ರೆಟ್ ನೀಲಿ ಚಹಾ (ಬಟರ್‌ಫ್ಲೈ ಪೀ ಟೀ)
ಶಂಖಪುಷ್ಪ ಹೂವುಗಳಿಂದ ತಯಾರಾಗುವ ಈ ಚಹಾ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಇದರಲ್ಲಿ ಗರಿಷ್ಠ ಮಟ್ಟದ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಿದುಳಿನ ಕಾರ್ಯಕ್ಷಮತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ತಯಾರಿಸುವ ವಿಧಾನ: ಬಿಸಿ ನೀರಿಗೆ 3-4 ಒಣಗಿದ ಶಂಖಪುಷ್ಪ ಹೂವುಗಳನ್ನು ಹಾಕಿದರೆ ನೀರು ಸುಂದರವಾದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಒಂದೆರಡು ಹನಿ ನಿಂಬೆ ರಸ ಹಿಂಡಿದರೆ, ನೀಲಿ ಬಣ್ಣವು ತಕ್ಷಣವೇ ನೇರಳೆ ಬಣ್ಣಕ್ಕೆ ಬದಲಾಗುವ ಮ್ಯಾಜಿಕ್ ನೋಡಬಹುದು!
ಸೌಂದರ್ಯ, ಆರೋಗ್ಯಕ್ಕೆ ದಾಸವಾಳದ ಟೀ
ಕೆಂಪು ದಾಸವಾಳದ ಹೂವುಗಳಿಂದ ತಯಾರಾಗುವ ಈ ಚಹಾ ನೋಡಲು ಎಷ್ಟು ಆಕರ್ಷಕವೋ, ಆರೋಗ್ಯಕ್ಕೂ ಅಷ್ಟೇ ಹಿತಕರ. ಇದು ಹುಳಿ ಮತ್ತು ಸಿಹಿಯ ಮಿಶ್ರಣದ ರುಚಿ ಹೊಂದಿರುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಕೃತ್ತಿನ ಆರೋಗ್ಯವನ್ನೂ ಕಾಪಾಡುತ್ತದೆ.
ತಯಾರಿಸುವ ವಿಧಾನ: ಒಣಗಿದ ದಾಸವಾಳದ ದಳಗಳನ್ನು ಕುದಿಯುವ ನೀರಿಗೆ ಹಾಕಿ ಸ್ಟವ್ ಆಫ್ ಮಾಡಿ. ನೀರು ಗಾಢ ಕೆಂಪು ಬಣ್ಣಕ್ಕೆ ತಿರುಗಿದಾಗ ಸೋಸಿಕೊಳ್ಳಿ. ಇದನ್ನು ಬಿಸಿಯಾಗಿಯೂ ಕುಡಿಯಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟು ಐಸ್ಡ್ ಟೀ ತರಹವೂ ಸವಿಯಬಹುದು.