- ಏನಿದು ಫ್ರಿಡ್ಜ್ನಲ್ಲಿ ಎ4 ಪೇಪರ್ ಟೆಸ್ಟ್?
- ಈ ರೀತಿ ಮಾಡುವುದರಿಂದ ಏನು ಪ್ರಯೋಜನ?
A4 Size Paper: ಜೂನ್ ಮುಗಿದು ಜುಲೈ ಆರಂಭಗೊಂಡರೂ ವಾಡಿಕೆಯಂತೆ ಮಳೆಯಾಗದೆ ಇರುವುದು ಸದ್ಯ ದೇಶದಲ್ಲಿ ಬರಗಾಲದ ಭೀತಿ ಎದುರಾಗಿದೆ. ಮಳೆಯ ಕೊರತೆಯಿಂದಾಗಿ ಮಳೆಗಾಲದಲ್ಲಿಯೂ ಬಿಸಿಲ ಬೇಗೆ ಹೆಚ್ಚಾಗಿ, ಮನೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳಾದ ಫ್ಯಾನ್, ಎಸಿ ಮತ್ತು ಫ್ರಿಡ್ಜ್‌ಗಳು ದಿನಪೂರ್ತಿ ಕೆಲಸ ಮಾಡುವಂತಾಗಿದೆ.
ವಾತಾವರಣದಲ್ಲಿ ಉಷ್ಣಾಂಶ ಏರಿದಾಗ ಫ್ರಿಡ್ಜ್ ಒಳಗಿನ ತಂಪನ್ನು ಕಾಯ್ದುಕೊಳ್ಳಲು ಕಂಪ್ರೆಸರ್ ಹೆಚ್ಚಿನ ಕೆಲಸ ಮಾಡುತ್ತದೆ. ಇದು ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾತ್ರವಲ್ಲ, ಫ್ರಿಡ್ಜ್ ಬೇಗನೆ ಕೆಟ್ಟುಕೂರಲು ಕಾರಣವಾಗುತ್ತದೆ. ಇಂತಹ ಸಮಯಗಳಲ್ಲಿ ಫ್ರಿಡ್ಜ್ ಸರಿಯಾಗಿ ಕೆಲಸ ಮಾಡುತ್ತಿದೆಯೇ? ಇಲ್ಲವೇ? ಅನ್ನೋದನ್ನು ಖಚಿತಪಡಿಸಿಕೊಳ್ಳಲು ಇದೊಂದು ಸಿಂಪಲ್ ಪೇಪರ್ ಟೆಸ್ಟ್ ಸಾಕು ಎಂದು ಅಮೆರಿಕದ ಇಂಧನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಏನಿದು ಪೇಪರ್ ಟೆಸ್ಟ್?
ಒಂದು ಸಾಮಾನ್ಯ A4 ಅಳತೆಯ ಖಾಲಿ ಹಾಳೆಯನ್ನು ಫ್ರಿಡ್ಜ್ ಬಾಗಿಲನ್ನು ತೆರೆದು, ಆ ಪೇಪರ್‌ನ ಅರ್ಧ ಭಾಗ ಒಳಗಡೆ ಮತ್ತು ಅರ್ಧ ಭಾಗ ಹೊರಗಡೆ ಇರುವಂತಿಟ್ಟು, ಬಾಗಿಲನ್ನು ಬಿಗಿಯಾಗಿ ಮುಚ್ಚಿ. ಈಗ ಆ ಪೇಪರ್ ಅನ್ನು ಹೊರಗಡೆ ಎಳೆಯಲು ಪ್ರಯತ್ನಿಸಿ. ಈ ವೇಳೆ, ಶೀಟ್ ಏನಾದರೂ ಗಟ್ಟಿಯಾಗಿ ಸಿಕ್ಕಿಹಾಕಿಕೊಂಡಿದ್ದು, ಎಳೆಯಲು ಕಷ್ಟ ಎಂದಾದರೆ ನಿಮ್ಮ ಫ್ರಿಡ್ಜ್‌ನ ಡೋರ್ ಸೀಲ್ (ರಬ್ಬರ್) ಚೆನ್ನಾಗಿದೆ ಎಂದರ್ಥ.
ಒಂದು ವೇಳೆ ಪೇಪರ್ ಯಾವುದೇ ಸುಲಭವಾಗಿ ಹೊರಬಂದರೆ, ಬಾಗಿಲಿನ ರಬ್ಬರ್ ಲೂಸ್ ಆಗಿದೆ ಎಂಬುದು ದೃಢ. ಬಾಗಿಲಿನ ರಬ್ಬರ್ ಸಡಿಲವಾದರೆ ಒಳಗಿನ ತಂಪಾದ ಗಾಳಿ ಹೊರಹೋಗಿ, ಹೊರಗಿನ ಬಿಸಿ ಗಾಳಿ ಒಳಗೆ ಬರುತ್ತದೆ. ಇದರಿಂದ ಫ್ರಿಡ್ಜ್ ಒಳಗಿನ ಉಷ್ಣಾಂಶ ಸರಿದೂಗಿಸಲು ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಇದರ ಪರಿಣಾಮವಾಗಿ, ಕರೆಂಟ್ ಬಿಲ್ ನೀವು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ ಮತ್ತು ಫ್ರಿಡ್ಜ್‌ನಲ್ಲಿಟ್ಟ ಹಾಲು, ತರಕಾರಿಗಳು ಬೇಗನೆ ಕೆಡುತ್ತವೆ.
ಸಮಸ್ಯೆ ಕಾಣಿಸಿದರೆ ಏನು ಪರಿಹಾರ?
ಪೇಪರ್ ಟೆಸ್ಟ್‌ನಲ್ಲಿ ರಬ್ಬರ್ ಲೂಸ್ ಇರುವುದು ಕಂಡುಬಂದ ತಕ್ಷಣ ಈ ಫ್ರಿಡ್ಜ್ ಕಥೆ ಮುಗಿತು! ಈಗ ಹೊಸ ಫ್ರಿಡ್ಜ್ ಖರೀದಿಸೋಣ ಎಂದು ಮುಂದಾಗಬೇಡಿ. ಬದಲಿಗೆ ಸ್ವತಃ ನೀವೇ ಮಾಡಿಕೊಳ್ಳಬಹುದಾದ ಕೆಲವು ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿ.
ರಬ್ಬರ್ ಮೇಲಿನ ಜಿಡ್ಡು, ಕೊಳಕು
ಕೆಲವೊಮ್ಮೆ ರಬರ್ ಮೇಲೆ ಜಿಡ್ಡು, ಕೊಳೆ ಕುಳಿತುಕೊಳ್ಳುವ ಕಾರಣ ಬಾಗಿಲು ಸರಿಯಾಗಿ ಮುಚ್ಚುವುದಿಲ್ಲ. ಸ್ವಲ್ಪ ಬಿಸಿ ನೀರು ಮತ್ತು ಡಿಶ್‌ವಾಶಿಂಗ್ ಲಿಕ್ವಿಡ್ ಬಳಸಿ ಕೊಳೆಯಾದ ರಬರ್ ಅನ್ನು ಚೆನ್ನಾಗಿ ಒರೆಸಿ. ಅಕಸ್ಮಾತ್ ಸ್ವಲ್ಪ ಗಟ್ಟಿಯಾಗಿದ್ದರೆ, ಹೇರ್ ಡ್ರೈಯರ್ ಸಹಾಯದಿಂದ ಸ್ವಲ್ಪ ಬಿಸಿ ನೀಡಿ. ಇದರಿಂದ ರಬ್ಬರ್ ಮೃದುವಾಗಿ ಮತ್ತೆ ಬಾಗಿಲಿಗೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ.
ಸಾಮಾನ್ಯವಾಗಿ 15 ವರ್ಷಕ್ಕಿಂತ ಹಳೆಯದಾದ ಫ್ರಿಡ್ಜ್‌ಗಳು ಶೇ.20ರಷ್ಟು ಹೆಚ್ಚು ವಿದ್ಯುತ್ ಬಳಸಿಕೊಳ್ಳುತ್ತದೆ. ಆದ್ದರಿಂದ, ಕೆಲವು ತಿಂಗಳಿಗೊಮ್ಮೆ, ಮುಖ್ಯವಾಗಿ ಬೇಸಿಗೆ ಕಾಲ ಆರಂಭಕ್ಕೂ ಮುನ್ನ ಈ 30 ಸೆಕೆಂಡ್‌ನ ಪೇಪರ್ ಟೆಸ್ಟ್ ಮಾಡುವುದನ್ನು ತಿಳಿದರೆ, ಅಗತ್ಯ ಮೀರಿ ಖರ್ಚಾಗುವ ಹಣ ಮತ್ತು ವಿದ್ಯುತ್ ಅನ್ನು ಉಳಿಸಬಹುದು,(ಏಜೆನ್ಸೀಸ್).