ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ:
ಆಚಾರ್ಯಸ್ಯ ಪ್ರಭಾವೇನ ಶಿಷ್ಯಭವತಿ ಸುಶಿಕ್ಷಿತ:
ಎಂಬ ನುಡಿಯಂತೆ ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ತರಗತಿ ಕೋಣೆಯಲ್ಲಿ ದೇಶದ ಭವಿಷ್ಯ ನಿರ್ವಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಬೋಧನೆಯ ಪ್ರಕ್ರಿಯೆಯಲ್ಲಿ ಶಿಕ್ಷಕರು ಕೇವಲ ಪಠ್ಯ ವಿಷಯದ ಮಾಹಿತಿಯನ್ನು ತುಂಬದೇ ಕಲಿಕೆಗೆ ಪೂರಕವಾಗುವ ಹೊಸ ಚಿಂತನೆ,ಆಲೋಚನೆ ಬೆಳೆಸಿಕೊಳ್ಳುವುದು ಅತಿ ಅಗತ್ಯ. ಇಂತಹ ಹೊಸ ಆಲೋಚನೆಯೊಂದಿಗೆ ಕೈ ಬರಹ ನಿಘಂಟು ರಚಿಸುವ ಮೂಲಕ ವಿನೂತನ ಪ್ರಯತ್ನ ಪ್ರಯೋಗ ಮಾಡಿರುವವರು ಕ್ರಿಯಾಶೀಲ ಶಿಕ್ಷಕಿ ಅನಿತಾ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತುಪ್ಪದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ಬಿ. ಅನಿತಾ ಪ್ರಾಥಮಿಕ ಶಾಲೆಯ 5ರಿಂದ 7ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ವಿಷಯಕ್ಕೆ ನಿಘಂಟು ರಚಿಸುವ ಮೂಲಕ ವಿನೂತನ ಪ್ರಯೋಗ ಮಾಡಿದ್ದಾರೆ. ಪುಸ್ತಕದ ಅಂಗಡಿಗಳಲ್ಲಿ ನಿಘಂಟುಗಳು ಲಭ್ಯವಿದ್ದರೂ ಅದರಲ್ಲಿ ಸಾವಿರಾರು ಪದಗಳು ಇರುತ್ತವೆ. ಪ್ರಾಥಮಿಕ ಹಂತದ ಮಕ್ಕಳಿಗೆ ಇದರಲ್ಲಿ ಅರ್ಥ ಹುಡುಕುವುದು ಕಷ್ಟವಾಗಬಹುದು. ಒಂದು ತರಗತಿಯಲ್ಲಿ ಮಕ್ಕಳ ಕಲಿಕೆಯಲ್ಲಿ ಭಿನ್ನತೆಯಿದ್ದು ವೇಗವಾಗಿ ಕಲಿಯುವವರು, ನಿಧಾನವಾಗಿ ಕಲಿಯುವವರು ಇರುತ್ತಾರೆ. ಎಲ್ಲಾ ಮಕ್ಕಳು ಸುಲಭವಾಗಿ ಅರ್ಥ ಹುಡುಕುವ ಮತ್ತು ಸಮಯದ ಉಳಿತಾಯದ ದೃಷ್ಟಿಯಿಂದ ಈ ನಿಘಂಟು ರಚಿಸಲಾಗಿದೆ.
5ರಿಂದ 7ರವರೆಗಿನ 3 ತರಗತಿಗಳಲ್ಲಿ ಎಲ್ಲಾ ಪಾಠಗಳಲ್ಲಿ ಬರುವ ಹೊಸ ಪದಗಳ ಅರ್ಥಗಳನ್ನು ನಿಘಂಟಿನಲ್ಲಿ ಬರೆಯಲಾಗಿದೆ. ತರಗತಿಗೆ ಅನುಗುಣವಾಗಿ ಸೀಮಿತ ಪದಗಳ ಅರ್ಥಗಳು ಬೇಕಾಗಿರುವುದರಿಂದ ಪ್ರತಿ ಪಾಠಕ್ಕೆ ನಾವೇ ನಿಘಂಟು ರಚಿಸಿಕೊಂಡರೆ ಬೋಧನೆ ಹಾಗೂ ಕಲಿಕೆಗೆ ನೆರವಾಗುತ್ತದೆ. ಮತ್ತು ಹಣವೂ ಉಳಿತಾಯವಾಗುತ್ತದೆ.
ನಿಘಂಟು ರಚನೆಗೆ ಪ್ರೇರಣೆ
ನಿಘಂಟು ರಚನೆಗೆ ಮಕ್ಕಳೇ ಪ್ರೇರಣೆ ಎನ್ನುವ ಅನಿತಾ ನಾವು ಬೋಧನೆಯಲ್ಲಿ ಮಕ್ಕಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಅವರ ಕಲಿಕಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾದ ಚಟುವಟಿಕೆ ಆಯೋಜಿಸಲು ಹೊಸ ಚಿಂತನೆಗಳು ಬೆಳೆಯುತ್ತವೆ. ಈ ಹಿಂದೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ವಿಷಯಕ್ಕೆ ಕೈ ಬರಹ ನಿಘಂಟು ರಚಿಸಿದ್ದೆ. ಇದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ತಮ ಫಲ ಕೊಟ್ಟಿದ್ದರಿಂದ ಈಗ ಇಂಗ್ಲಿಷ್ ಭಾಷೆಯಲ್ಲಿ ನಿಘಂಟು ರಚಿಸಿದ್ದೇನೆ. ಡ್ರಾಯಿಂಗ್ ಶೀಟ್ನಲ್ಲಿ ‘ಎ’ಯಿಂದ ‘ಝುಡ್’ವರೆಗೆ ಪ್ರತಿ ಪಾಠದಲ್ಲಿ ಬರುವ ಹೊಸ ಪದಗಳನ್ನು ಆಯ್ದುಕೊಂಡು ಅದಕ್ಕೆ ಅರ್ಥಸಹಿತ ಬರೆಯಲಾಗಿದೆ. ತರಗತಿಯಲ್ಲಿ ಕಪ್ಪುಹಲಗೆ ಪಕ್ಕದಲ್ಲೇ ಚಾರ್ಟ್ ನೇತು ಹಾಕಲಾಗಿದೆ. ಪ್ರತಿ ತರಗತಿಯಲ್ಲಿ ಗೋಡೆಗೆ ತೂಗು ಹಾಕಿರುವುದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಅಡಿಪಾಯ ಹಾಕಬೇಕಾಗಿರುವುದರಿಂದ ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗಿ ಕಾರ್ಯ ನಿರ್ವಹಿಸಬೇಕು ಎನ್ನುತ್ತಾರೆ ಶಿಕ್ಷಕಿ ಅನಿತಾ.
ಶಿಕ್ಷಕಿಗೊಲಿದ ಅವಾರ್ಡ್
ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು ಎಂಬ ಡಾ. ಶಿವಾನಂದ ಶಿವಾಚಾರ್ಯ ಶ್ರೀಗಳ ನುಡಿಯಂತೆ ಕಾಯರ್å ನಿರ್ವಹಿಸುತ್ತಿದ್ದಾರೆ ಅನಿತಾ. ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಇವರು, ಹೊಸ ಆಲೋಚನೆಯೊಂದಿಗೆ ಹೊಸ ರೀತಿಯ ಪ್ರಯೋಗ ಕೈಗೊಳ್ಳುತ್ತಿದ್ದಾರೆ. ಇವರ ಹೊಸ ಐಡಿಯಾ ಗುರುತಿಸಿ ನವದೆಹಲಿಯ ಅರಬಿಂದೋ ಸೊಸೈಟಿ ರೂಪಾಂತರ ಸಂಸ್ಥೆಯಾದ ‘ಝೀರೋ ಇನ್ವೆಸ್ಟ್ಮೆಂಟ್ ಇನ್ನೋವೇಷನ್ ಫಾರ್ ಎಜುಕೇಶನ್ ಇನಿಷಿಯೇಟಿವ್’ ವತಿಯಿಂದ ‘ಇನ್ನೋವೇಟಿವ್ ಟೀಚರ್ ಅವಾರ್ಡ್-2020’ ಪ್ರಶಸ್ತಿ ನೀಡಲಾಗಿದೆ. ಈಚೆಗೆ ದೆಹಲಿಯಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ನುಲೇನೂರು ಬಸವರಾಜು ಉಪನ್ಯಾಸಕರು, ಚಿತ್ರದುರ್ಗ