ಬೀದಿಯಲ್ಲಿ ನಿಂತು ಒಂದು ಚಿಕ್ಕ ಕಲ್ಲನ್ನು ಮೇಲೆ ಹಾರಿಸಿದರೆ ಅದು ಸೊಂಟ ನೋವು ಇರುವವರ ಮೇಲೆ ಬೀಳುತ್ತದೆ ಎಂಬಷ್ಟರ ಮಟ್ಟಿಗೆ ಸೊಂಟ ನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಸೊಂಟ ನೋವಿನ ತೊಂದರೆ ಇಷ್ಟು ಸಾಮಾನ್ಯವಾಗಲು ಬಹಳ ಕಾರಣಗಳಿವೆ. ಆದರೆ ವಿಶೇಷವಾಗಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಮುಖ್ಯ ಕಾರಣ. ಬೇರೆ ಬೇರೆ ರೋಗಗಳಿಂದಲೂ ಸೊಂಟ ನೋವು ಬರುತ್ತದೆಯಾದರೂ ಸಾಮಾನ್ಯವಾಗಿ ಕಂಡುಬರುವ ಡಿಸ್ಕ್ ಮತ್ತು ನರಕ್ಕೆ ಸಂಬಂಧಿಸಿದ ಸೊಂಟನೋವಿನ ಬಗ್ಗೆ ಮಾತ್ರ ಇಂದು ನಾವು ತಿಳಿದುಕೊಳ್ಳೋಣ. ತುಂಬಾ ಹೊತ್ತು ಕುಳಿತಲ್ಲಿಯೇ ಕುಳಿತಿರುವುದು, ಅತಿಯಾಗಿ ಭಾರವನ್ನು ಎತ್ತುವುದು, ಅತಿ ಕಡಿಮೆ ಅಥವಾ ಅತಿ ಹೆಚ್ಚು ವ್ಯಾಯಾಮ ಮಾಡುವುದು ಮತ್ತು ಮಾನಸಿಕ ಒತ್ತಡಗಳು ಇತ್ತೀಚೆಗೆ ಸೊಂಟ ನೋವು ತುಂಬಾ ಹೆಚ್ಚಾಗಲು ಕಾರಣವಾಗಿವೆ. ಜೊತೆಗೆ ಜಂಕ್ ಫುಡ್, ಸಕ್ಕರೆ ಮತ್ತು ಪಾಲಿಶ್ ಮಾಡಿದ ಅಕ್ಕಿ ಮುಂತಾದ ಪೋಷಕಾಂಶಗಳ ಕೊರತೆ ಇರುವ ಆಹಾರ ಪದಾರ್ಥಗಳ ಸೇವನೆಯ ಕಾರಣದಿಂದ ಮೂಳೆ, ಡಿಸ್ಕ್ ಮಾಂಸಖಂಡಗಳು ಮತ್ತು ನರಗಳಿಗೆ ಸರಿಯಾಗಿ ಬಲ ಸಿಗದೇ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ.
ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಕೊಬ್ಬನ್ನು ಸೇವಿಸದೇ ಇರುವುದು, ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು, ಸಿ, ಡಿ ಮತ್ತು ಕೆ ವಿಟಮಿನ್ಗಳ ಕೊರತೆ ನಮ್ಮ ಆಹಾರದಲ್ಲಿ ಇದ್ದಾಗ ಸೊಂಟ ನೋವಿನ ಸಮಸ್ಯೆ ಸುಲಭವಾಗಿ ಬರುತ್ತದೆ. ಹಾಗಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವಂತೆ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯವಾದದ್ದು. ನಿತ್ಯವೂ ಯೋಗಾಸನ ಅಥವಾ ಬೆನ್ನನ್ನು ಸುಸ್ಥಿತಿಯಲ್ಲಿಡುವ ವ್ಯಾಯಾಮಗಳನ್ನು ಮಾಡುವುದರಿಂದ ಸೊಂಟ ನೋವು ಅಥವಾ ಡಿಸ್ಕ್ ಸಮಸ್ಯೆಗಳನ್ನು ತಡೆಯಬಹುದು. ಕೆಲಸ ಮಾಡುವಾಗ ಅಥವಾ ಬೇರೆ ಯಾವುದೇ ಕಾರಣಕ್ಕೆ ಕುಳಿತಿರುವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸೊಂಟದ ಮೇಲಿನ ಒತ್ತಡ ತುಂಬಾ ಕಡಿಮೆ ಆಗುತ್ತದೆ. ಕೆಲಸದ ಮಧ್ಯದಲ್ಲಿ ಆಗಾಗ ನಿಂತು ಹಿಂದೆ ಬಗ್ಗುವ ವ್ಯಾಯಾಮ ಮಾಡಬೇಕು. ಭಾರ ಎತ್ತುವಾಗ ಮುಂದೆ ಬಗ್ಗಿ ಭಾರ ಎತ್ತಬಾರದು.
ತುದಿಗಾಲಲ್ಲಿ ಕುಳಿತು ವಸ್ತುವನ್ನು ದೇಹದ ಸಮೀಪಕ್ಕೆ ಇಟ್ಟುಕೊಂಡು ನಿಧಾನವಾಗಿ ಮೇಲೇಳಬೇಕು. ಏಳುವಾಗ ದೇಹವನ್ನು ನೇರವಾಗಿಟ್ಟುಕೊಳ್ಳಬೇಕು. ಚಿಕ್ಕಪುಟ್ಟ ಸೊಂಟ ನೋವು ಇದ್ದಾಗ ಒಂದು ಮ್ಯಾಟ್ ಅಥವಾ ಕಂಬಳಿಯ ಮೇಲೆ ಬೆನ್ನು ಕೆಳಗಿರುವಂತೆ ಮಲಗಿ ಸೊಂಟ ಮತ್ತು ಮಂಡಿಯಲ್ಲಿ 90 ಡಿಗ್ರಿ ಆಗುವಂತೆ ಕಾಲುಗಳನ್ನು ಬಗ್ಗಿಸಿ ಮಂಡಿಯ ಮುಂದಿನ ಭಾಗವನ್ನು ಕುರ್ಚಿಯ ಮೇಲೆ ಇಟ್ಟು ಆರಾಮವಾಗಿ ಹತ್ತರಿಂದ ಹದಿನೈದು ನಿಮಿಷ ಮಲಗಿಕೊಳ್ಳಬೇಕು ಇದರಿಂದ ಸೊಂಟದ ಡಿಸ್ಕ್ ಗಳಿಗೆ ಮತ್ತು ಅಲ್ಲಿಂದ ಹಾದು ಬರುವ ನರಗಳಿಗೆ ವಿಶ್ರಾಂತಿ ಸಿಕ್ಕು ನೋವು ಕಡಿಮೆಯಾಗುತ್ತದೆ. ಆದರೆ ಸೊಂಟ ನೋವು ಹೆಚ್ಚಾಗುತ್ತಿದ್ದರೆ ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್ ಹತ್ತಿರ ಹೋಗಿ ಸರಿಯಾದ ರೀತಿಯ ವ್ಯಾಯಾಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ತುಂಬಾ ಹೆಚ್ಚಾಗಿರದ ಸೊಂಟ ನೋವಿನ ಸಮಸ್ಯೆಗೆ ಆಯುರ್ವೆದ ಔಷಧಗಳು, ಸುಲಭವಾದ ವ್ಯಾಯಾಮಗಳು ಮತ್ತು ಸರಿಯಾದ ಜೀವನ ಶೈಲಿಯಿಂದ ಪರಿಹಾರ ಸಿಕ್ಕಿಬಿಡುತ್ತದೆ.
ಸೊಂಟ ನೋವು ಅತಿಯಾದಾಗ ಸಹಜವಾಗಿ ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ಸಲಹೆ ನೀಡುತ್ತಾರೆ. ಎಷ್ಟೋ ಜನರಲ್ಲಿ ಡಿಸ್ಕ್ ಜಾರಿ ನರಗಳಿಗೆ ಒತ್ತಿ ತೊಂದರೆಯಾಗುತ್ತಿದೆ ಎಂಬಂತಹ ರಿಪೋರ್ಟ್ ಬಂದಿರುತ್ತದೆ. ಇಂತಹ ಹಲವು ಸಂದರ್ಭಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚು. ಅಂಥವರಲ್ಲಿ ಕನಿಷ್ಠ 90 ಪ್ರತಿಶತ ಜನರಿಗೆ ಪ್ರಕೃತಿ ಚಿಕಿತ್ಸೆ, ಆಕ್ಯುಪಂಕ್ಚರ್, ಪಂಚಕರ್ಮ ಚಿಕಿತ್ಸೆ, ಫಿಜಿಯೋಥೆರಪಿ, ಯೋಗ ಚಿಕಿತ್ಸೆ ಮುಂತಾದ ಚಿಕಿತ್ಸೆಗಳ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ಅದಕ್ಕಾಗಿ ಸೂಕ್ತ ಚಿಕಿತ್ಸಾಲಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಆಗ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ತಪ್ಪಿಸಬಹುದು. ಕೆಲ ದಿನಗಳ ಕಾಲ ವಿಶ್ರಾಂತಿ, ಸರಿಯಾದ ಆಹಾರ ಪದ್ಧತಿ, ಕೆಲವು ಪ್ರಾಕೃತಿಕ ಔಷಧಗಳ ಸೇವನೆ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಸರಿಯಾದ ಜೀವನಶೈಲಿ, ಪ್ರತಿದಿನ ವ್ಯಾಯಾಮ, ಸೊಂಟದ ಸಮಸ್ಯೆಯ ಹಂತಕ್ಕೆ ತಕ್ಕಂತಹ ಚಿಕಿತ್ಸೆ ಮಾಡಿಕೊಂಡರೆ ಸೊಂಟನೋವು ದೊಡ್ಡ ಸಮಸ್ಯೆಯಾಗಲು ಸಾಧ್ಯವೇ ಇಲ್ಲ.