varipulse-platform 
ಲೈಫ್‌ಸ್ಟೈಲ್

ಏನಿದು 'ವೇರಿಪಲ್ಸ್ ಪ್ಲಾಟ್‌ಫಾರ್ಮ್'; ಭಾರತಕ್ಕೆ ಬಂದಿರುವ ಈ ಹೊಸ ತಂತ್ರಜ್ಞಾನದ ವಿಶೇಷತೆ ಏನು?..Varipulse Platform

ಪ್ರಮುಖ ಮುಖ್ಯಾಂಶಗಳು

  • ಹೃದಯ ಚಿಕಿತ್ಸೆ ಸಂಬಂಧ ಭಾರತದಲ್ಲಿ ಹೊಸ ಕ್ರಾಂತಿ
  • ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅದರಲ್ಲೂ ವಿಶೇಷವಾಗಿ 'ಏಟ್ರಿಯಲ್ ಫಿಬ್ರಿಲೇಷನ್' ಸಮಸ್ಯೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ '3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ ಭಾರತಕ್ಕೆ ಖಾಸಗಿ ಸಂಸ್ಥೆಯೊಂದು ಪರಿಷಯಿಸಿದೆ.
'ವೇರಿಪಲ್ಸ್ ಪ್ಲಾಟ್‌ಫಾರ್ಮ್' ಭಾರತದಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನದ ಬಳಕೆಗೆ ಅಧಿಕೃತ ಅನುಮೋದನೆ ದೊರೆತಿದೆ. ಇದು ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಏನಿದು ಏಟ್ರಿಯಲ್ ಫಿಬ್ರಿಲೇಷನ್?

ಏಟ್ರಿಯಲ್ ಫಿಬ್ರಿಲೇಷನ್ ಹೃದಯದ ಮೇಲ್ಭಾಗದಲ್ಲಿ (ಏಟ್ರಿಯಾ) ವಿದ್ಯುತ್ ಸಂಕೇತಗಳ ಏರುಪೇರಿನಿಂದ ಬರುವ ಸಮಸ್ಯೆಯಾಗಿದೆ. ಇದರಿಂದ ಹೃದಯಬಡಿತ ಅನಿಯಮಿತವಾಗಿ ಮತ್ತು ಅತಿ ವೇಗವಾಗಿ ಹೊಡೆದುಕೊಳ್ಳುತ್ತದೆ. ವಯಸ್ಸು, ಜೀವನಶೈಲಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಇದು ಕಾಣಿಸಿಕೊಳ್ಳಬಹುದು. ಒಂದೊಮ್ಮೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಅಕಾಲಿಕ ಮರಣಕ್ಕೂ ಕಾರಣವಾಗಬಹುದು.

ಹೇಗೆ ಕೆಲಸ ಮಾಡುತ್ತದೆ ಈ ವೇರಿಪಲ್ಸ್ ತಂತ್ರಜ್ಞಾನ?

ಈ ಹೊಸ ವೇರಿಪಲ್ಸ್ ಪ್ಲಾಟ್‌ಫಾರ್ಮ್ 'ಪಲ್ಸ್ಡ್ ಫೀಲ್ಡ್ ಅಬ್ಲೇಶನ್' (ಪಿಎಫ್‌ಎ) ಎಂಬ ತಂತ್ರಜ್ಞಾನದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದರ ವಿಶೇಷತೆ ಎಂದರೆ, ಇದನ್ನು 'ಕಾರ್ಟೊ 3' ಎಂಬ 3ಡಿ ಮ್ಯಾಪಿಂಗ್ ಸಿಸ್ಟಮ್‌ಗೆ ಜೋಡಿಸಲಾಗಿದೆ.
ಇದರಿಂದ ವೈದ್ಯರಿಗೆ ಹೃದಯದ ಒಳಭಾಗದ ನೈಜ ಚಿತ್ರಣ ಕಂಪ್ಯೂಟರ್ ಪರದೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಸಮಸ್ಯೆಯಿರುವ ನಿರ್ದಿಷ್ಟ ಜಾಗವನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಪ್ರಪಂಚದಾದ್ಯಂತ ಈಗಾಗಲೇ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಈ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ರೋಗಿಗಳಿಗೆ ಇದರಿಂದ ಏನೆಲ್ಲಾ ಲಾಭ?

  • ಇದು ಚಿಕಿತ್ಸೆಯ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವೈದ್ಯರಿಗೆ ಹೆಚ್ಚು ನಿಖರತೆ ಒದಗಿಸುತ್ತದೆ.
  • ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಬಳಸಲಾಗುವ ಎಕ್ಸ್-ರೇ ವಿಕಿರಣಗಳ ಬಳಕೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ ಅಥವಾ ಸಂಪೂರ್ಣವಾಗಿ ತಡೆಯುತ್ತದೆ. ಇದರಿಂದ ರೋಗಿಗಳಿಗೆ ವಿಕಿರಣದ ಅಪಾಯವಿರುವುದಿಲ್ಲ.
  • ರೋಗಿಗೆ ಅರಿವಳಿಕೆ ನೀಡಿಯೂ ಈ ಚಿಕಿತ್ಸೆಯನ್ನು ಅತ್ಯಂತ ಸುರಕ್ಷಿತವಾಗಿ ಮಾಡಬಹುದು.