ಲೈಫ್‌ಸ್ಟೈಲ್

ಯಮಧರ್ಮನಿಗೆ ಸವಾಲ್!

Webdesk - Manjunatha B

|ಡಾ.ವಿ.ಎಚ್.ಮೂಲಿಮನಿ

ಒಬ್ಬ ವಿಜ್ಞಾನಿ, ಅವನು ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದನು. ಈ ವಿದ್ಯೆಯನ್ನು ಅವನು ಯಾವ ಮಟ್ಟಕ್ಕೆ ಕಲಿತಿದ್ದನೆಂದರೆ ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಟಿ ಮಾಡಿದ್ದನು. ಇಂತಹ ಸೃಷ್ಟಿ ಬ್ರಹ್ಮ ಸೃಷ್ಟಿ ಸಾಮರ್ಥ್ಯಕ್ಕೆ ಸವಾಲು ಹಾಕುವಂತಿತ್ತು. ವಿಜ್ಞಾನಿಗೆ ತನ್ನ ತದ್ರೂಪಿಸೃಜನ ಸಾಮರ್ಥ್ಯದ ಬಗ್ಗೆ ಹೆಮ್ಮೆಯೂ ಇತ್ತು, ಅಹಂಕಾರವೂ ಇತ್ತು. ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿತು. ವಿಜ್ಞಾನಿಯ ಜೀವವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದನು.

ವಿಜ್ಞಾನಿಯು ಯಮಧರ್ಮನಿಗೆ ಚಳ್ಳೆಹಣ್ಣನ್ನು ತಿನ್ನಿಸುವ ಉದ್ದೇಶದಿಂದ ತಾನು ತನ್ನ ಹನ್ನೆರಡು ತದ್ರೂಪಿಗಳ ಜತೆಯಲ್ಲಿ ಕುಳಿತನು. ಯಮಧರ್ಮನು ಬಂದಾಗ ಅಲ್ಲಿ 13 ಜನರಿದ್ದರು. ಎಲ್ಲರೂ ಏಕರೂಪವಾಗಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎನ್ನುವುದು ಯಮನಿಗೆ ತಿಳಿಯಲಿಲ್ಲ. ಯಮಧರ್ಮನು ವಿಜ್ಞಾನಿಯನ್ನಲ್ಲದೆ, ಉಳಿದ ಯಾವುದೇ ತದ್ರೂಪಿಯನ್ನು ಕೊಂಡೊಯ್ಯುವಂತಿರಲಿಲ್ಲ. ಗೊಂದಲವಾಯಿತೆಂದು ವಾಪಸ್ಸು ಹೋಗುವಂತೆಯೂ ಹಾಗಿರಲಿಲ್ಲ. ಸ್ವಯಂ ಯಮಧರ್ಮನಿಗೆ ನಿಜಕ್ಕೂ ಚಿಂತೆ ಹೆಚ್ಚಾಯಿತು.

ಯಮಧರ್ಮನಿಗೆ ಥಟ್ ಎಂದು ಮಾನವನ ಒಂದು ದೌರ್ಬಲ್ಯವು ನೆನಪಿಗೆ ಬಂದಿತು. ಆತನ ಮುಖ ಪ್ರಫುಲ್ಲಿತವಾಯಿತು. ನಸುನಗುತ್ತಾ 13 ಜನರಿದ್ದ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು! ಆದರೆ, ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಟಿಯಲ್ಲಿ ಒಂದೇ ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ಆದರೆ, ಅದು ನನಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದನು ಯಮಧರ್ಮ. ‘ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ. ದೋಷವಿರಲು ಸಾಧ್ಯವೇ ಇಲ್ಲ’ ಎಂದು ವಿಜ್ಞಾನಿಯು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ, ‘ಇದುವೇ ನಾನು ಹೇಳಿದ ಆ ಕೊರತೆ!’ ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನು!

ಮಾನಂ ಹಿತ್ವಾಪ್ರಿಯೋ ಭವತ ಕ್ರೋಧಂ ಹಿತ್ವಾನ ಶೋಚತಿ ಕಾಮಂ ಹಿತ್ವಾರ್ಥವಾನ್ವವತ ಲೋಭಂ ಹಿತ್ವಾ ಸುಖೀ ಭವೇತ್

ಅಹಂಕಾರ ಮಮಕಾರಾದಿಗಳನ್ನು ಬಿಟ್ಟರೆ ಮನುಷ್ಯನು ಎಲ್ಲರಿಗೂ ಪ್ರಿಯನಾಗುತ್ತಾನೆ. ಸಿಟ್ಟನ್ನು ತೊರೆದರೆ ದುಃಖಿಸುವ ಪ್ರಮೇಯವೇ ಇವನಿಗೆ ಬರುವುದಿಲ್ಲ. ಅತ್ಯಾಸೆಯನ್ನು ಬಿಟ್ಟರೆ ಖಂಡಿತ ಈ ಮನುಜನು ಸಿರಿವಂತನಾಗುತ್ತಾನೆ. ಲೋಭ ಅನುಸೂಯಾದಿಗಳನ್ನು ತ್ಯಜಿಸಿದರೆ ಸುಖಿಯಾಗಿ ಬಾಳುತ್ತಾನೆ. ಅತಿವಿಶ್ವಾಸ ಸ್ವವಿನಾಶಕ್ಕೆ ಮೂಲ; ನಮ್ಮ ಅಂತ್ಯಕ್ಕೆ ನಮ್ಮ ಅಹಂಕಾರವೇ ಮೂಲ! ಪ್ರಕೃತಿಯು ಮಾತ್ರ ಪರಿಪೂರ್ಣ! ಮನುಷ್ಯನಲ್ಲ!! ಪೂರ್ಣ ಜಗತ್ತನ್ನೇ ಗೆಲ್ಲಬಹುದು ಸಂಸ್ಕಾರ ಒಂದಿದ್ದರೆ, ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು ಅಹಂಕಾರ ಬಂದಿದ್ದರೆ. ಅಹಂಕಾರ ಕಣ್ಣಿಗೆ ಬಿದ್ದ ಧೂಳಿನಂತೆ, ಸ್ವಚ್ಛ ಮಾಡಿಕೊಳ್ಳದಿದ್ದರೆ ಏನೂ ಕಾಣಿಸುವುದಿಲ್ಲ. ಆಕಾರವಿಲ್ಲದ ಕಲ್ಲನ್ನು ಬೇಕಾದರೂ ಸುಂದರವಾದ ಶಿಲೆಯನ್ನು ಮಾಡಬಹುದು. ಆದರೆ, ಅಹಂಕಾರ ಇರುವ ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ.