Tips to improve digestion 
ಲೈಫ್‌ಸ್ಟೈಲ್

ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಈ 7 ಸೂತ್ರಗಳನ್ನು ಪಾಲಿಸಿ..Gut Health

ಪ್ರಮುಖ ಮುಖ್ಯಾಂಶಗಳು

  • ಆಹಾರವನ್ನು ಸರಿಯಾಗಿ ಅಗಿದು ನುಂಗುವುದು ಅತ್ಯಗತ್ಯ
  • ಮಲಬದ್ಧತೆ ತಡೆಯಲು ನಾರಿನಂಶವಿರುವ ಆಹಾರ ಸೇವಿಸಬೇಕು.
  • ಅನಗತ್ಯವಾಗಿ ಆ್ಯಂಟಿಬಯೋಟಿಕ್ಸ್ ಮತ್ತು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ
  • ನಿದ್ರಾಹೀನತೆಯು ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ
Gut Health: ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ತೀರ ಅಗತ್ಯ. ಆದರೆ, ಇತ್ತೀಚಿನ ಜೀವನ ಶೈಲಿಯಿಂದಾಗಿ ಗ್ಯಾಸ್ಟ್ರಿಕ್, ಅಸಿಡಿಟಿ, ಮಲಬದ್ಧತೆಯಂತಹ ಸಮಸ್ಯೆ ಕಾಡೋದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಜೀರ್ಣಾಂಗ ರೋಗಗಳ ತಜ್ಞರೊಬ್ಬರು ಕೆಲವು ಸಲಹೆಯನ್ನು  ಹಂಚಿಕೊಂಡಿದ್ದಾರೆ.
ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಏನು ತಿನ್ನಬೇಕು, ಯಾವುದು ಬೇಡ ಹಾಗೂ ಯಾವ ಜೀವನಶೈಲಿಯನ್ನು ಪಾಲಿಸಬೇಕಾದ ಏಳು ಸಲಹೆಗಳನ್ನು ಒಂದು ತಿಳಿದುಕೊಳ್ಳೋಣ.

ಆಹಾರವನ್ನು ನಿಧಾನವಾಗಿ ಜಗಿದು ತಿನ್ನಬೇಕು

ಆರೋಗ್ಯ ತಜ್ಞರ ಪ್ರಕಾರ ಯಾವುದೇ ಆಹಾರವನ್ನು ನುಂಗುವ ಮುನ್ನ ಕನಿಷ್ಠ 30ರಿಂದ 32 ಬಾರಿ ಚೆನ್ನಾಗಿ ಜಗಿದು ನುಂಗಬೇಕು. ಮೃದುವಾದ ಆಹಾರವನ್ನು ಇದಕ್ಕಿಂತ ಕಡಿಮೆ ಬಾರಿ ಜಗಿದರೆ ಸಾಕು.  ಗಟ್ಟಿ ಮತ್ತು ನಾರಿನಾಂಶವಿರುವ ಆಹಾರವನ್ನು ಬಾಯಿಯಲ್ಲಿ ಕರುಗುವ ತನಕ ಜಗಿಯಬೇಕು. ಇದನ್ನು 'ಸೆಫಾಲಿಕ್ ಹಂತ'  ಎನ್ನಲಾಗುತ್ತದೆ. ಆಹಾರವನ್ನು ಸರಿಯಾಗಿ ಅಗಿಯುವುದರಿಂದ ಜೀರ್ಣರಸಗಳು ಸರಿಯಾಗಿ ಸ್ರವಿಸಿ, ಜೀರ್ಣಾಂಗ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ.  

ಪ್ರಿಬಯೋಟಿಕ್ ಫೈಬರ್‌ ಎಂದರೇನು?

ಪ್ರತಿ ವ್ಯಕ್ತಿಯ ಕರುಳಿನಲ್ಲಿರುವ ಆರೋಗ್ಯಕರ ಸೂಕ್ಷ್ಮಜೀವಿಗಳಿಗೆ  ನಾರಿನಾಂಶವುಳ್ಳ ಪದಾರ್ಥಗಳು ಇಂಧನದಂತೆ.  ಹೀಗಾಗಿ ನಿತ್ಯ  ಹಣ್ಣುಗಳು, ತರಕಾರಿಗಳು, ಓಟ್ಸ್, ಬೀಜಗಳನ್ನು ಸೇವಿಸಬೇಕು. ಈ ಧಾನ್ಯಗಳಲ್ಲಿರುವ ಫೈಬರ್ ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಯನ್ನು ತಡೆಯುವುದಲ್ಲದೆ, ಲಿವರ್ ಮತ್ತು ಕರುಳಿನ ಕ್ಯಾನ್ಸರ್  ಕಡಿಮೆ ಮಾಡುತ್ತದೆ.

 ಆ್ಯಂಟಿಬಯೋಟಿಕ್ಸ್, ನೋವು ನಿವಾರಕ ಮಾತ್ರೆ ಕಡಿಮೆ ಮಾಡಿ

ಸಣ್ಣಪುಟ್ಟ ನೋವುಗಳಿಗೆ ವೈದ್ಯರ ಚೀಟಿ ಇಲ್ಲದೆ ಸ್ವಯಂ ಔಷಧಿಯಾಗಿ ಆ್ಯಂಟಿಬಯೋಟಿಕ್ಸ್ ಹಾಗೂ ಐಬುಪ್ರೊಫೆನ್‌ನಂತಹ ನೋವು ನಿವಾರಕಗಳನ್ನುತೆಗೆದುಕೊಳ್ಳುವುದು ಕಡಿಮೆ ಮಾಡಿ. ಈ ಮಾತ್ರೆಗಳುಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಲ್ಲದೆ, ಜಠರದ ಒಳಪದರವನ್ನು ಹಾನಿಗೊಳಿಸುತ್ತವೆ.  

ಸರಿಯಾದ ಸಮಯಕ್ಕೆ ತಿನ್ನಿ

ನಮ್ಮ ಜೀರ್ಣಾಂಗ ವ್ಯವಸ್ಥೆಯು ಒಂದು ನಿರ್ದಿಷ್ಟ ಸಮಯವನ್ನು ಅನುಸರಿಸುತ್ತದೆ. ಅಸಮರ್ಪಕ ಸಮಯದಲ್ಲಿ ಆಹಾರ ಸೇವಿಸುವುದು, ಹಗಲಿನಲ್ಲಿ ಊಟ ಬಿಡುವುದು ಅಥವಾ ತಡರಾತ್ರಿ ಹೆಚ್ಚು ಊಟ ಮಾಡುವುದು ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ. 

 ಉತ್ತಮ ನಿದ್ರೆ ಮುಖ್ಯ

ಕರುಳು ಮತ್ತು ಮೆದುಳಿನ ನಡುವೆ ಸಂಪರ್ಕವಿರುವ ಕಾರಣ, ನಿದ್ರೆ ಕೊರತೆ ಕಾಡಿದರೆ ದೇಹದಲ್ಲಿ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸಿ ಅಸಿಡಿಟಿ ಮತ್ತು 'ಇರಿಟೇಬಲ್ ಬೋವಲ್ ಸಿಂಡ್ರೋಮ್' ನಂತಹ ಕರುಳಿನ ಕಾಯಿಲೆಗಳನ್ನು ಉಲ್ಬಣಗೊಳಿಸುತ್ತದೆ.  

ವ್ಯಾಯಾಮ ಮುಖ್ಯ

ದೈಹಿಕ ಚಟುವಟಿಕೆಯು ಕರುಳಿನ ಸ್ನಾಯುಗಳ ಚಲನೆಯನ್ನು ಉತ್ತೇಜಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ವಾಕ್​ ಮಾಡುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ ಮತ್ತು ಕರುಳಿಗೆ ರಕ್ತ ಪರಿಚಲನೆಗೆ ಸಹಕಾರಿ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ