ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಹೆಚ್ಚಾಗಿ ಯುವಜನರೇ ಹೃದಯಾಘಾತಕ್ಕೆ (Heart Health) ಬಲಿಯಾಗಿದ್ದಾರೆ. ಅದರಲ್ಲೂ ದಿನದಿಂದ ದಿನಕ್ಕೆ ಹೃದ್ರೋಗ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚಿವೆ. ಇದಕ್ಕೆ ಹಲವು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ. ಅದು ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ತೀವ್ರ ಒತ್ತಡವು ಹಠಾತ್ ಹಾರ್ಟ್ ಅಟ್ಯಾಕ್ಗೆ ಕಾರಣ ಎನ್ನಲಾಗಿದೆ.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎಂಬುದು ವೈದ್ಯರ ಪ್ರಮುಖ ಸಲಹೆ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿವುದರಿಂದ ಹೃದಯಕ್ಕೆ ಕಾಡುವ ತೊಂದರೆಗಳನ್ನು ಹಂತ ಹಂತವಾಗಿ ತಡೆಗಟ್ಟಬಹುದು. ಮತ್ತು ಹಾರ್ಟ್ ಅಟ್ಯಾಕ್ನಿಂದ ದೂರ ಉಳಿಯಬಹುದು.
ಅಧಿಕ ಸಕ್ಕರೆ: ಅತಿಯಾದ ಸಕ್ಕರೆ ಸೇವನೆಯು ದೇಹದಲ್ಲಿ ಇನ್ಸುಲಿನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಬೊಜ್ಜು ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಸಕ್ಕರೆ ಅಂಶ ಗ್ಲೂಕೋಸ್ ಮಟ್ಟವನ್ನು ದ್ವಿಗುಣಗೊಳಿಸುತ್ತದೆ ಮತ್ತು ಹಾರ್ಟ್ಗೆ ಇಲ್ಲದ ತೊಂದರೆಯನ್ನು ತಂದೊಡ್ಡುತ್ತದೆ.
ಉಪ್ಪಿಲ್ಲದ ಊಟ ರುಚಿ ತರಲ್ಲ ನಿಜ. ಹಾಗಂತ, ತಿನ್ನುವ ಆಹಾರಗಳಲ್ಲಿ ಆಗಾಗ್ಗೆ ಉಪ್ಪನ್ನು ಸೇರಿಸಿಕೊಳ್ಳುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಅತಿಯಾದ ಸೋಡಿಯಂ ಸೇವನೆಯು ದೇಹದಲ್ಲಿ ದ್ರವದ ಧಾರಣಕ್ಕೆ ಕಾರಣವಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ದೀರ್ಘಕಾಲೀನ ಒತ್ತಡವನ್ನು ಉಂಟುಮಾಡುತ್ತದೆ.
ಹೆಚ್ಚು ಸಂಸ್ಕರಿಸಿದ, ಕರಿದ ಆಹಾರಗಳನ್ನು (ಅಂದರೆ ಪ್ಯಾಕ್ಡ್ ಫುಡ್ಸ್) ತಿನ್ನುವುದರಿಂದ ದೇಹದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ, ಇದು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಅತಿ ಮುಖ್ಯವಾಗಿ ಜೀವನಶೈಲಿ ಬಗ್ಗೆ ಗಮನ ಕೊಡಲೇಬೇಕು. ವ್ಯಾಯಾಮದ ಕೊರತೆ, ದೀರ್ಘಕಾಲ ಕುಳಿತುಕೊಳ್ಳುವುದು, ನಿದ್ರಿಸುವುದು ಮತ್ತು ಕಡಿಮೆ ದೈಹಿಕ ಚಟುವಟಿಕೆಯು ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ಇದು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿದಿನ ಅಥವಾ ವಾರಕ್ಕೆ 4ರಿಂದ 5 ದಿನ ವಾಕಿಂಗ್, ಜಾಗಿಂಗ್ ಮಾಡುವುದು ಅಥವಾ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಹಾರ್ಟ್ ಅಟ್ಯಾಕ್ ಅಪಾಯವನ್ನು ತಪ್ಪಿಸಬಹುದು.
ತಂಬಾಕು ನಿಕೋಟಿನ್ ಅನ್ನು ಹೊಂದಿರುತ್ತದೆ. ಇದು ಹೃದಯ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ನಿಮ್ಮ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ದೀರ್ಘಕಾಲೀನ ಧೂಮಪಾನವು ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಅಪಾಯಕ್ಕೆ ದೊಡ್ಡ ಕಾರಣವಾಗಿ ಕಾಡಲಿದೆ.
ಅತಿಯಾದ ಕುಡಿತದ ಚಟವು ರಕ್ತದೊತ್ತಡ ಮತ್ತು ರಕ್ತದಲ್ಲಿನ ಟ್ರೈಗ್ಲಿಸರೈಡ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯ ಸೇವನೆಯು ಹೃದಯ ವೈಫಲ್ಯ, ಲಿವರ್ ಸಮಸ್ಯೆಗಳಿಗೆ ಕಾರಣವಾಗಬಹುದು.
ಗಮನಿಸಿ: ನಿಮ್ಮ ಕುಟುಂಬದಲ್ಲಿ ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಅಥವಾ ಹೃದಯ ಸಮಸ್ಯೆಗಳ ಇತಿಹಾಸವಿದ್ದರೆ, ಸರಿಯಾದ ಆಹಾರ ಮಾರ್ಗಸೂಚಿಗಳು ಮತ್ತು ಚಿಕಿತ್ಸೆಗಾಗಿ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸುವುದು ಕಡ್ಡಾಯ ಹಾಗೂ ಉತ್ತಮ.