ಅಕಾಲಿಕ ಮಳೆಯಿಂದ ಆಗುವ ಆರೋಗ್ಯ ಸಮಸ್ಯೆಗಳು
- ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ ಈ ಸಮಸ್ಯೆಗಳು
- ಡೆಂಘೇ ಜ್ವರ, ಟೈಫಾಯ್ಡ್, ಕಾಲಾರ ಕಾಡೋದು ಈ ಸಮಯದಲ್ಲಿಯೇ
- ಬಿಸಿ ನೀರು, ಪ್ರೋಟೀನ್ವುಳ್ಳ ಆಹಾರ ಸೇವನೆಯೇ ಉತ್ತಮ ಮನೆ ಮದ್ದು
ಬೆಂಗಳೂರು: ಫೆಬ್ರವರಿಯಿಂದಲೇ ಕರ್ನಾಟಕದಲ್ಲಿ ನೆತ್ತಿ ಸುಡುವಂತಹ ಬಿಸಿಲು ಆವರಿಸಿತ್ತು. ಆದರೆ, ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿದಿದ್ದು, ಹಲವೆಡೆ ಆಲಿಕಲ್ಲು ಮಳೆಯಾಯಿತು. ಇದು ನಗರ ಪ್ರದೇಶದ ಜನರನ್ನು ತಣಿಸಿದರೆ, ಹಳ್ಳಿ ಜನರ ಬದುಕನ್ನು ಬಿಗುಡಾಯಿಸಿತು. ಆಲಿಕಲ್ಲಿನ ವರುಣನಿಂದ ರೈತರು ಕಣ್ಣೀರಾಕಿದ್ದು ನಿಜಕ್ಕೂ ಬೇಸರದ ಸಂಗತಿ. ಮತ್ತೊಂದೆಡೆ, ಈ ಸಮಯದಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಡಿವೆ.
ಅಕಾಲಿಕ ಮಳೆಯಿಂದ ರೈತರ ಬೆಳೆಗಷ್ಟೇ ಅಲ್ಲ, ಮಾನವನ ಆರೋಗ್ಯದ ಮೇಲೂ ಒಂದಷ್ಟು ಗಂಭೀರವಾದ ಪರಿಣಾಮ ಬೀರುತ್ತದೆ. ಹೌದು, ಹವಾಮಾನದಲ್ಲಿ ದಿಢೀರನೆ ಉಂಟಾಗುವ ಬದಲಾವಣೆಯಿಂದಾಗಿ ದೇಹದಲ್ಲಿ ಬಲಹೀನತೆ, ನೆಗಡಿ, ಕೆಮ್ಮು, ಉಬ್ಬಸ, ತಲೆತಿರುಗುವುದು, ನಿರ್ಜಲೀಕರಣ, ಉಸಿರಾಟದಲ್ಲಿ ಏರುಪೇರು, ಎದೆ ನೋವು, ತಲೆ ನೋವು ಕಾಣಿಸಿಕೊಂಡರೆ ಮೊದಲು ವೈದ್ಯರನ್ನು ಭೇಟಿ ಆಗುವುದು ಉತ್ತಮ.
ಯಾವ್ಯಾವ ಸೋಂಕು ಕಾಣಿಸಿಕೊಳ್ಳಬಹುದು?
ತಾಪಮಾನ ಮತ್ತು ತೇವಾಂಶದಲ್ಲಿ ಏರಿಳಿತ ಕಂಡು ಬಂದಾಗ ಮೊದಲು ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ, ಇದನ್ನು ನಿರ್ಲಕ್ಷ್ಯಿಸುವಂತಿಲ್ಲ. ಹವಾಮಾನ ಬದಲಾವಣೆಯಿಂದ ವೈರಸ್ ಹರಡಲು ಸಹಕಾರಿ, ಆ ಕಾರಣದಿಂದ ನೆಗಡಿ, ಕೆಮ್ಮು, ಜ್ವರದಂತಹ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹೆಚ್ಚು ನೀರು ಕುಡಿಯಿರಿ
ಹವಾಮಾನ ಬದಲಾವಣೆಯಾಗುವ ಸಂದರ್ಭದಲ್ಲಿ, ತಾಪಮಾನ ಕಡಿಮೆಯಾದರೂ ಸಹ ನೀರು ಕುಡಿಯೋದನ್ನು ಮಾತ್ರ ನಿರ್ಲಕ್ಷ್ಯಿಸಬೇಡಿ. ದೇಹದಲ್ಲಿ ನೀರಿನ ಅಭಾವ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅಕಾಲಿಕ ಮಳೆಯಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ಟೈಫಾಯ್ಡ್ ಮತ್ತು ಕಾಲರದಂತಹ ಕಾಯಿಲೆಗಳು ಬರಬಹದು. ಇನ್ನು ಮಳೆ ನೀರು ಮನೆಯ ಸುತ್ತಮುತ್ತಲಿನಲ್ಲಿ ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ಸೊಳ್ಳೆಯ ಉತ್ಪತ್ತಿ ಆಗುವುದನ್ನು ತಡೆಗಟ್ಟಬಹುದು.