arthritis 
ಮನೆ ಮದ್ದು

ವಾತರಕ್ತವೆಂಬ ಸಂಧಿಗಳ ಉರಿಯೂತದ ಲಕ್ಷಣ, ಪರಿಹಾರ

ಅತಿಯಾಗಿ ಉಪ್ಪು, ಹುಳಿ, ಖಾರ, ಕಹಿ, ಒಗರು ರುಚಿಯ ಆಹಾರ ಸೇವನೆ, ಅತಿ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು, ಒಣ, ಕ್ಷಾರೀಯ, ಜಿಡ್ಡಿನಂಶವುಳ್ಳ, ಬಿಸಿಯಾದ ಆಹಾರ, ಸರಿಯಾಗಿ ಬೇಯಿಸದೆ ಹಸಿಯಾದ ಆಹಾರಕ್ಕೆ ಒತ್ತು ನೀಡುವುದು, ಮಲೆನಾಡಿನ ಒಣ ಅಪಕ್ವ ಮಾಂಸಾಹಾರ, ಎಳ್ಳುಂಡೆ, ಸಾಸಿವೆ, ಮೂಲಂಗಿ, ಹುರುಳಿ, ಉದ್ದು, ಬಟಾಣಿ, ಕಬ್ಬಿನ ಹಾಲು, ಮೊಸರು, ಮಜ್ಜಿಗೆ, ವಿನೇಗರ್, ಹುಳಿಯಾದ ವ್ಯಂಜನಗಳು, ಸುರಾಪಾನ, ಮೊದಲು ಸೇವಿಸಿದ ಆಹಾರವು ಜೀರ್ಣವಾಗುವ ಮೊದಲೇ ಪುನಃ ಆಹಾರ ಸೇವನೆ, ಆಗಾಗ ಆಹಾರ ಸ್ವೀಕಾರ, ಅತಿಯಾಗಿ ಆಗಾಗ ಉಪವಾಸ ಮಾಡುವುದು, ವಿರುದ್ಧ ಗುಣಧರ್ಮಗಳ ಆಹಾರವನ್ನು ಒಟ್ಟಾಗಿ ಸೇವಿಸುವುದು- ಇವೆಲ್ಲಾ ಆಹಾರ ಕ್ರಮಗಳು ಈ ವಾತರಕ್ತ ವ್ಯಾಧಿಯ ಉತ್ಪತ್ತಿಗೆ ಎಡೆಮಾಡಿಕೊಡುತ್ತವೆ. ಕೋಪ, ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದು, ರಾತ್ರಿ ಜಾಗರಣೆ ಮಾಡುವುದು, ಅತಿಯಾದ ಪ್ರವಾಸ, ಅತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು, ಹದಿಮೂರು ವಿಧವಾದ ಮಲ ಮೂತ್ರವೇ ಮೊದಲಾದ ಸಹಜ ಶಾರೀರಿಕ ವೇಗಗಳನ್ನು ಬಲವಂತವಾಗಿ ತಡೆಯುವುದು, ನಿತ್ಯವೂ ನಿಯಮಿತವಾಗಿ ನಡಿಗೆಯನ್ನು ಮಾಡದೆ ಇರುವುದು, ಅಪಘಾತದಿಂದ ಅಂಗಾಂಗಗಳಿಗೆ ಬಾಧೆಯಾಗುವುದು, ಸಾಹಸದ ಜಲಕ್ರೀಡೆಗಳಲ್ಲಿ ತೊಡಗುವುದು, ಹಾರುತ್ತಾ ಕುಣಿಯುತ್ತಾ ದೇಹವನ್ನು ಅತಿಯಾಗಿ ದಂಡಿಸುವುದು ಇವೆಲ್ಲ ವಾತರಕ್ತ ಬರಲು ಮೂಲಕಾರಣಗಳು.
ಮೊದಲು ಪಾದಗಳ ಸಂಧಿಗಳಿಗೆ ಹರಡಿ ಬಳಿಕ ವಾತದ ಚಲನ ಗುಣ, ರಕ್ತದ ದ್ರವತ್ವ ಹಾಗೂ ಸಂಚರಿಸುವ ಗುಣಗಳಿಂದ ಕೂಡಿಕೊಂಡು ರಕ್ತನಾಳಗಳ ಮೂಲಕ ಇಡೀ ಶರೀರವನ್ನು ವ್ಯಾಪಿಸುತ್ತದೆ. ಸಂಧಿಗಳಲ್ಲಿ ತಡೆಯುಂಟಾಗುತ್ತಿದ್ದಂತೆ ಸ್ಥಳೀಯ ಕಫ, ಪಿತ್ತಗಳನ್ನೂ ದೂಷಿಸಿ ವ್ಯಾಧಿಯು ಸಹಿಸಲು ಅಸಾಧ್ಯವಾದ ಅತೀವ ನೋವು ಉರಿ ಊತಗಳಿಂದ ಕೂಡಿದ ತನ್ನೆಲ್ಲಾ ಲಕ್ಷಣಗಳನ್ನು ತೋರಿಸುತ್ತಾ ಹೋಗುತ್ತದೆ. ಪಾದದ ಹೆಬ್ಬೆರಳು ಹಾಗೂ ಪಾದವು ಸೇರುವ ಸಂಧಿ ಸ್ಥಳ ಇದು ಬಂದೆರಗುವ ಮೊದಲ ಅಂಗ. ಆ ಬಳಿಕ ಪಾದ, ಹಸ್ತಗಳ ಬೆರಳ ಪುಟ್ಟ ಮೂಳೆಸಂಧಿಗಳು, ಕಾಲಿನ ಹಿಮ್ಮಡಿ, ಮಂಡಿ, ಕೈಯ ಮಣಿಕಟ್ಟು, ಮೊಣಗಂಟು ಮೊದಲಾದ ಕೀಲು ಮೂಳೆಗಳಲ್ಲಿ ಲಕ್ಷಣಗಳು ಕಾಣಿಸುತ್ತಾ ಸಾಗುತ್ತದೆ. ಇದು ಒಮ್ಮಿಂದೊಮ್ಮೆಲೇ ಬಂದೆರಗುವುದರಿಂದ ಅನೀರೀಕ್ಷಿತವಾಗಿ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತದೆ. ಮೂಳೆ ಸಂಧಿಯಲ್ಲಿ ಬಿಸಿ, ಕೆಂಪು, ಊತ, ಊದಿಕೊಂಡ ರಕ್ತನಾಳ, ಊತದಿಂದ ಹೊಳಪುಗೊಂಡು ಚರ್ಮದ ಮೇಲ್ಮೈ, ಅತಿನೋವು, ಸ್ಪರ್ಶ ಅಸಹಿಷ್ಣುತೆ, ತೀವ್ರವಾಗಿದ್ದಾಗ ಜ್ವರ, ಬಾಯಿರುಚಿ ಇಲ್ಲದಿರುವುದು, ವಾಕರಿಕೆ, ಕುಗ್ಗಿದ ಮನಸ್ಸು ಇವೆಲ್ಲವನ್ನೂ ಉಂಟುಮಾಡುತ್ತದೆ.
ವಾತರಕ್ತವು ಪೂರ್ಣಪ್ರಮಾಣದಲ್ಲಿ ಹೊಡೆತ ನೀಡುವ ಮೊದಲು ಕೆಲವೊಂದು ಪ್ರಾರಂಭಿಕ ಚಿಹ್ನೆಗಳಿಂದ ಆಹಾರ ವಿಹಾರ, ಆಚಾರ ವಿಚಾರಗಳನ್ನು ತಿದ್ದಿಕೊಳ್ಳಲು ನಮಗೆ ಎಚ್ಚರಿಕೆಯನ್ನು ನೀಡುತ್ತದೆ ಎಂದಿದೆ ಆಯುರ್ವೆದ. ಅತಿಯಾಗಿ ಬೆವರುವುದು ಅಥವಾ ಬೆವರೇ ಬಾರದಿರುವುದು, ಸಂಧಿಗಳು ಶಿಥಿಲವಾದ ಅನುಭವ, ಹಸ್ತ ಪಾದ ಹಿಮ್ಮಡಿ ಮಂಡಿಗಳು ಭಾರವಾದಂತೆ, ಅಲುಗಾಡಿದಂತೆ, ಸ್ಪರ್ಶ ಜ್ಞಾನ ಸರಿಯಾಗಿ ಇಲ್ಲದೆ ಜೋಮು ಹಿಡಿದಂತಾಗುವುದು, ಕೀಲುಗಳು ಕಪ್ಪಾಗುವುದು, ಉದಾಸೀನ ಪ್ರವೃತ್ತಿ, ಅಸ್ವಸ್ಥತೆಯ ಅನುಭೂತಿ, ಮೈ ಕೈ ನೋವು, ಚರ್ಮದಲ್ಲಿ ಗುಳ್ಳೆಗಳಾಗುವುದು ಇಂತಹ ಪೂರ್ವ ಲಕ್ಷಣಗಳು ವ್ಯಕ್ತಿಗೆ ಕಾಯಿಲೆಯ ಕರೆಗಂಟೆ. ಪೊ›ಟೀನ್ ಅಂಶ ಹೆಚ್ಚಿರುವ ಯಾವುದೇ ಬೇಳೆಕಾಳುಗಳು, ಬಾದಾಮಿ ಗೋಡಂಬಿ, ಶೇಂಗಾ ಮೊದಲಾದ ಬೀಜಗಳು, ಮಾಂಸಾಹಾರಗಳು ಕಾಯಿಲೆಯನ್ನು ತೀವ್ರವಾಗಿ ಉಲ್ಬಣಗೊಳಿಸುತ್ತದೆ. ಈ ವಾತರಕ್ತವನ್ನು ಆಯುರ್ವೆದ ರೀತ್ಯಾ ಸರಿಯಾಗಿ ಅರ್ಥೈಸಿಕೊಂಡು ಪಥ್ಯ, ಆಹಾರ, ಔಷಧ ಉಪಚಾರ ಅಳವಡಿಸಿಕೊಳ್ಳುವುದು ಅನಿವಾರ್ಯ. ನಿರ್ಲಕ್ಷ್ಯ ವಹಿಸಿದರೆ ಮೂತ್ರಪಿಂಡದ ಸಮಸ್ಯೆಯೂ ಸೇರಿದಂತೆ ಹಲವಾರು ಅನ್ಯ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ.