Eye Health Care 
ಆರೋಗ್ಯ

ನಿಮ್ಮ ಕಣ್ಣು ಈ 5 ಮುನ್ಸೂಚನೆ ನೀಡುತ್ತಿದ್ದೆಯೇ?; ನೀವು ಗಂಭೀರ ಸಮಸ್ಯೆ ಎದುರಿಸುವ ಮುನ್ನ ಎಚ್ಚೆತ್ತುಕೊಳ್ಳಿ.. Eye Health Care

ಪ್ರಮುಖ ಮುಖ್ಯಾಂಶಗಳು

  • ಕಣ್ಣಲ್ಲಿ ಈ ಸಮಸ್ಯೆ ಪತ್ತೆ ಹಚ್ಚಿದ್ರೆ ವಿಶ್ವದ ಶೇ. 90 ರಷ್ಟು ದೃಷ್ಟಿ ದೋಷಗಳನ್ನು ತಡೆಗಟ್ಟಬಹುದು
  • ಕಣ್ಣಿನ ಮಸುಕುವಿಕೆ ಮಧುಮೇಹದ ಮುನ್ಸೂಚನೆಯೂ ಆಗಿರಬಹುದು
  • ಹಠಾತ್ ಬೆಳಕಿನ ಮಿಂಚುಗಳು ಕಾಣಿಸಿಕೊಂಡರೆ ರೆಟಿನಾ ಸಮಸ್ಯೆಯ ಸಂಕೇತ
  • ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ
Eye Health Care: ನಮ್ಮ ತಂದೆ-ತಾಯಿ ಕಾಲದ ಹಿರಿಯರು, ವಯಸ್ಸಾಯ್ತು ಕಣ್ಣು ಕಾಣುತ್ತಿಲ್ಲ ಎನ್ನುತ್ತಿದ್ದರು. ಆದರೆ, ಈಗ ಮೊಬೈಲ್, ಲ್ಯಾಪ್​ಟಾಪ್​ ಸ್ಕ್ರೀನಿಂಗ್​ ಟೈಂ ಜಾಸ್ತಿಯಾಗಿ ಕಣ್ಣಿಗೆ ಸಮಸ್ಯೆಯಾಗಿದೆ. ಸ್ಕ್ರೀನ್​ ನೋಡೋಕೆ ಸ್ಪೆಕ್ಸ್​ ತೆಗೆದುಕೊಳ್ಳಬೇಕು ಅನ್ನೋದು ಈಗಿನ ಝೆನ್​ ಜಿಗಳ ಗೋಳಾಗಿದೆ. ಮಾನವನ ದೇಹದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗ ಕಣ್ಣು. ಇದು ಆರೋಗ್ಯದ ಕನ್ನಡಿ. ಹೀಗಾಗಿ ನಿಯಮಿತ ತಪಾಸಣೆ ಅಗತ್ಯ.
ಕಣ್ಣಿನ ಪೊರೆ, ಮಂಜಾಗುವುದು ಇಂತಹ ಗಂಭೀರ ಸಮಸ್ಯೆಯಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳೋದಕ್ಕಿ ಅವು ನೀಡುವ 'ಸೈಲೆಂಟ್' ಮುನ್ಸೂಚನೆಗಳನ್ನು ಗುರುತಿಸಿದರೆ ಶೇಕಡಾ 90 ರಷ್ಟು ಆರಂಭಿಕ ಹಂತದಲ್ಲೇ ಕಣ್ಣಿನ ದೋಷ ತಡೆಗಟ್ಟಬಹುದು. ಒರ್ಬಿಸ್ ಸಂಸ್ಥೆಯ ಡೈರೆಕ್ಟರ್ ಆದ ಡಾ. ರಿಷಿ ರಾಜ್ ಬೋರಾ ಅವರ ಪ್ರಕಾರ ಕಣ್ಣು ತನ್ನ ಆರೋಗ್ಯದ ಬಗ್ಗೆ ಸೂಚನೆ ಕೊಡೋದು ಯಾವಾಗ?, ಕಣ್ಣಿಗಾಗುತ್ತಿರುವ ಸಮಸ್ಯೆಯ ಸೂಚನೆಗಳೇನು? ಅನ್ನೋದು ಈ ಲೇಖನದಲ್ಲಿ ಇದೆ.

ಈ 5 'ಸೈಲೆಂಟ್' ಲಕ್ಷಣವನ್ನು ಎಂದಿಗೂ ನಿರ್ಲಕ್ಷ್ಯಿಸಬೇಡಿ

ಕಣ್ಣು ಮುಸುಕಾಗುವಂತಾಗುವುದು

ಸ್ಕ್ರೀನ್​ ಸಮಯ ಹೆಚ್ಚಾದಾಗ ಕಣ್ಣಿನ ದೃಷ್ಟಿ ಮಸುಕಾಗುವುದು ಸಾಮಾನ್ಯ. ಇದು ಪದೇ ಪದೆ ಸಂಭವಿಸುತ್ತಿದ್ದರೆ, ಅದು ಆರಂಭಿಕ ಕ್ಯಾಟರಾಕ್ಟ್ ಅಂದರೆ ಪೊರೆ ಅಥವಾ ಮಧುಮೇಹಕ್ಕೆ ಸಂಬಂಧಿಸಿದ ರಕ್ತದ ಸಕ್ಕರೆಯ ಮಟ್ಟದ ಏರುಪೇರಿನ ಸಂಕೇತವಾಗಿರುವ ಸಾಧ್ಯತೆ. ಇನ್ಮುಂದೆ ಒಂದು ಕಣ್ಣಿನಲ್ಲಿ ಹಠಾತ್ ಮಸುಕಾಗುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

ಕಣ್ಣಿಗೆ ಆಯಾಸವಾದ್ರೆ ತಲೆನೋವು ಗ್ಯಾರಂಟಿ

ನೀವು ಓದುವಾಗ, ಮೊಬೈಲ್, ಲ್ಯಾಪ್​ಟಾಪ್​ ಬಳಕೆ ಮಾಡುವಾಗ ನಿಮಗೆ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಕಣ್ಣಿನ ಸಮಸ್ಯೆಯಿಂದಾಗಿರಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ ಡ್ರೈ ಐ ನಂತಹ ಸಮಸ್ಯೆಗೆ ಒಳಗಾಗುವುದು ಮತ್ತು ಉರಿಯೂತಕ್ಕೆ ಕಾರಣವಾಗಬಹುದು.

ಕಣ್ಣು ಕೆಂಪಾಗೋದು ಏಕೆ?

ಕಣ್ಣು ಕೆಂಪಾಗುವಿಕೆಯನ್ನು ಧೂಳು ಅಥವಾ ಅಲರ್ಜಿ ಎಂದು ನಿರ್ಲಕ್ಷಿಸಬೇಡಿ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಕಣ್ಣಿನ ಮೇಲ್ಮೈ ಪದರಕ್ಕೆ ಹಾನಿಯಾಗಬಹುದು ಎನ್ನುತ್ತಾರೆ ವೈದ್ಯರು.

ರಾತ್ರಿ ಕಣ್ಣು ಮಂಜಾಗೋದು ಯಾಕೆ?

ರಾತ್ರಿಯ ಸಮಯದಲ್ಲಿ ವಾಹನ ಚಲಾಯಿಸಲು ಕಷ್ಟವಾಗುವುದು ಅಥವಾ ಹೆಚ್ಚಿನ ಬೆಳಕನ್ನು ನೋಡಲು ತೊಂದರೆಯಾಗುವುದು ಆರಂಭಿಕ ಕ್ಯಾಟರಾಕ್ಟ್ ಅಥವಾ ರೆಟಿನಾದ ಬದಲಾವಣೆಗಳ ಲಕ್ಷಣವಾಗಿರಬಹುದು.
Floaters ಮತ್ತು ಫ್ಲಾಶಸ್ ಸಮಸ್ಯೆ
ಒಂದೆರಡು ಫ್ಲೋಟರ್‌ಗಳು ಸಾಮಾನ್ಯ. ಆದರೆ ಹಠಾತ್ ಆಗಿ ಕಣ್ಣಿನ ಮುಂದೆ ಕಪ್ಪು ಚುಕ್ಕೆಯಂತೆ ಕಾಣಿಸಿಕೊಳ್ಳೋದು ಹೆಚ್ಚಾಗುವುದು. ಬೆಳಕಿನ ಮಿಂಚು ಅಂದರೆ ಫ್ಲಾಶಸ್​ ಕಾಣಿಸಿಕೊಳ್ಳುವುದು 'ರೆಟಿನಾ ಡಿಟ್ಯಾಚ್‌ಮೆಂಟ್' ಎಂಬ ಗಂಭೀರ ಕಣ್ಣಿನ ಸಮಸ್ಯೆಯ ಸಂಕೇತವಾಗಿದೆ. ಇದಕ್ಕೆ ತಕ್ಷಣದ ತುರ್ತು ಚಿಕಿತ್ಸೆ ಅಗತ್ಯ.
ಕೊಲೆಸ್ಟ್ರಾಲ್ ಬಗ್ಗೆ ಗಮನಹರಿಸಿ
ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇದ್ದರೆ ಅದು ಕಣ್ಣಿನ ಸುತ್ತ ಕೊಬ್ಬಿನಂಶದ ಶೇಖರಣೆಗೆ ಕಾರಣವಾಗಬಹುದು ಮತ್ತು ರೆಟಿನಾದ ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡಿ ದೃಷ್ಟಿ ತಾತ್ಕಾಲಿಕವಾಗಿ ಮರೆಯಾಗುವಂತೆ ಮಾಡಬಹುದು.

ಕಣ್ಣಿನ ತಪಾಸಣೆ ಯಾಕೆ ಮಾಡಿಸ್ಬೇಕು?

ಕಣ್ಣಿನ ಪರೀಕ್ಷೆಯು ಕೇವಲ ಕನ್ನಡಕದ ನಂಬರ್ ಬದಲಾಯಿಸುವುದಕ್ಕಾಗಿ ಮಾತ್ರವಲ್ಲ. ಇದು ಗ್ಲುಕೋಮಾ, ಮಧುಮೇಹದ ರೆಟಿನೋಪತಿ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.