ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸ
- ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸ ನಿಮಗಿದ್ಯಾ?
- ಎಣ್ಣೆ ಹಚ್ಚುವುದರಿಂದ ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯುತ್ತಾ?
ಬೆಂಗಳೂರು: ನಮ್ಮ ಹಿರಿಯರು ಅಂದಿನಿಂದಲೂ ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸವನ್ನು ಪಾಲಿಸಿಕೊಂಡು ಬಂದಿದ್ದಾರೆ. ಕೂದಲಿನ ಆರೈಕೆ ಹಾಗೂ ಪೋಷಣೆ ಒದಗಿಸಲು ನೆತ್ತಿಯ ಮೇಲೆ ಎಣ್ಣೆ ಬೀಳಬೇಕು ಎಂಬುದು ಅವರ ಮಾತು. ವಾರದಲ್ಲಿ ಒಂದರಿಂದ ಎರಡು ಬಾರಿ ಎಣ್ಣೆ ಹಚ್ಚುವುದರಿಂದ ಕೂದಲು ಬಲವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ ಎಂದು ಹಲವರು ಹೇಳ್ತಾರೆ. ಆದರೆ, ಈ ಮಾತು ನಿಜವೇ? ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.
ವೈದ್ಯರು ಈ ವಾಡಿಕೆ ಅಥವಾ ಮಾತುಗಳನ್ನು ತಳ್ಳಿಹಾಕಿದ್ದಾರೆ. ಎಣ್ಣೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಸ್ತವವಾಗಿ, ಕೂದಲಿನ ಆರೋಗ್ಯವು ನಮ್ಮ ಜೀನ್ಸ್, ಸೇವಿಸುವ ಆಹಾರ ಮತ್ತು ಜೀವನಶೈಲಿಯ ಮೇಲೆ ಅವಲಂಬಿಸಿರುತ್ತದೆ ಎನ್ನಲಾಗಿದೆ. ಹಳೆಯ ತಲೆಮಾರಿನವರ ಉತ್ತಮ ಕೂದಲಿಗೆ ಕಾರಣವೆಂದರೆ ಅವರು ತಿನ್ನುತ್ತಿದ್ದ ಉತ್ತಮ ಗುಣಮಟ್ಟದ ಆಹಾರ.
ಎಣ್ಣೆ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಮಾತ್ರ ಕೆಲಸ ಮಾಡುತ್ತದೆ. ಅದನ್ನು ಹೊಳೆಯುವಂತೆ, ಸಿಕ್ಕು ಮುಕ್ತವಾಗಿ ಮತ್ತು ಮೃದುವಾಗಿಸುತ್ತದೆ. ವಿಶೇಷವಾಗಿ ನೆತ್ತಿಯ ಮೇಲೆ ತಲೆಹೊಟ್ಟು ಇರುವವರು, ಎಣ್ಣೆ ಹಚ್ಚಿದರೆ, ಡ್ಯಾಂಡ್ರಫ್ ಸಮಸ್ಯೆ ಮತ್ತು ತುರಿಕೆ ಸಮಸ್ಯೆಗಳು ಇನ್ನೂ ಉಲ್ಬಣಿಸುತ್ತದೆ. ಅಲ್ಲದೆ, ಮುಖದ ಮೇಲೆ ಮೊಡವೆ ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್‌ನಂತಹ ತೊಂದರೆಗಳನ್ನು ಹೊಂದಿರುವವರು ತಲೆಗೆ ಎಣ್ಣೆ ಹಚ್ಚುವುದರಿಂದ ದೂರವಿರುವುದು ಸೂಕ್ತ ಎನ್ನಲಾಗಿದೆ.
ನೀವು ಎಣ್ಣೆ ಹಚ್ಚುವ ರೂಢಿಯನ್ನು ಹೊಂದಿದ್ದರೆ, ಸ್ನಾನಕ್ಕೂ ಅರ್ಧಗಂಟೆಗೂ ಮೊದಲು ಹಚ್ಚುವುದು ಒಳಿತು. ರಾತ್ರಿಯಿಡೀ ಹಚ್ಚಿಕೊಂಡು ಮಲಗುವುದು ಆರೋಗ್ಯಕರವಲ್ಲ ಎಂದು ಹೇಳಲಾಗಿದೆ. ಕೂದಲು ಉದುರುವಿಕೆಯಂತಹ ಸಮಸ್ಯೆಗಳು ನಿಮಗೆ ಇದ್ದಲ್ಲಿ, ಎಣ್ಣೆ ಹಚ್ಚುವ ಬದಲು ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ ಸಲಹೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.