ಕೆಂಪು ಬಣ್ಣದ ಹಣ್ಣು, ತರಕಾರಿ
- ಚಳಿಗಾಲದಲ್ಲಿ ಗಾಳಿಯ ಉಷ್ಣತೆ ಕಡಿಮೆಯಾದಂತೆ, ರೋಗಗಳು ಹರಡುವ ಸಾಧ್ಯತೆ ಹೆಚ್ಚು
- ಚಳಿಗಾಲಕ್ಕೆ ಈ ಕೆಂಪು ಹಣ್ಣು, ತರಕಾರಿ ಹೆಚ್ಚು ಪ್ರಯೋಜನ
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ ಈ ಕೆಂಪು ಹಣ್ಣುಗಳು
ಬೆಂಗಳೂರು: ಚಳಿಗಾಲ ಬಂದರೆ ಎಂದಿನಕ್ಕಿಂತ ಎರಡು ತಾಸು ಹೆಚ್ಚು ನಿದ್ರಿಸೋಣ ಅಂತ ಅನಿಸುವುದು ತೀರ ಸಾಮಾನ್ಯ. ಈ ಸಮಯದಲ್ಲಿ, ಗಾಳಿಯ ಉಷ್ಣತೆಯು ಕಡಿಮೆಯಾಗುತ್ತದೆ, ಇದು ನಮ್ಮ ದೇಹ ಕಾಲೋಚಿತ ಸೋಂಕುಗಳಿಗೆ ಸಿಲುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹಾಗೂ ಹೆಚ್ಚಾಗಿ ಗಂಟಲು ಬೇನೆ, ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳು ಕಾಡುತ್ತವೆ. ಇದಲ್ಲದೆ, ಚಳಿಗಾಲದಲ್ಲಿ ಹೃದಯದ ಮೇಲೆ ಹೆಚ್ಚಿದ ಒತ್ತಡದಿಂದಾಗಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವು ಹೆಚ್ಚಿರುತ್ತದೆ.
ತಜ್ಞರ ಪ್ರಕಾರ, ಚಳಿಗಾಲದಲ್ಲಿ ಹೃದಯಾಘಾತದ ಅಪಾಯವು ಶೇ.53ರಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ. ಈ ಸಮಯದಲ್ಲಿ, ಕೆಂಪು ಬಣ್ಣದ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಕಾಡುವ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿ ಎನ್ನಲಾಗಿದೆ. ಇವುಗಳಲ್ಲಿರುವ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ.
ದಾಳಿಂಬೆಯಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಹೃದಯ ಕಾಯಿಲೆಗಳ ಅಪಾಯವನ್ನು ತಡೆಗಟ್ಟುತ್ತದೆ ಹಾಗೂ ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ದಾಳಿಂಬೆಯನ್ನು ಸೇರಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ.
ಕ್ರ್ಯಾನ್‌ಬೆರಿ
ಕ್ರ್ಯಾನ್‌ಬೆರಿಗಳಲ್ಲಿರುವ ಸೂಕ್ಷ್ಮ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಂಟ್ರೋಲ್ಗೆ ತರುವಲ್ಲಿ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಶೀತಗಳಂತಹ ಸೋಂಕುಗಳನ್ನು ಕಡಿಮೆ ಮಾಡುತ್ತವೆ.
ಸೇಬು
ಕೆಂಪು ಸೇಬುಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಈ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆಂಟಿಆಕ್ಸಿಡೆಂಟ್ ಫ್ಲೇವನಾಯ್ಡ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಒಂದು ಅಥವಾ ಎರಡು ಸೇಬನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ತಜ್ಞರು ಸೂಚಿಸುತ್ತಾರೆ.
ಬೀಟ್‌ರೂಟ್
ಬೀಟ್‌ರೂಟ್‌ನಲ್ಲಿ ಜೀವಸತ್ವಗಳು, ನೈಟ್ರೇಟ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ಹೃದಯವನ್ನು ಆರೋಗ್ಯವಾಗಿಡುತ್ತವೆ. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ಗೆ ಗುಡ್ಬೈ ಹೇಳುತ್ತದೆ. ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಸಲಾಡ್, ಜ್ಯೂಸ್ ಅಥವಾ ಬೇಯಿಸಿದ ರೂಪದಲ್ಲಿ ಬೀಟ್‌ರೂಟ್ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಚಳಿಗಾಲದಲ್ಲಿ ಕೆಂಪು ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮಿನಂತಹ ಒಂದಷ್ಟು ಸಮಸ್ಯೆಗಳು ದೂರ ಉಳಿಯುತ್ತವೆ. ಹೃದಯದ ಆರೋಗ್ಯ ಕೂಡ ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಸಣ್ಣ ಬದಲಾವಣೆಗಳೊಂದಿಗೆ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ವಿಚಾರ ನಿಮಗೆ ನೆನಪಿರಲಿ,(ಏಜೆನ್ಸೀಸ್).