ಸಾಂದರ್ಭಿಕ ಚಿತ್ರ  
ಆರೋಗ್ಯ

ಯಾವ ವಯಸ್ಸಿನವರು ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ... WHO Guidelines

ಪ್ರಮುಖ ಮುಖ್ಯಾಂಶಗಳು

  • ವ್ಯಾಯಾಮಕ್ಕೆ ಒಂದು ನಿರ್ದಿಷ್ಟ ಮಿತಿ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ
  • ಆ ಮಿತಿಯನ್ನು ಮೀರಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾನೇ ಹಾನಿಕಾರ
  • WHO ಪ್ರಕಾರ ವಯಸ್ಸಿಗೆ ಅನುಗುಣವಾಗಿ ಮಾಡಬೇಕಾದ ವ್ಯಾಯಾಮದ ಮಿತಿಗಳ ಬಗ್ಗೆ ತಿಳಿಯೋಣ
WHO Guidelines : ಪ್ರತಿದಿನ ದೇಹ ದಂಡಿಸುವುದು ತುಂಬಾನೇ ಮುಖ್ಯ. ಇಲ್ಲವಾದಲ್ಲಿ ಜಡತ್ವ ತುಂಬಿಕೊಂಡು ವಿವಿಧ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಮಾನಸಿಕವಾಗಿಯೂ ದುರ್ಬಲರಾಗುತ್ತೇವೆ. ಆದ್ದರಿಂದ ತಪ್ಪದೇ ವ್ಯಾಯಾಮ ಮಾಡಿ. ಹಾಗಾಂತ, ಹೇಗಂದರೆ ಹಾಗೇ ವ್ಯಾಯಾಮ ಮಾಡಬಾರದು. ವ್ಯಾಯಾಮಕ್ಕೆ ಒಂದು ನಿರ್ದಿಷ್ಟ ಮಿತಿ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಆ ಮಿತಿಯನ್ನು ಮೀರಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ ಅಂತಾನೂ ಎಚ್ಚರಿಸಿದೆ.
ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಬಾಲಿವುಡ್ ಹಿರಿಯ ನಟ ಗೋವಿಂದ ತೀವ್ರ ಆಯಾಸದಿಂದ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿಯಾದ ವ್ಯಾಯಾಮವೇ ಆಯಾಸಕ್ಕೆ ಕಾರಣವೆಂದು ವೈದ್ಯರು ಹೇಳಿದ್ದಾಗಿ ತಿಳಿಸಿದರು. ಆದ್ದರಿಂದ, ಪ್ರತಿ ವಯೋಮಾನದವರಿಗೂ ಸೂಕ್ತವಾದ ವ್ಯಾಯಾಮ ಮಿತಿ ಇರುತ್ತದೆ ಅನ್ನೋದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ವಯಸ್ಸಿನ ಮಿತಿಗೆ ಅನುಗುಣವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
WHO ಪ್ರಕಾರ ವಯಸ್ಸಿಗೆ ಅನುಗುಣವಾಗಿ ಮಾಡಬೇಕಾದ ವ್ಯಾಯಾಮದ ಮಿತಿಗಳನ್ನು ನಾವೀಗ ತಿಳಿದುಕೊಳ್ಳೋಣ.

5 ರಿಂದ 17 ವರ್ಷ ವಯಸ್ಸಿನವರು

ಈ ವಯೋಮಾನದವರು ವಾರದಲ್ಲಿ ಕನಿಷ್ಠ 3 ದಿನ ಮಾತ್ರ ಲಘು ವ್ಯಾಯಾಮದಿಂದ ಆರಂಭಿಸಿ ತೀವ್ರ ದೈಹಿಕ ಚಟುವಟಿಕೆಯನ್ನು ಮಾಡಬೇಕು. ಇದರಲ್ಲಿ ಏರೋಬಿಕ್ ಚಟುವಟಿಕೆ ಹಾಗೂ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು ಸೇರಿರಬೇಕು.

18 ರಿಂದ 64 ವರ್ಷ ವಯಸ್ಸಿನವರು

ವಿಶ್ವ ಆರೋಗ್ಯ ಸಂಸ್ಥೆಯು ಈ ವಯೋಮಾನದವರಿಗೆ ವಾರಕ್ಕೆ 150 ರಿಂದ 300 ನಿಮಿಷಗಳ ಲಘು ವ್ಯಾಯಾಮ ಅಥವಾ 75 ರಿಂದ 150 ನಿಮಿಷಗಳ ತೀವ್ರ ವ್ಯಾಯಾಮವನ್ನು ಶಿಫಾರಸು ಮಾಡುತ್ತದೆ. ವಾರಕ್ಕೆ ಕನಿಷ್ಠ ಎರಡು ದಿನಗಳು ಸ್ನಾಯು ಬಲ ತರಬೇತಿಯನ್ನು ಪಡೆಯಬೇಕು.

65 ವರ್ಷ ಮೇಲ್ಪಟ್ಟವರು

ವಾರಕ್ಕೆ 150 ರಿಂದ 300 ನಿಮಿಷಗಳ ಲಘು ಹಾಗೂ ತೀವ್ರ ವ್ಯಾಯಾಮ ಮಾಡಬೇಕು. ಸ್ನಾಯು ನಷ್ಟವನ್ನು ತಡೆಗಟ್ಟಲು ತೂಕ ಎತ್ತುವ ತರಬೇತಿಯನ್ನು ವಾರಕ್ಕೆ 2 ರಿಂದ 3 ಬಾರಿ ಮಾಡಬೇಕು. ಅಲ್ಲದೆ, ಸಮತೋಲನ ವ್ಯಾಯಾಮಗಳನ್ನು ಸೇರಿಸುವುದು ಸಹ ಒಳ್ಳೆಯದು.

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು

WHO ವಾರಕ್ಕೆ 150 ನಿಮಿಷಗಳ ಲಘು ವ್ಯಾಯಾಮವನ್ನು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಶಿಫಾರಸು ಮಾಡುತ್ತದೆ. ಯಾವುದೇ ವ್ಯಾಯಾಮ ಕ್ರಮವನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ತಜ್ಞ ಸಲಹೆ

ವ್ಯಾಯಾಮ ತಜ್ಞ ಕ್ಯಾರೋಲ್ ಎವಿಂಗ್ ಗಾರ್ಬರ್ ಅವರ ಪ್ರಕಾರ, ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು 5 ರಿಂದ 10 ನಿಮಿಷಗಳ ನಡಿಗೆ ಅಥವಾ ಲಘು ವ್ಯಾಯಾಮ ಅಭ್ಯಾಸ ಮಾಡಲು ಸೂಚಿಸುತ್ತಾರೆ. ಅಂದರೆ, ದೇಹವನ್ನು ವಾರ್ಮಪ್​ ಮಾಡಿಕೊಳ್ಳಬೇಕು.

ಗಮನಿಸಿ

ಈ ಮೇಲಿನ ಮಾಹಿತಿಯು ವಿಶ್ವಾಸಾರ್ಹ ಮೂಲಗಳನ್ನು ಆಧರಿಸಿದ್ದರು ಕೂಡ ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೊದಲು ವೃತ್ತಿಪರ ಫಿಟ್‌ನೆಸ್ ತರಬೇತುದಾರ ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಯನ್ನು ಪಡೆಯುವುದು ಉತ್ತಮ, (ಏಜೆನ್ಸೀಸ್​).