Doorway Effect (ಸಾಂದರ್ಭಿಕ ಚಿತ್ರ) 
ಆರೋಗ್ಯ

ಬಾಗಿಲು ದಾಟಿದ ತಕ್ಷಣ ವಿಷಯ ಮರೆತುಹೋಗುವುದು ಯಾಕೆ? ಮೆದುಳಿನ ಈ ವಿಚಿತ್ರ ವರ್ತನೆಯ ಹಿಂದಿದೆ ಆಸಕ್ತಿದಾಯಕ ಕಾರಣ... Doorway Effect

Doorway Effect: ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋದ ತಕ್ಷಣ ಯಾಕೆ ಬಂದೆವು ಎಂದು ಮರೆಯುವುದು ಬಹುತೇಕ ಎಲ್ಲರಿಗೂ ಆಗಾಗ ಕಾಡುವ ಸಂಗತಿ. ಈ ವೇಳೆ ಜನರು ತಮ್ಮ ಸ್ಮರಣ ಶಕ್ತಿ ನಾಶವಾಗಿದೆ ಎಂದು ಭಾವಿಸುತ್ತಾರೆ. ಆದರೆ, ವಾಸ್ತವದಲ್ಲಿ ಇದು ಸಂಪೂರ್ಣವಾಗಿ ಬೇರೆಯೇ ಆಗಿದೆ. ಇದಕ್ಕೂ ನೆನಪಿನ ನಷ್ಟಕ್ಕೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ, ವಿಜ್ಞಾನದಲ್ಲಿ ಇದನ್ನು "ದಿ ಡೋರ್‌ವೇ ಎಫೆಕ್ಟ್" ಅಥವಾ "ಮನೆಬಾಗಿಲ ಪರಿಣಾಮ" ಎಂದು ಕರೆಯುತ್ತಾರೆ.
ಆದರೆ ಈ ಪರಿಣಾಮ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಏಕೆ ಸಂಭವಿಸುತ್ತದೆ? ಎಂಬುದನ್ನು ನೋಡೋಣ ಬನ್ನಿ...

ಏನಿದು "ಡೋರ್‌ವೇ ಎಫೆಕ್ಟ್"?

ನಮ್ಮ ಮೆದುಳು ಮಾಹಿತಿಯನ್ನು "ಸಂದರ್ಭಗಳಿಗೆ" ಅನುಗುಣವಾಗಿ ಸಂಗ್ರಹಿಸುತ್ತದೆ. ನಾವು ಒಂದು ಕೋಣೆಯಲ್ಲಿದ್ದಾಗ ನಮ್ಮ ಮೆದುಳು ಆ ಕೋಣೆಯ ಪರಿಸರಕ್ಕೆ ತಕ್ಕಂತೆ ಆಲೋಚನೆಗಳನ್ನು ಜೋಡಿಸಿರುತ್ತದೆ. ಯಾವಾಗ ನಾವು ಮತ್ತೊಂದು ಕಡೆ ಹೋಗಲು ಕೋಣೆಯ ಬಾಗಿಲನ್ನು ದಾಟುತ್ತೇವೋ ಆಗ ಮೆದುಳು ಹಳೆಯ ಸಂದರ್ಭ ಮುಗಿಯಿತು. ಈಗ ಹೊಸ ಸಂದರ್ಭ ಶುರುವಾಯಿತು ಎಂದು ಭಾವಿಸಿ ಹಿಂದಿನ ಆಲೋಚನೆಗಳನ್ನು ತಾತ್ಕಾಲಿಕವಾಗಿ ಅಳಿಸಿ ಹಾಕುತ್ತದೆ. ಅಂದರೆ, ಬಾಗಿಲು ಮೆದುಳಿಗೆ ಒಂದು 'ಫೈಲ್ ಕ್ಲೋಸ್' ಮಾಡಿ 'ಹೊಸ ಫೈಲ್' ತೆರೆಯುವ ಸಂಕೇತದಂತೆ ಕೆಲಸ ಮಾಡುತ್ತದೆ.
ಸರಳವಾಗಿ ಹೇಳುವುದಾದರೆ, ನಮ್ಮ ಮೆದುಳು ಸ್ಮಾರ್ಟ್‌ಫೋನ್‌ನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಫೋನ್​ಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅನಗತ್ಯ ಅಪ್ಲಿಕೇಶನ್​ಗಳನ್ನು ಮುಚ್ಚುವಂತೆಯೇ ನಮ್ಮ ಮೆದುಳು ಕೂಡಾ ಅನಗತ್ಯ ಮಾಹಿತಿಯನ್ನು ತೆಗೆದುಹಾಕುತ್ತದೆ. ಹೊಸ ಕೋಣೆಗೆ ಪ್ರವೇಶಿಸಿದಾಗ ನಿಮ್ಮ ಮೆದುಳು ಹೊಸ ಆರಂಭವೆಂದು ಅರ್ಥೈಸಿಕೊಂಡು ಹಳೆಯ ಮಾಹಿತಿಯನ್ನು ಅಳಿಸಿಹಾಕುತ್ತದೆ. ಇದು ದೌರ್ಬಲ್ಯವಲ್ಲ, ಆದರೆ ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುವ ಒಂದು ಮಾರ್ಗವಾಗಿದೆ.

ನಾವು ಇದಕ್ಕೆ ಏಕೆ ಬಲಿಯಾಗುತ್ತಿದ್ದೇವೆ?

ನಮ್ಮ ಮೆದುಳಿನ ತಾತ್ಕಾಲಿಕ ಸ್ಮರಣಶಕ್ತಿ ಅಥವಾ ವರ್ಕಿಂಗ್ ಮೆಮೊರಿ ಒಂದು ಬಾರಿಗೆ ಕೆಲವೇ ಮಾಹಿತಿಗಳನ್ನು ಹಿಡಿದಿಟ್ಟುಕೊಳ್ಳಬಲ್ಲದು. ನಾವು ಒತ್ತಡದಲ್ಲಿದ್ದಾಗ ಅಥವಾ ದಣಿದಿದ್ದಾಗ ಈ ಸಾಮರ್ಥ್ಯ ಇನ್ನಷ್ಟು ಕಡಿಮೆಯಾಗುತ್ತದೆ. ಹೊಸ ಕೋಣೆಗೆ ಹೋದ ತಕ್ಷಣ ಮೆದುಳು ಹಳೆಯ ಮಾಹಿತಿಯನ್ನು 'ಡಿಲೀಟ್' ಮಾಡಿ ಹೊಸ ಪರಿಸರಕ್ಕೆ ಜಾಗ ಮಾಡಿಕೊಡುತ್ತದೆ.

'ಬಾಗಿಲಿನ ಪರಿಣಾಮ'ವನ್ನು ತಪ್ಪಿಸುವುದು ಹೇಗೆ?

ದ್ವಾರದ ಪರಿಣಾಮವನ್ನು ತಪ್ಪಿಸಲು ನೀವು ತೆಗೆದುಕೊಳ್ಳಬೇಕಾದ ಸರಳ ಹಂತಗಳೆಂದರೆ, ನೀವು ಯಾವ ವಸ್ತುವನ್ನು ತೆಗೆದುಕೊಂಡು ಹೋಗಲು ಬಂದಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ. ಅಲ್ಲದೇ, ನೀವೇನಾದರೂ ಸ್ವಲ್ಪ ದೂರ ಹೋಗಬೇಕಾಗಿದ್ದರೆ ಆ ವಸ್ತುವಿಗೆ ಸಂಬಂಧಿಸಿದಂತೆ ಏನಾದರೂ ವಸ್ತುವನ್ನು ತೆಗೆದುಕೊಂಡು ಹೋಗಿ. ಇದು ನಿಮಗೆ ಬೇಕಾದ ವಸ್ತುವನ್ನು ಪಡೆಯಲು ಸಹಾಯ ಮಾಡುತ್ತದೆ.

ನಾನು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ಕೋಣೆಯ ಮಧ್ಯದಲ್ಲಿ ವಸ್ತುಗಳನ್ನು ಮರೆತುಬಿಡುವುದು ಸಾಮಾನ್ಯ ಘಟನೆ. ಇದೇನು ದೊಡ್ಡ ಕಾಯಿಲೆಯೇನಿಲ್ಲ. ಆದಾಗ್ಯೂ, ನಿಮ್ಮ ದೈನಂದಿನ ಜೀವನದಲ್ಲಿ ಜನರ ಹೆಸರುಗಳು, ಪ್ರಮುಖ ಸಭೆಗಳು ಅಥವಾ ಪ್ರಮುಖ ಕೆಲಸಗಳಂತಹ ಪ್ರಮುಖ ವಿಷಯಗಳನ್ನು ನೀವು ಮರೆಯಲು ಆರಂಭಿಸಿದ್ದರೆ ಇದು ಎಚ್ಚರಿಕೆಯ ಸಂಕೇತವಾಗಿದೆ. ಹಾಗಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.