ಗರ್ಭಾವಸ್ಥೆಯಲ್ಲಿ ತೀವ್ರ ಮತ್ತು ಅನಿರೀಕ್ಷಿತ ತಲೆನೋವು ಸಾಮಾನ್ಯವೋ ಅಥವಾ ಸಮಸ್ಯೆಯ ಮುನ್ಸೂಚನೆಯೋ?.
ಯಾವ ತಿಂಗಳಲ್ಲಿ ವಿಪರೀತ ತಲೆನೋವು ಕಾಣಿಸಿಕೊಂಡರೆ ಎಚ್ಚೆತ್ತುಕೊಳ್ಳಬೇಕು?.
ಕುತ್ತಿಗೆ ಬಿಗಿಯಾಗುವುದು, ಗೊಂದಲ, ಮಾತು ತೊದಲುವ ಲಕ್ಷಣ ಕಂಡು ಬಂದರೆ ಎಚ್ಚರ.
ಗರ್ಭಾವಸ್ಥೆಯಲ್ಲಿ ತಲೆ ನೋವು ಕಾಣಿಸಿಕೊಳ್ಳುವುದು. ದೇಹದಲ್ಲಿ ಬದಲಾವಣೆಯಾಗುವುದು, ವಾಕರಿಕೆ ಸಾಮಾನ್ಯ. ಇದಕ್ಕೆ ಹಾರ್ಮೋನು, ನೀರಿನ ಕೊರತೆ. ವಿಪರೀತ ಆಯಾಸ ಕಾರಣ. ಆದರೆ, ಈ ಲಕ್ಷಣಗಳು ಕೆಲವೊಮ್ಮೆ ಗಂಭೀರ ಸಮಸ್ಯೆಯ ಮುನ್ಸೂಚನೆಯಾಗಿದೆ. ಹಾಗಾದ್ರೆ ವಿಪರೀತ ಕಾಡುವ ಈ ತಲೆನೋವು ಯಾವುದರ ಬಗ್ಗೆ ಮುನ್ಸೂಚನೆ ನೀಡುತ್ತಿದೆ. ತಾಯಿ-ಮಗುವಿನ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಹೇಗೆ?. ತಲೆನೋವಿನ ಬಗ್ಗೆ ಯಾವಾಗ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯರಿಗೆ ಕಾಡುವ ತಲೆನೋವು ಸಾಮಾನ್ಯವೇ, ಅಥವಾ ಇದು ಕಾಯಿಲೆಯ ಮುನ್ಸೂಚನೆಯೇ ಎನ್ನುವುದನ್ನು ವೈದ್ಯರ ಬಳಿ ಕೇಳುತ್ತಿರುತ್ತಾರೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಬರುವ ಹೆಚ್ಚಿನ ತಲೆನೋವುಗಳಿಗೆ ಪ್ರೊಜೆಸ್ಟರಾನ್ ಹಾರ್ಮೋನ್ ಏರಿಳಿತ, ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು , ನಿದ್ದೆಗೆಡುವುದು, ಒತ್ತಡ ಅಥವಾ ಕಾಫಿ-ಟೀ ಕುಡಿಯುವುದನ್ನು ದಿಢೀರನೆ ನಿಲ್ಲಿಸುವುದು ಕಾರಣವಾಗಿರುತ್ತದೆ. ಇವು ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ, ಈ ತಲೆನೋವು ದೇಹದ ಸಹಜ ಬದಲಾವಣೆಗಳನ್ನು ಮೀರಿ, ತಕ್ಷಣ ವೈದ್ಯರನ್ನು ಕಾಣಲೇಬೇಕಾದ 'ಅಪಾಯದ ಮುನ್ಸೂಚನೆ'ಯಾಗಿ ಬದಲಾಗುವುದು ಯಾವಾಗ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುವುದರಿಂದ ಸಣ್ಣ ಪ್ರಮಾಣದ ತಲೆನೋವು ಬರುವುದು ಸಹಜ. ಇದು ಚೆನ್ನಾಗಿ ನಿದ್ರೆ ಮಾಡಿದರೆ, ಸಾಕಷ್ಟು ನೀರು ಕುಡಿದರೆ ಮತ್ತು ಪ್ಯಾರಸಿಟಮಾಲ್‌ನಂತಹ ಸುರಕ್ಷಿತ ಮಾತ್ರೆಗಳನ್ನು ತೆಗೆದುಕೊಂಡರೆ ಕಡಿಮೆಯಾಗುತ್ತದೆ.
ಆದರೆ, ಗರ್ಭಾವಸ್ತೆಯ ತಿಂಗಳು ಮೂರನೇ ತ್ರೈ ಮಾಸಿಕಕ್ಕೆ ಕಾಲಿಟ್ಟಾಗ ತಲೆನೋವು ತೀವ್ರವಾಗಿ ಕಾಡಿದರೆ ಆಗ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಬರುವ ತಲೆನೋವಿಗೆ ಮುಖ್ಯ ಕಾರಣ ಪ್ರೀ-ಎಕ್ಲಾಂಪ್ಸಿಯಾದ ಮುನ್ಸೂಚನೆಯಾಗಿರಬಹುದು.
ಇದು ವಿಪರೀತ ರಕ್ತದೊತ್ತಡ ಹಾಗೂ ಕಿಡ್ನಿ ಮತ್ತು ಲಿವರ್‌ಗೆ ಹಾನಿ ಮಾಡುವಂತಹ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಪ್ರೀ-ಎಕ್ಲಾಂಪ್ಸಿಯಾದಿಂದ ಬರುವ ತಲೆನೋವು ವಿಪರೀತವಾಗಿರುತ್ತದೆ, ಬಿಟ್ಟು ಬಿಟ್ಟು ಬಡಿಯುವಂತಿರುತ್ತದೆ ಮತ್ತು ಎಷ್ಟೇ ನೀರು ಕುಡಿದರೂ, ವಿಶ್ರಾಂತಿ ಪಡೆದರೂ ಕಡಿಮೆಯಾಗುವುದಿಲ್ಲ.
ಬಿಡದೆ ಕಾಡುವ ತಲೆನೋವಿನ ಜೊತೆಗೆ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ಅದನ್ನು ಕೂಡಲೇ ವೈದ್ಯರ ಗಮನಕ್ಕೆ ತರಬೇಕು:
ದೃಷ್ಟಿ ದೋಷ: ಕಣ್ಣು ಮಂಜಾಗುವುದು, ಬೆಳಕನ್ನು ನೋಡಲು ಕಷ್ಟವಾಗುವುದು, ಕಣ್ಣೆದುರು ಚುಕ್ಕೆಗಳು ಅಥವಾ ಮಿಂಚಿನಂತೆ ಬೆಳಕು ಕಾಣಿಸಿಕೊಳ್ಳುವುದು.
ಊತ: ಕೈಗಳು ಅಥವಾ ಮುಖದಲ್ಲಿ ವಿಪರೀತ ಊತ ಕಾಣಿಸಿಕೊಳ್ಳುವುದು.
ತೂಕ: ಅತಿ ಕಡಿಮೆ ಅವಧಿಯಲ್ಲಿ ದೇಹದ ತೂಕ ದಿಢೀರನೆ ಹೆಚ್ಚಾಗುವುದು.
ನೋವು: ಎದೆಯ ಪಕ್ಕೆಲುಬುಗಳ ಕೆಳಭಾಗದಲ್ಲಿ, ಹೊಟ್ಟೆಯ ಬಲಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು.
ಯಾವುದೇ ಮುನ್ಸೂಚನೆ ಇಲ್ಲದೆ, ಗುಡುಗು ಬಡಿದಂತೆ ಹಠಾತ್ತನೆ ಬಂದು, ಕೆಲವೇ ಸೆಕೆಂಡುಗಳಲ್ಲಿ ತಲೆ ಸಿಡಿಯುವಷ್ಟು ತೀವ್ರವಾಗುವ ತಲೆನೋವನ್ನು 'ಥಂಡರ್‌ಕ್ಲ್ಯಾಪ್ ಹೆಡ್‌ಏಕ್' ಎನ್ನುತ್ತಾರೆ. ಇದು ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದರ ಅಥವಾ ಮೆದುಳಿನೊಳಗೆ ರಕ್ತಸ್ರಾವವಾಗಿರುವುದರ ಲಕ್ಷಣವಾಗಿರಬಹುದು.
ಇದಲ್ಲದೆ, ತಲೆನೋವಿನ ಜೊತೆಗೆ ಅತಿ ಜ್ವರ, ಕುತ್ತಿಗೆ ಬಿಗಿಯಾಗುವುದು, ಗೊಂದಲ, ಮಾತು ತೊದಲುವುದು, ದೇಹದ ಒಂದು ಭಾಗ ಮರಗಟ್ಟುವಿಕೆ ಅಥವಾ ಸ್ವಾಧೀನ ಕಳೆದುಕೊಳ್ಳುವುದು ಕಂಡುಬಂದರೆ ಕ್ಷಣಾರ್ಧವೂ ತಡಮಾಡದೆ ಆಸ್ಪತ್ರೆಗೆ ಧಾವಿಸಬೇಕು.
ತೀವ್ರ ತಲೆನೋವಿನಿಂದ ಬಳಲುತ್ತಿರುವ ಗರ್ಭಿಣಿ ಆಸ್ಪತ್ರೆಗೆ ಬಂದಾಗ, ವೈದ್ಯರು ಮೊದಲು ರಕ್ತದೊತ್ತಡವನ್ನು ಪರೀಕ್ಷಿಸುತ್ತಾರೆ. ಮೂತ್ರದಲ್ಲಿ ಪ್ರೋಟೀನ್ ಅಂಶ ಇದೆಯೇ ಎಂದು ನೋಡುತ್ತಾರೆ. ಲಿವರ್, ಕಿಡ್ನಿ ಮತ್ತು ಪ್ಲೇಟ್‌ಲೆಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ತಿಳಿಯಲು ರಕ್ತ ಪರೀಕ್ಷೆ ಮಾಡುತ್ತಾರೆ. ಒಂದು ವೇಳೆ ನರಮಂಡಲದ ಸಮಸ್ಯೆಗಳಿರುವುದು ಕಂಡುಬಂದರೆ, ಗರ್ಭಿಣಿಯರಿಗೆ ಸುರಕ್ಷಿತವಾದ ಎಂಆರ್‌ಐ ಸ್ಕ್ಯಾನಿಂಗ್ ಮೂಲಕ ಮೆದುಳಿನ ಸ್ಥಿತಿಯನ್ನು ಪರೀಕ್ಷಿಸುತ್ತಾರೆ.
ಈ ಲೇಖನವನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವಿದ್ಯಾ ಮುರಳೀಧರ್ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ವಿಜಯವಾಣಿ ಡಾಟ್ ನೆಟ್ ಕಾಮ್ ದೃಢ ಪಡಿಸುವುದಿಲ್ಲ.