ಆಟೋ ಬ್ರೂವರಿ ಸಿಂಡ್ರೋಮ್ ಕಾಯಿಲೆ
- ಮದ್ಯಪಾನ ಮಾಡಿಲ್ಲ ಎಂದರೂ ಮಾಡಿದಂತ ಅನುಭವ
- ಏನದು ಲಕ್ಷಣಗಳು? ಇದು ಅಪಾಯಕಾರಿಯೇ?
- ಇಲ್ಲಿದೆ ನೋಡಿ ಈ ಪ್ರಶ್ನೆಗಳಿಗೆ ವಿವರವಾದ ಉತ್ತರ
ಬೆಂಗಳೂರು: ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಮದ್ಯಪಾನ ಮಾಡಿದಾಗ, ನಶೆಯಲ್ಲಿ ತೂರಾಡುವುದು ಅಥವಾ ಕಿಕ್ ಅನುಭವ ಸಿಗುತ್ತದೆ. ಆದರೆ, ಕುಡಿದಿಲ್ಲ ಎಂದರೂ ಮದ್ಯ ಕುಡಿದಂತೆ ಭಾಸವಾಗುವುದು ಏಕೆ? ಅಷ್ಟಕ್ಕೂ ಇದರ ಹಿಂದಿರುವ ಕಾರಣವೇನು? ಎಂಬುದರ ವಿವರ ಹೀಗಿದೆ ನೋಡಿದೆ.
ದೇವರಾಣೆ ಕುಡಿದಿಲ್ಲ ಎಂದರೂ ಕುಡಿದಂತೆಯೇ!
ಒಂದು ಹನಿ ಮದ್ಯಪಾನ ಮುಟ್ಟದಿದ್ದರೂ, ಕುಡಿದ ವ್ಯಕ್ತಿಯಂತೆ ಆಡುವುದು, ಬಾಯಿಯಿಂದ ಮದ್ಯದ ವಾಸನೆ ಬರುವುದು ಕಾಡುತ್ತದೆ. ಇದು ನಂಬಲು ಅಸಾಧ್ಯವೆನಿಸಿದರೂ ಅಸಲಿಗೆ ದಿಟವೇ! ಏಕೆಂದರೆ, ಇದು ಜಗತ್ತಿನಲ್ಲಿ ಒಂದು ಅಪರೂಪದ ಕಾಯಿಲೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಆಟೋ-ಬ್ರೂವರಿ ಸಿಂಡ್ರೋಮ್' ಅಥವಾ 'ಗಟ್ ಫರ್ಮೆಂಟೇಶನ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ. ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವವರ ದೇಹವು ಮದ್ಯ ಸೇವಿಸದಿದ್ದರೂ ದೇಹದೊಳಗೆ ಮದ್ಯವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ.
ಎಥೆನಾಲ್ ಆಗಿ ಪರಿವರ್ತನೆ
ಅಷ್ಟಕ್ಕೂ ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ನೋಡುವುದಾದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕೆಲವು ರೀತಿಯ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. 'ಸ್ಯಾಕರೊಮೈಸಸ್ ಸೆರೆವಿಸಿಯಾ' ನಂತಹ ಯೀಸ್ಟ್ ವಿಧಗಳು ಕರುಳಿನಲ್ಲಿ ಅಧಿಕವಾಗಿ ಸಂಗ್ರಹವಾದಾಗ ಈ ಸಮಸ್ಯೆ ಉದ್ಭವಿಸುತ್ತದೆ. ಈ ಬ್ಯಾಕ್ಟೀರಿಯಾಗಳು ನಾವು ಸೇವಿಸುವ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶವನ್ನು ಆಹಾರವಾಗಿ ತೆಗೆದುಕೊಂಡು ಅವುಗಳನ್ನು ನೇರವಾಗಿ ಎಥೆನಾಲ್ ಆಗಿ ಪರಿವರ್ತಿಸುತ್ತವೆ.
ಅಂದರೆ, ನಾವು ತಿನ್ನುವ ಅನ್ನ ಅಥವಾ ಬ್ರೆಡ್ ನಮ್ಮ ಹೊಟ್ಟೆಯಲ್ಲಿ ಹುದುಗಿ, ಆಲ್ಕೋಹಾಲ್ ಆಗಿ ಪರಿವರ್ತನೆಗೊಂಡು ರಕ್ತದಲ್ಲಿ ಸೇರಿಕೊಳ್ಳುತ್ತದೆ. ಇದರಿಂದಾಗಿ, ವ್ಯಕ್ತಿಯು ಮದ್ಯವನ್ನು ಕುಡಿಯದಿದ್ದರೂ, ಕುಡಿದಂತೆ ಮತ್ತು ತೀವ್ರವಾಗಿ ಅಮಲೇರಿದಂತೆ ಉಂಟಾಗುತ್ತದೆ. ಬ್ರೆಥ್ ಅನಾಲೈಜರ್ ಪರೀಕ್ಷೆಯನ್ನು ಮಾಡಿದರೂ ಸಹ, ಅದರಲ್ಲಿ ಆ ವ್ಯಕ್ತಿ ಆಲ್ಕೋಹಾಲ್ ಸೇವನೆ ಮಾಡಿದ್ದಾರೆ ಎಂದೇ ತೋರಿಸುತ್ತದೆ.
ರೋಗ ಲಕ್ಷಣಗಳೇನು?
ಈ ರೋಗದ ಲಕ್ಷಣಗಳು ಮದ್ಯಪಾನದ ಲಕ್ಷಣಗಳನ್ನೇ ಹೋಲುವುದು ನಿಜಕ್ಕೂ ಅಚ್ಚರಿಯೇ. ಅದರಲ್ಲಿ ಮುಖ್ಯವಾದವು, ತಲೆತಿರುಗುವಿಕೆ, ಗೊಂದಲ, ದುರ್ಬಲಗೊಂಡ ಏಕಾಗ್ರತೆ ಮತ್ತು ಉಸಿರಿನಲ್ಲಿ ಆಲ್ಕೋಹಾಲ್ ವಾಸನೆ. ಈ ಸಿಂಡ್ರೋಮ್ ವಿಶೇಷವಾಗಿ ಮಧುಮೇಹ, ಬೊಜ್ಜು ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿರುವ ಜನರಲ್ಲಿ ಕಂಡುಬರುತ್ತದೆ. ಅಲ್ಲದೆ, ಪ್ರತಿಜೀವಕಗಳ ದೀರ್ಘಕಾಲದ ಬಳಕೆಯು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಮುಂದಿನ ದಿನಗಳಲ್ಲಿ ಇದು ಲಿವರ್ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಅದೃಷ್ಟವಶಾತ್, ಈ ವಿಚಿತ್ರ ಹಾಗೂ ಅಪರೂಪದ ಕಾಯಿಲೆಗೆ ಚಿಕಿತ್ಸೆಯಿದೆ. ದೇಹದಲ್ಲಿ ಯೀಸ್ಟ್ ಬೆಳವಣಿಗೆಯನ್ನು ಹತೋಟಿಗೆ ತರಲು ವೈದ್ಯರು ಸಾಮಾನ್ಯವಾಗಿ ಶಿಲೀಂಧ್ರ ವಿರೋಧಿ ಮೆಡಿಸನ್ಗಳನ್ನು ಸೂಚಿಸುತ್ತಾರೆ. ಇದರೊಂದಿಗೆ, ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತಿಮುಖ್ಯ. ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳನ್ನು ತಪ್ಪಿಸುವುದು ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ದೇಹಕ್ಕೆ ಸೇರಿಸುವುದು.
ಇವು ದೇಹದಲ್ಲಿ ಆಲ್ಕೋಹಾಲ್ ಅಂಶವನ್ನು ಉತ್ಪಾದಿಸುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಎಷ್ಟು ಶಕ್ತಿಶಾಲಿ ಮತ್ತು ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ 'ಆಟೋ-ಬ್ರೂವರಿ ಸಿಂಡ್ರೋಮ್' ಉತ್ತಮ ಹಾಗೂ ಸ್ಪಷ್ಟ ಉದಾಹರಣೆ,(ಏಜೆನ್ಸೀಸ್).
ವಿಶೇಷ ಸೂಚನೆ: ಇಲ್ಲಿರುವ ಮಾಹಿತಿ ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ನಿಮಗೆ ಅನುಮಾನ ಅಥವಾ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ, ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.