ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
- ಮೋಜಿನ ಮದ್ಯಪಾನ ನಮ್ಮ ಆರೋಗ್ಯಕ್ಕೆ ಕೊಡಲಿಪೆಟ್ಟು
- ಆರಂಭದಲ್ಲಿ ಮೋಜಿನಿಂದ ಶುರು, ನಂತರದಲ್ಲಿ ಚಟವಾಗಿ ಮಾರ್ಪಡುತ್ತದೆ
- ಕುಡಿತದಿಂದ ದೇಹದಲ್ಲಿ ಆಗುವ ಬದಲಾವಣೆಗಳು ಒಂದಲ್ಲ, ಎರಡಲ್ಲ...
Alcohol Affects: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬಾಟಲಿ ಅಥವಾ ಮದ್ಯದ ಪ್ಯಾಕೆಟ್ ಮೇಲೆ ಬರೆದಿದ್ದರೂ ಕುಡಿತಕ್ಕೆ ದಾಸರಾದವರು ಮಾತ್ರ ಅದಕ್ಕೆಲ್ಲ ಕಿಂಚಿತ್ತು ತಲೆಕಡಿಸಿಕೊಳ್ಳಲ್ಲ! ಕೆಲವರು ವಾರಾಂತ್ಯದಲ್ಲಿ ತಮ್ಮ ಮಾನಸಿಕ ನೆಮ್ಮದಿ ಮತ್ತು ಸಂತೋಷಕ್ಕಾಗಿ ಕುಡಿದರೆ, ಇನ್ನೂ ಕೆಲವರು ಪ್ರತಿದಿನ ಕಂಠಪೂರ್ತಿ ಸೇವಿಸಿ, ನಶೆಯಲ್ಲಿ ತೂರಾಡುತ್ತಾರೆ.
ಅಷ್ಟಕ್ಕೂ, ಇದಕ್ಕೆಲ್ಲ ಕಾರಣವೇನು?
ಅದೇನೋ ಮದ್ಯಪಾನ ಮಾಡ್ತಿದ್ದಂತೆ ದೇಹದಲ್ಲಿ ಮಂದಗತಿಯಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಎಣ್ಣೆಯ ಪ್ರಮಾಣ ಏರುತ್ತಿದ್ದಂತೆ, ಅಮಲು ಕೂಡ ಹೆಚ್ಚಾಗುತ್ತೆ. ಕೆಲವೊಮ್ಮೆ ನಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ ಹಾಗೂ ಏನು ಮಾತನಾಡುತ್ತಿದ್ದೇವೆ ಎಂಬ ಅರಿವೆ ಇರುವುದಿಲ್ಲ. ಅಷ್ಟಕ್ಕೂ, ಇದಕ್ಕೆಲ್ಲ ಕಾರಣವೇನು? ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ದೊಡ್ಡ ಸಮಸ್ಯೆಗೂ ಕಾರಣ
ಮದ್ಯ ಸೇವಿಸುತ್ತಿದ್ದಂತೆ ಡೋಪಮೈನ್ ಮತ್ತು ಎಂಡಾರ್ಫಿನ್‌ನಂತಹ ಹಾರ್ಮೋನುಗಳು ಮಿದುಳಿನಲ್ಲಿ ರಿಲೀಸ್ ಆಗುತ್ತವೆ. ಇದು ಕ್ಷಣಿಕ ಸುಖ ಮತ್ತು ಸಂತೋಷವನ್ನು ನೀಡುತ್ತದೆ. ಈ ಮಧ್ಯೆ, ನೀವು ಹೆಚ್ಚು ತಿಂದರೆ ಅಥವಾ ಕುಡಿದರೆ, ಬೇಡದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅತಿಯಾದ ಮದ್ಯಪಾನವು ಮಿದುಳಿನ ಚಟುವಟಿಕೆಯನ್ನು ಕಡಿತಗೊಳಿಸುತ್ತದೆ. ಇದರಿಂದ ನರಗಳು ಡ್ಯಾಮೇಜ್ ಆಗಲಿವೆ. ಹೃದಯ ಬಡಿತ ಕಡಿಮೆಯಾಗುತ್ತದೆ ಮತ್ತು ಉಸಿರಾಟ ನಿಧಾನವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ದೊಡ್ಡ ಸಮಸ್ಯೆಗೂ ಕಾರಣವಾಗಬಹುದು.
ಎಣ್ಣೆ ಎಫೆಕ್ಟ್ ಕುಡಿದ ತಕ್ಷಣ ಕಾಡಲು ಶುರುವಾಗುತ್ತದೆ. ಮದ್ಯಪಾನ ಮಾಡಿದ ಕೇವಲ 6 ನಿಮಿಷಗಳಲ್ಲಿ ಅದರ ಪರಿಣಾಮ ಮಿದುಳಿನ ಕೋಶಗಳನ್ನು ತಲುಪುತ್ತದೆ. ಆ ಸಮಯದಲ್ಲಿ, ಡೋಪಮೈನ್ ಬಿಡುಗಡೆಯಾಗುತ್ತದೆ. ಇದು ಖುಷಿ ಮತ್ತು ವಿಶ್ರಾಂತಿಯ ಭಾವನೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಗಾಬಾ ಅಮೈನೊ ಬ್ಯುಟರಿಕ್ ಆಮ್ಲ (GABA) ಎಂಬ ನ್ಯೂರೋಟ್ರಾನ್ಸ್ಮೀಟರ್. ಇದು ನಿಮ್ಮನ್ನು ಇದಕ್ಕಿದ್ದಂತೆ ಧೈರ್ಯಶಾಲಿ ಎಂಬ ಭಾವನೆಗೆ ದೂಡುತ್ತದೆ ಮತ್ತು ನಿಮ್ಮಿಂದ ಅಪಾಯಕಾರಿ, ಅನಾಹುತಗಳನ್ನು ಮಾಡುವಂತೆ ಮಾಡುತ್ತದೆ. ಇದು ಮದ್ಯದ ಪ್ರಮುಖ ಅಡ್ಡಪರಿಣಾಮ!
ಸುಖ ನಿದ್ರೆಗಾಗಿ ಕುಡಿತದ ಅಭ್ಯಾಸ
ಅನೇಕರು ರಾತ್ರಿಯಲ್ಲಿ ಒಳ್ಳೆಯ ನಿದ್ರೆಗೆ ಜಾರಲು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಸಲಿಗೆ, ಅದು ಅವರ ನಿದ್ರೆಯನ್ನು ಅಡ್ಡಿಪಡಿಸುತ್ತಿದೆ ಎಂಬ ಶಾಕಿಂಗ್ ಸಂಗತಿ ಅವರಿಗೆ ತಿಳಿದಿಲ್ಲ. ಆಲ್ಕೋಹಾಲ್ ಬಹುಬೇಗನೆ ನಿದ್ರಿಸಲು ಸಹಾಯ ಮಾಡಿದರೂ, ಆ ವ್ಯಕ್ತಿಯ ನಿದ್ರೆಯ ಗುಣಮಟ್ಟವನ್ನು ದಿನ ಕಳೆದಂತೆ ಕಡಿಮೆ ಮಾಡುತ್ತದೆ. ಇದು ಮರುದಿನ ಹೆಚ್ಚಿನ ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಮದ್ಯವು ಸ್ನಾಯುಗಳನ್ನು ಸಡಿಲಗೊಳಿಸುವುದರಿಂದ ಗೊರಕೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ.
ಮದ್ಯಪಾನ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ಕಿಡ್ನಿಗಳ ಮೇಲೆ ಪರಿಣಾಮ ಬೀರುತ್ತದೆ. ಎಣ್ಣೆಯನ್ನು ಕುಡಿಯುವುದರಿಂದ ಅತಿಯಾದ ಮೂತ್ರ ವಿಸರ್ಜನೆಯಿಂದಾಗಿ ದೇಹದಲ್ಲಿ ನೀರಿನ ಕೊರತೆ ಕೂಡ ಉಂಟಾಗುತ್ತದೆ. ವಾಸೊಪ್ರೆಸಿನ್ ಎಂಬ ಹಾರ್ಮೋನ್ ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ನಿರ್ಜಲೀಕರಣ ದ್ವಿಗುಣಗೊಳ್ಳುತ್ತದೆ. ಒಟ್ಟಾರೆಯಾಗಿ, ಮೋಜಿನ ನೆಪದಲ್ಲಿ ಶುರುವಾಗುವ ಕುಡಿತ, ಚಟವಾಗಿ ಬದಲಾಗುವ ಮೂಲಕ ದೊಡ್ಡ ಅಪಾಯವನ್ನು ತಂದೊಡ್ಡಲಿದೆ,(ಏಜೆನ್ಸೀಸ್).