Weight loss: ಇಂದಿನ ಜೀವನಶೈಲಿಯಲ್ಲಿ ತೂಕವನ್ನು ನಿಯಂತ್ರಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಅನಿಯಂತ್ರಿತ ಜೀವನಶೈಲಿ, ನಿದ್ರೆಯ ಕೊರತೆ, ಫಾಸ್ಟ್ ಫುಡ್‌ನಿಂದಾಗಿ ತೂಕ ಹೇರಳವಾಗಿ ಹೆಚ್ಚುತ್ತಿದೆ. ಇದರಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ತೂಕವನ್ನು ನಿಯಂತ್ರಿಸಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ಈ ಸಲಹೆಗಳನ್ನು ಅನುಸರಿಸಿ. ಹೆಚ್ಚುತ್ತಿರುವ ತೂಕವನ್ನು ಕಳೆದುಕೊಳ್ಳಿ.
ದೇಹದಲ್ಲಿರುವ ಅಧಿಕ ತೂಕವನ್ನು ಇಳಿಸಿಕೊಳ್ಳಲು ಪ್ರತಿಯೊಬ್ಬರಿಗೂ ಶಿಸ್ತು ಅಗತ್ಯ. ಶಿಸ್ತನ್ನು ಹೊಂದಿದಂತಹ ಮನುಷ್ಯನು ಆದಷ್ಟು ಜಾಗರೂಕರಾಗಿರುತ್ತಾರೆ. ಏನು ತಿನ್ನಬೇಕು. ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ಅರಿತುಕೊಂಡು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಬೆಳಿಗ್ಗೆ ಏಳುವ ಸಮಯ ನಿಗದಿಯಾಗಿರಲಿ
ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಬಯಸುವಂತಹ ವ್ಯಕ್ತಿಯು ಆದಷ್ಟು ಬೇಗ ಏಳುವ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಅಂದರೆ ಬೆಳಿಗ್ಗೆ 6 ಗಂಟೆಗೆ ಎದ್ದು 30 ನಿಮಿಷಗಳ ಕಾಲ ವ್ಯಾಯಾಮ ಚಟುವಟಿಕೆಗಳನ್ನು ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಬೆಳಗಿನ ಉಪಾಹಾರ
ತೂಕ ಇಳಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಬೆಳಗಿನ ಉಪಹಾರವನ್ನು ಕಡ್ಡಾಯವಾಗಿ ಮಾಡಲೇಬೇಕು. ಉಪಹಾರ ಸೇವಿಸಲು ಸಮಯವಿಲ್ಲದಿದ್ದರೆ, ಬೇಯಿಸಿದ ಮೊಟ್ಟೆಯನ್ನು ತಿನ್ನಿರಿ. ಇದು ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಏಕೆಂದರೆ ಸದೃಢ ಮೈಕಟ್ಟನ್ನು ಹೊಂದಬೇಕೆಂದು ಬಯಸುವ ವ್ಯಕ್ತಿ ಆಹಾರ ಬಿಡುವುದರಿಂದ ಅಧಿಕವಾದ ಬೊಜ್ಜು ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಏನು ತಿನ್ನಬೇಕು?
ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಸಾಧ್ಯವಾದಷ್ಟು ಕಡಿಮೆ ಕಾರ್ಬೋಹೈಡ್ರೇಟ್ಗಳು ಇರುವಂತಹ ಆಹಾರವನ್ನು ಸೇವಿಸಿರಿ. ಅಂದರೆ ಅನ್ನ ಮತ್ತು ಬಿಳಿ ಬ್ರೆಡ್ ಅನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಅದರ ಬದಲಿಗೆ ಪೌಷ್ಟಿಕಾಂಶ ಇರುವಂತಹ ಹಸಿರು ತರಕಾರಿಗಳು, ಹಣ್ಣುಗಳನ್ನು ಸೇವಿಸಿರಿ. ಸಿಹಿತಿಂಡಿ ಮತ್ತು ತಂಪು ಪಾನೀಯಗಳನ್ನು ಆದಷ್ಟು ತಪ್ಪಿಸಿ.
ಜಂಕ್ ಫುಡ್ನಿಂದ ದೂರವಿರಿ
ತೂಕ ಇಳಿಸಿಕೊಳ್ಳಲು ನಿರ್ಧಾರ ಮಾಡಿದಂತವರು ಯಾವುದೇ ಕಾರಣಕ್ಕೂ ಅತಿ ಹೆಚ್ಚು ಮಸಾಲಯುಕ್ತ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಪಿಜ್ಜಾ, ಬರ್ಗರ್ ಬಿರಿಯಾನಿಯನ್ನು ಸಂಪೂರ್ಣವಾಗಿ ಬಿಡಬೇಕು ಎಂದು ಹೇಳುತ್ತಿಲ್ಲ. ಬದಲಿಗೆ ಅಪರೂಪಕ್ಕೆ ಸೇವಿಸಬೇಕು. ಸಂಜೆ 8 ಗಂಟೆಯೊಳಗೆ ಊಟವನ್ನು ಮಾಡಬೇಕು. ಇದರಿಂದ ನೀವು ಮಲಗುವ ಅಷ್ಟರಲ್ಲಿ ಜೀರ್ಣಕ್ರಿಯೆ ಸಂಪೂರ್ಣವಾಗುತ್ತದೆ.
ಆದಷ್ಟು ನಡೆಯುವ ಅಭ್ಯಾಸ ಮಾಡಿ
ನಿಮ್ಮ ದೇಹದಲ್ಲಿ ಶೇಖರಣೆಯಾಗುವಂತಹ ಅಧಿಕ ಕೊಬ್ಬನ್ನು ಸುಡಲು ಪ್ರತಿನಿತ್ಯ 30 ನಿಮಿಷಗಳ ಕಾಲ ಆದರೂ ನಡೆಯಲೇಬೇಕು. ಬೆಳಿಗ್ಗೆ ಆಗದಿದ್ದರೆ, ಸಂಜೆ ವೇಳೆಗಾದರೂ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದೇಹದಲ್ಲಿರುವ ಕ್ಯಾಲೋರಿಗಳು ಕರಗುವುದರ ಜೊತೆಗೆ ದೇಹವನ್ನು ಫಿಟ್ ಆಗಿರುವಂತೆ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.