ಮೆದುಳಿಗೆ ನ್ಯೂರೋಪ್ಲಾಸ್ಟಿಸಿಟಿ ಎಂಬ ಅದ್ಭುತ ಸಾಮರ್ಥ್ಯ ಇದೆ. ಅಂದರೆ ಹೊಸ ಜ್ಞಾನ, ದೈಹಿಕ ಚಲನೆ, ಬೇರೆ ಬೇರೆ ರೀತಿಯ ಪ್ರಚೋದನೆಗಳಿಗೆ ಅನುಗುಣವಾಗಿ ಇಡೀ ನರಮಂಡಲವನ್ನೇ ಮರುಸಂಘಟಿಸಿ ಹೊಸತನ ಕೊಡುವ ವಿಶೇಷ ಶಕ್ತಿ. ನಿಯಮಿತ ವ್ಯಾಯಾಮವಿಲ್ಲದೆ ಸ್ನಾಯುಗಳು ಹೇಗೆ ಕ್ಷೀಣಿಸುತ್ತವೆಯೋ, ಹಾಗೆಯೇ ನಿರಂತರ ಪ್ರಚೋದನೆ ಇಲ್ಲದಿದ್ದರೆ ಮೆದುಳಿನ ನರಕೋಶಗಳ ಜಾಲವೂ ದುರ್ಬಲಗೊಳ್ಳುತ್ತದೆ. ವಯಸ್ಸಾದಂತೆ ನೆನಪಿನ ಶಕ್ತಿ ಕುಂದುವುದು ಅನಿವಾರ್ಯವೇನಲ್ಲ. ಮೆದುಳಿನ ರಾಸಾಯನಿಕಗಳನ್ನು ಸಕ್ರಿಯಗೊಳಿಸುವ ನಿರ್ದಿಷ್ಟ ದೈಹಿಕ ಚಲನೆಗಳು, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಬೌದ್ಧಿಕ ಕಸರತ್ತು ಮಾಡುವ ಮೂಲಕ ನಾವು ಚುರುಕುತನ, ಏಕಾಗ್ರತೆ ಮತ್ತು ದೀರ್ಘಕಾಲೀನ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ದೈಹಿಕ ಚಟುವಟಿಕೆ ಹೃದಯದ ಆರೋಗ್ಯ ಮಾತ್ರವಲ್ಲ; ನರಕೋಶಗಳ ಉಳಿವಿಗೆ, ದೀರ್ಘ ಸ್ಮರಣಶಕ್ತಿಗೆ ಅಗತ್ಯವಿರುವ ಬಿಡಿಎನ್ಎಫ್ ಎಂಬ ಪ್ರೊಟೀನ್ ಸ್ರವಿಕೆ ಉತ್ತೇಜಿಸುವ ಮೂಲಕ ಮೆದುಳಿಗೆ ನೈಸರ್ಗಿಕ ಗೊಬ್ಬರದಂತೆ ಕೆಲಸ ಮಾಡುತ್ತವೆ. ಅಂತಹ ವ್ಯಾಯಾಮಗಳ ಬಗ್ಗೆ ನೋಡೋಣ.
1. ವಿಶೇಷ ನಡಿಗೆ: ಚುರುಕಾದ ನಡಿಗೆಯು ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಮತ್ತು ಹಿಪೊಕ್ಯಾಂಪಸ್ ಭಾಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ನಡಿಗೆಯನ್ನು ಬೌದ್ಧಿಕ ಕಸರತ್ತಾಗಿ ಪರಿವರ್ತಿಸಿದರೆ ಇನ್ನೂ ಅನುಕೂಲ. ನಡೆಯುವಾಗ 100ರಿಂದ ಹಿಂದಕ್ಕೆ 7ರಂತೆ ಕಳೆಯುತ್ತಾ ಎಣಿಸಬಹುದು (100, 93, 86....... ಹೀಗೆ) ಅಥವಾ ಪ್ರತಿ ಹತ್ತು ಹೆಜ್ಜೆಗಳಿಗೆ ಒಂದೊಂದು ದೇಶದ ರಾಜಧಾನಿಯ ಹೆಸರನ್ನು ನೆನಪಿಸಿಕೊಳ್ಳಬಹುದು. ಇದು ಮೆದುಳಿನ ಹಿಂಭಾಗ ಮತ್ತು ಮುಂಭಾಗ ಎರಡೂ ಏಕಕಾಲದಲ್ಲಿ ಸಂವಹನ ನಡೆಸುವಂತೆ ಒತ್ತಾಯಿಸುತ್ತದೆ.
2. ಯೋಗದ ವಿಶೇಷ ಕಸರತ್ತುಗಳು: ದೇಹದ ಮಧ್ಯರೇಖೆಯನ್ನು ದಾಟಿ ಮಾಡುವ ಚಲನೆಗಳು ಉದಾಹರಣೆಗೆ ಮೊಣಕಾಲುಗಳನ್ನು ಮೇಲಕ್ಕೆತ್ತಿ ನಡೆಯುತ್ತಾ, ವಿರುದ್ಧ ದಿಕ್ಕಿನ ಮೊಣಕೈಯಿಂದ ಮೇಲಕ್ಕೆ ಬರುವ ಮೊಣಕಾಲನ್ನು ಲಯಬದ್ಧವಾಗಿ ರ್ಸ³ಸುವುದು. ನಾಡಿ ಶೋಧನ ಪ್ರಾಣಾಯಾಮ ಕೂಡ ಅನುಕೂಲಕರ. ಮೆದುಳಿನ ಎಡ ಮತ್ತು ಬಲ ಗೋಳಾರ್ಧಗಳು ವೇಗವಾಗಿ ಸಂವಹನ ನಡೆಸುತ್ತವೆ.
3. ಒಂದೇ ಕಾಲಿನಿಂದ ಸಮತೋಲನ: ಸಮತೋಲನ ತರಬೇತಿ ಅತ್ಯಂತ ಶಕ್ತಿಶಾಲಿ. ವೃಕ್ಷಾಸನವನ್ನು ಅಭ್ಯಾಸ ಮಾಡಬಹುದು. ಒಮ್ಮೆ ಸಮತೋಲನ ಸಿಕ್ಕ ನಂತರ, 10-20 ಸೆಕೆಂಡು ಕಣ್ಣು ಮುಚ್ಚಿ ನಿಂತರೆ ಇನ್ನೂ ಒಳ್ಳೆಯದು. ಇದರಿಂದ ಕಣ್ಣಿನ ದೃಶ್ಯ-ಸಂಕೇತಗಳ ಅವಲಂಬನೆ ತಪ್ಪಿ, ಮೆದುಳಿನ ಕೆಲವು ವಿಶೇಷ ಜಾಲಗಳು ತೀವ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಇನ್ನು ಮೆದುಳಿನ ಆರೋಗ್ಯಕ್ಕಾಗಿ ಮಾನಸಿಕ ಕಸರತ್ತುಗಳ ಬಗ್ಗೆ ನೋಡೋಣ.
4. ಅಭ್ಯಾಸವಿಲ್ಲದ ಕೈಯ ಬಳಕೆ (ನ್ಯೂರೊಬಿಕ್ಸ್): ದೈನಂದಿನ ಚಟುವಟಿಕೆಗಳಿಗೆ ನಮಗೆ ರೂಢಿಯಾಗಿಲ್ಲದ ಕೈಯನ್ನು (ಎಡಗೈ ಅಭ್ಯಾಸವಿದ್ದರೆ ಬಲಗೈ, ಬಲಗೈ ಅಭ್ಯಾಸವಿದ್ದರೆ ಎಡಗೈ) ಬಳಸುವುದು ಮೆದುಳನ್ನು ಅದರ ಸ್ವಯಂಚಾಲಿತ ನಡವಳಿಕೆಯಿಂದ ಹೊರತರುತ್ತದೆ. ಬಲಗೈ ರೂಢಿಯಿರುವವರು ಎಡಗೈಯಿಂದ ಹಲ್ಲುಜ್ಜುವುದು, ಚಮಚ ಹಿಡಿಯುವುದು, ಬರೆಯುವುದು ಮುಂತಾದ ಕೆಲಸ ಮಾಡಬಹುದು. ರೂಢಿಯಿಲ್ಲದ ಕೈಯನ್ನು ಬಳಸುವುದರಿಂದ ಮೋಟಾರ್ ಕಾರ್ಟೆಕ್ಸ್ನಲ್ಲಿ ನಿಷ್ಕ್ರಿಯವಾಗಿರುವ ನರ ಸಂಪರ್ಕಗಳು ಜಾಗೃತಗೊಂಡು ಹೊಸ ನರ ಮಾರ್ಗಗಳು ಸೃಷ್ಟಿಯಾಗುತ್ತವೆ.
5. ಹೊಸ ಸಂಕೀರ್ಣ ಕೌಶಲ ಕಲಿಕೆ: ಹೊಸ ಕೌಶಲ ಕಲಿಯುವುದು ಮೆದುಳಿನ ಹೊಸ ಜಾಲಗಳನ್ನು ನಿರ್ವಿುಸುತ್ತದೆ. ಪ್ರತಿದಿನ 15 ನಿಮಿಷ ಸಂಗೀತ ವಾದ್ಯ ಕಲಿಯಬಹುದು; ಹೊಸ ಭಾಷೆ ಅಭ್ಯಸಿಸಬಹುದು; ಚೆಸ್, ಪದಬಂಧಗಳಂತಹ ಸಂಕೀರ್ಣ ಆಟ ಆಡಬಹುದು. ಹೊಸ ಕೌಶಲ ಕಲಿಯುವುದರಿಂದ ಮೆದುಳಿಗೆ ಹೊಸ ಹುರುಪು ಬರುತ್ತದೆ.
6. ತ್ರಾಟಕ (ಏಕಾಗ್ರ ದೃಷ್ಟಿ): ಚದುರಿದ ಏಕಾಗ್ರತೆಯನ್ನು ತ್ರಾಟಕ ಅಭ್ಯಾಸ ಮರಳಿ ನೀಡುತ್ತದೆ. ಆರಾಮವಾಗಿ ಕುಳಿತು ಒಂದು ನಿರ್ದಿಷ್ಟ ಬಿಂದುವಿನ ಮೇಲೆ- ಉದಾಹರಣೆಗೆ ದೀಪ, ಗೋಡೆ ಮೇಲಿನ ಕಪ್ಪು ಚುಕ್ಕೆ, ದೂರದ ಎಲೆಯ ಮೇಲೆ- ಕಣ್ಣು ಮಿಟುಕಿಸದೆ ಸ್ವಲ್ಪ ಹೊತ್ತು ದೃಷ್ಟಿಯನ್ನು ನೆಡಬೇಕು. ಮನಸ್ಸು ಅಲೆದಾಡಿದಾಗ, ನಿಧಾನವಾಗಿ ಅದನ್ನು ಮತ್ತೆ ಅದೇ ಬಿಂದುವಿಗೆ ತರಬೇಕು. ತ್ರಾಟಕವು ಮೆದುಳಿನ ಚಂಚಲತೆಯನ್ನು ಶಾಂತಗೊಳಿಸಿ, ಮೆದುಳಿನ ಮುಂಭಾಗವನ್ನು ಬಲಪಡಿಸುತ್ತದೆ, ಆಯಾಸದ ವಿರುದ್ಧ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಬಲಿಷ್ಠ ಮೆದುಳನ್ನು ರೂಪಿಸಲು ಗಂಟೆಗಟ್ಟಲೆ ಕಠಿಣ ತರಬೇತಿ ಅಗತ್ಯವಿಲ್ಲ. ದೈನಂದಿನ ಸಣ್ಣ, ಸ್ಥಿರ ಅಭ್ಯಾಸಗಳು ಅದ್ಭುತ ಫಲಿತಾಂಶ ನೀಡುತ್ತವೆ. ಹೀಗೆ ಚುರುಕಾದ ದೈಹಿಕ ಚಲನೆ ಹಾಗೂ ನಿರಂತರ ಮಾನಸಿಕ ಸವಾಲುಗಳನ್ನು ಬಿಡಿಸುವ ಮೂಲಕ ನಾವು ಮೆದುಳಿನ ಕ್ಷೀಣತೆಯನ್ನು ತಡೆದು ಜೀವನದ ಪ್ರತಿ ಹಂತದಲ್ಲೂ ಮಾನಸಿಕ ಚೈತನ್ಯವನ್ನು ಉಳಿಸಿಕೊಳ್ಳಬಹುದು.