ರಕ್ತದೊತ್ತಡ ಸಮಸ್ಯೆ  
ಆರೋಗ್ಯ

ಈ ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ರೆ ಎಚ್ಚರವಿರಲಿ! ಇದು ಅಧಿಕ ರಕ್ತದೊತ್ತಡದ ಮುನ್ಸೂಚನೆ...

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಜೀವನಶೈಲಿ ಈಗ ಆರೋಗ್ಯದ ಮೇಲೆ ಭಾರೀ ಪರಿಣಾಮ ಭೀರಿದೆ
  • ಇದೊಂದು ರೀತಿ ಸೈಲೆಂಟ್​ ಕಾಯಿಲೆ
  • ಅಷ್ಟಕ್ಕೂ ಈ ಸಮಸ್ಯೆಗೆ ಏನೆಲ್ಲ ಕಾರಣ?
ಬೆಂಗಳೂರು: ಇಂದಿನ ಆಧುನಿಕ ಟೆಕ್ನಾಲಜಿ, ಜೀವನಶೈಲಿಯಿಂದಾಗಿ ಎಲ್ಲವೂ ಬದಲಾಗುತ್ತಿವೆ. ಅದರಲ್ಲೂ, ಮನುಷ್ಯನ ಆರೋಗ್ಯವಂತು ಹಂತ ಹಂತವಾಗಿ ಹದಗೆಡುತ್ತಿದೆ. ಕೆಲಸದ ಒತ್ತಡ, ಆಹಾರ ಕ್ರಮದಲ್ಲಿ ಇಲ್ಲದ ಸಮೋತಲಿತ, ಅಪೌಷ್ಠಿಕತೆ ಸೇರಿದಂತೆ ನಾನಾ ಕಾರಣಗಳಿಂದ ಅನಾರೋಗ್ಯವು ನಮ್ಮ ಬೆನ್ನತ್ತುತ್ತಿವೆ. ಹಲವು ಕಾಯಿಲೆಗಳ ಪೈಕಿ ಅನೇಕರಲ್ಲಿ ಇಂದು ತೀರ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಬಿಪಿ.
ಹಲವು ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ 30ರಿಂದ 35 ವರ್ಷ ವಯಸ್ಸಿನೊಳಗಿನ ಜನರಲ್ಲಿ ಹೆಚ್ಚಾಗಿ ಕಾಡುತ್ತದೆ. ವಾಸ್ತವವಾಗಿ, ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಆಹಾರ ಪದ್ಧತಿ, ಕಳಪೆ ಜೀವನಶೈಲಿ ಮತ್ತು ಮಾನಸಿಕ ಒತ್ತಡ. ಬಿಪಿ ಕಾಯಿಲೆಯು ವಿಪರೀತವಾದರೆ ಖಂಡಿತ ಅಪಾಯಕಾರಿಯೇ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಹೃದಯಾಘಾತಕ್ಕೂ ಕಾರಣವಾಗುವ ಅಪಾಯವಿದೆ. ಅಷ್ಟಕ್ಕೂ, ಅಧಿಕ ರಕ್ತದೊತ್ತಡ ಬರುವುದು ಹೇಗೆ? ಇದನ್ನು ಹತೋಟಿಗೆ ತರುವುದ್ಹೇಗೆ? ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಸೈಲೆಂಟ್​ ಕಾಯಿಲೆ

ಅಧಿಕ ರಕ್ತದೊತ್ತಡವು ಒಂದು ರೀತಿ ಸೈಲೆಂಟ್​ ಕಾಯಿಲೆ. ಏಕೆಂದರೆ, ಇದರ ಆರಂಭಿಕ ಲಕ್ಷಣಗಳು ಬಹುತೇಕರಿಗೆ ತಿಳಿಯೋದಿಲ್ಲ. ಅಂದರೆ, ಅಷ್ಟು ಸುಲಭವಾಗಿ ಗೊತ್ತಾಗಲು ಬಿಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ಈ ರೋಗದ ಲಕ್ಷಣಗಳು ಕಾಣಿಸಿಕೊಂಡಾಗಲೂ, ಜನರಿಗೆ ಅವುಗಳ ಬಗ್ಗೆ ಯಾವ ಮುನ್ಸೂಚನೆಯು ಸಿಗೋದಿಲ್ಲ. ಕೆಲವರು ಮಾತ್ರ ಇದನ್ನು ಪತ್ತೆಹಚ್ಚಲು ಯಶಸ್ವಿಯಾಗುತ್ತಾರೆ. ಕಾರಣ, ಆಗಾಗ್ಗೆ ಮಾಡಿಸಿಕೊಳ್ಳುವ ಹೆಲ್ತ್​ ಚೆಕಪ್​ನಿಂದ.

ಸಾಮಾನ್ಯ ಕಾರಣಗಳು...

ಅಧಿಕ ರಕ್ತದೊತ್ತಡಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ವೈದ್ಯರು. ಸಾಮಾನ್ಯ ಕಾರಣವೆಂದರೆ ಸರಿಯಾದ ಆಹಾರದ ಕೊರತೆ. ಅತಿಯಾಗಿ ಹೊರಗಡೆ ಊಟ ಮಾಡುವುದು ಮತ್ತು ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುವುದರಿಂದಲೂ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಇದಲ್ಲದೆ, ಹೆಚ್ಚಿನ ಒತ್ತಡ, ಮಾನಸಿಕ ಒತ್ತಡ, ದೀರ್ಘಕಾಲ ಕುಳಿತುಕೊಳ್ಳುವುದು, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯೂ ಈ ಸಮಸ್ಯೆಯನ್ನು ಉಲ್ಬಣಿಸುತ್ತದೆ.

ಅಧಿಕ ರಕ್ತದೊತ್ತಡದ ಲಕ್ಷಣಗಳಿವು

  • ವಿಶ್ರಾಂತಿ ಕೊರತೆ
  • ತಲೆಸುತ್ತುತಲೆನೋವು
  • ತಲೆಯಲ್ಲಿ ಭಾರವಾದ ಭಾವನೆ
  • ಒಮ್ಮೊಮ್ಮೆ ದೃಷ್ಟಿ ಮಂದವಾಗುವುದು
  • ಆತಂಕ
  • ಆಯಾಸ

ಹತೋಟಿಗೆ ತರಲು ಆಹಾರವೇ ಮೊದಲ ಹೆಜ್ಜೆ

ರಕ್ತದೊತ್ತಡವನ್ನು ನಿಯಂತ್ರಿಸುವ ಮೊದಲ ಹೆಜ್ಜೆಯೇ ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು. ದಿನನಿತ್ಯ ನೀವು ಸೇವಿಸುವ ಆಹಾರದಲ್ಲಿ ಉಪ್ಪನ್ನು ಆದಷ್ಟು ಮಿತವಾಗಿ ಬಳಸಿ. ದಿನಕ್ಕೆ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬೇಡಿ. ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್‌ಗಳ ಸೇವನೆಯನ್ನು ಮುಂಚೆಗಿಂತ ಕಡಿಮೆ ಮಾಡಿ. ಇದರೊಟ್ಟಿಗೆ ಮಾನಸಿಕ ಒತ್ತಡದಿಂದ ಸಂಪೂರ್ಣವಾಗಿ ದೂರವಿರಿ ಮತ್ತು ಯೋಗದ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ,(ಏಜೆನ್ಸೀಸ್).
ವಿಶೇಷ ಸೂಚನೆ: ಇಲ್ಲಿರುವ ಮಾಹಿತಿ ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ನಿಮಗೆ ಅನುಮಾನ ಅಥವಾ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ, ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.