- 30ರ ನಂತರ ದೇಹದಲ್ಲಿ ಸಣ್ಣ ಬದಲಾವಣೆಗಳು ಶುರು
- ನಿಶಕ್ತಿ, ಸಣ್ಣ ಕೆಲಸಗಳಿಗೂ ಆಯಾಸ
- ಚರ್ಮದ ಸುಕ್ಕು, ಕೂದಲು ಉದುರುವಿಕೆ
ಬೆಂಗಳೂರು: ಈಗಿನ ಕಾಲಘಟ್ಟಕ್ಕೆ ಬಹುತೇಕರು ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರು ಮಾತ್ರ ಕೆಲಸದ ಒತ್ತಡ, ಧೂಳಿನ ವಾತಾವರಣ ಸೇರಿ ಹಲವು ವಿಷಯಗಳಿಂದ ಸಣ್ಣ-ಪುಟ್ಟ ಕಾಯಿಲೆಗಳಿಗೆ ಬಹುಬೇಗನೆ ಸಿಲುಕುತ್ತಾರೆ. ಅತಿ ಮುಖ್ಯವಾಗಿ 30 ವರ್ಷ ದಾಟಿದ ನಂತರ ಅಂತು, ನಮ್ಮ ದೇಹವು ಸ್ವಾಭಾವಿಕವಾಗಿ ಕೆಲವು ಸಣ್ಣ ಬದಲಾವಣೆಗಳಿಗೆ ಒಳಗಾಗಲು ಪ್ರಾರಂಭಿಸುತ್ತದೆ.
ಅನೇಕರು ಈ ವಯಸ್ಸನ್ನು ದಾಟುತ್ತಿದ್ದಂತೆ ಭಯಪಡಲು ಶುರು ಮಾಡ್ತಾರೆ. ಕಾರಣ, ಇನ್ನು ನಮ್ಮಿಂದ ಮುಂಚೆಗಿಂತ ಹೆಚ್ಚಿನ ಉತ್ಸಾಹ, ಆಸಕ್ತಿಯಿಂದ ಕೆಲಸ ಕಾರ್ಯಗಳನ್ನು ಮಾಡುವುದು ಕಷ್ಟಸಾಧ್ಯ ಎಂದು. 30 ದಾಟುತ್ತಿದ್ದಂತೆ ಕೆಲವು ಲಕ್ಷಣಗಳು ದಿಢೀರ್ ಅಥವಾ ಏಕಾಏಕಿ ಬದಲಾಗುವುದಿಲ್ಲ. ಅವು ವರ್ಷಗಳಲ್ಲಿ ನಿಧಾನವಾಗಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಎಂಬುದು ಇಲ್ಲಿ ಗಮನಾರ್ಹ.
30 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು
25ರಲ್ಲಿ ಇರುವ ಉತ್ಸಾಹ, 30 ದಾಟಿದಾಗ ಇದ್ದರೂ ದೇಹ ಅಷ್ಟು ಸುಲಭವಾಗಿ ಬೆಂಬಲಿಸುವುದಿಲ್ಲ. ಕಾರಣ, ನಾವು ಸೇವಿಸುವ ಆಹಾರ, ರೂಢಿಸಿಕೊಂಡಿರುವ ವ್ಯಾಯಾಮ ಸೇರಿ ಇನ್ನೂ ಹಲವು ವಿಚಾರಗಳು. ಸರಿಯಾದ ಆಹಾರ (ಅಂದರೆ ಡಯಟ್), ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸದಾ ಆ್ಯಕ್ಟಿವ್ ಆಗಿದ್ದರೆ, ವಯಸ್ಸು 30 ಇರಲಿ, 40 ಆಗಲಿ ದೇಹದೊಂದಿಗೆ ಸರಿದೂಗಿಸಿಕೊಂಡು ಹೋಗಬಹುದು. ಅಕಸ್ಮಾತ್, ಇದ್ಯಾವುದನ್ನೂ ರೂಢಿಸಿಕೊಳ್ಳದೆ, ಇಷ್ಟ ಬಂದಂತೆ ತಿನ್ನುವುದು, ಕುಳಿತು ಕೆಲಸ ಮಾಡುತ್ತಿದ್ದರೆ, ವಯಸ್ಸು 30 ಇರಲಿ, 20ಕ್ಕೆ ಆಯಾಸ, ನಿಶಕ್ತಿ ಆವರಿಸಿಕೊಳ್ಳುತ್ತದೆ. ಅದರಲ್ಲಿ ಕಿಂಚಿತ್ತು ಅನುಮಾನ ಬೇಡ.
ಸಣ್ಣ ಕೆಲಸಗಳನ್ನು ಮಾಡಿದರೆ ಸಾಕು ಸುಸ್ತು ಅನಿಸುವುದು, ಚರ್ಮದ ಮೇಲೆ ಸುಕ್ಕುಗಳು ಮತ್ತು ಕೂದಲು ಉದುರುವಿಕೆ ಅಥವಾ ಬಿಳಿ ಕೂದಲು ಕಾಡುವುದು ಸಾಮಾನ್ಯ ಲಕ್ಷಣಗಳು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಈ ಬದಲಾವಣೆಗಳು 60 ವರ್ಷಗಳ ನಂತರ ಸ್ಪಷ್ಟವಾಗುತ್ತವೆ. ವೃದ್ಧಾಪ್ಯದಲ್ಲಿ, ನಿಶಕ್ತಿ, ದೃಷ್ಟಿ ಮತ್ತು ಕಿವುಡುತನ ಮತ್ತು ಕೂದಲು ಬೂದು ಬಣ್ಣಕ್ಕೆ ತಿರುಗುವುದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತದೆ. ಇವೆಲ್ಲವೂ ಭಯಪಡುವ ವಿಷಯಗಳಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ಸರಿಯಾದ ಆಹಾರ ಕ್ರಮ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ, ದೇಹದಲ್ಲಿ ಆಗುವ ಬದಲಾವಣೆಗಳೊಂದಿಗೆ ಬ್ಯಾಲೆನ್ಸ್ ಮಾಡಬಹುದು ಮತ್ತು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲಿ ಕಾಡುವ ಒಂದಷ್ಟು ಸಮಸ್ಯೆಗಳು ಅಥವಾ ಲಕ್ಷಣಗಳು ನಿಮಗೆ ಅಷ್ಟು ದೊಡ್ಡ ಪ್ರಭಾವ ಎಂದು ಅನಿಸುವುದಿಲ್ಲ
ವಯಸ್ಸಾದಂತೆ ಕಾಣಿಸಿಕೊಳ್ಳುವ ಇತರ ಕೆಲವು ನೈಸರ್ಗಿಕ ಲಕ್ಷಣಗಳು ಹೀಗಿವೆ
ಕೀಲು ನೋವು, ನಿದ್ರೆ ಕಡಿತ, ಸಣ್ಣಪುಟ್ಟ ವಿಷಯಗಳನ್ನು ಮರೆತುಬಿಡುವುದು ಮತ್ತು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವುದು. ಇವು ಪ್ರತಿಯೊಬ್ಬ ಮನುಷ್ಯನಲ್ಲಿ ಸಂಭವಿಸುವ ನೈಸರ್ಗಿಕ ದೈಹಿಕ ಬದಲಾವಣೆಗಳಾಗಿವೆ. ವಯಸ್ಸಾಗುವುದನ್ನು ತಡೆಯಲು ಸಾಧ್ಯವಾಗದಿದ್ದರೂ, ವಯಸ್ಸಿನ ಬಗ್ಗೆ ಯೋಚಿಸಲು ಭಯಪಡುವ ಅಗತ್ಯವಿಲ್ಲ. ಇದನ್ನು ಸರಿದೂಗಿಸಿಕೊಂಡು ಹೋಗಲು, ವ್ಯಾಯಾಮ, ಉತ್ತಮ ಆಹಾರ ಕ್ರಮ ಪಾಲಿಸಿದರೆ ಸಾಕು,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.