World Cancer Day (ಸಾಂದರ್ಭಿಕ ಚಿತ್ರ) 
ಆರೋಗ್ಯ

ಮೌನವಾಗಿ ಕೊಲ್ಲುವ 5 ಬಗೆಯ ಕ್ಯಾನ್ಸರ್‌ಗಳು: ಇಂದೇ ತಿಳಿದುಕೊಳ್ಳಿ ಈ ಮಾರಕ ರೋಗದ ಆರಂಭಿಕ ಎಚ್ಚರಿಕೆಗಳು! World Cancer Day

ಪ್ರಮುಖ ಮುಖ್ಯಾಂಶಗಳು

  • ಪ್ರಪಂಚದಾದ್ಯಂತ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ
  • ಭಾರತದಲ್ಲಿ ಕೆಲವೊಂದು ರೀತಿಯ ಕ್ಯಾನ್ಸರ್​ಗಳು ಮೂಕ ಕೊಲೆಗಾರರಂತೆ ಹರಡುತ್ತಿವೆ
  • ಜನಸಾಮಾನ್ಯರು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿ, ಸಣ್ಣ ಕಾಯಿಲೆ ಎಂದು ಭಾವಿಸುತ್ತಾರೆ
World Cancer Day: ಪ್ರಪಂಚದಾದ್ಯಂತ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ರೋಗದ ಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ಯಾನ್ಸರ್​ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಭಾರತದಂತೆಯೇ, ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹರಡುತ್ತಿರುವ ಹಿನ್ನಲೆ, ಆರೋಗ್ಯ ತಜ್ಞರು ನಿರಂತರವಾಗಿ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಭಾರತದಲ್ಲಿ ಕೆಲವೊಂದು ರೀತಿಯ ಕ್ಯಾನ್ಸರ್​ಗಳು ಮೂಕ ಕೊಲೆಗಾರರಂತೆ ಹರಡುತ್ತಿವೆ. ಇದು ಜನಸಾಮಾನ್ಯರು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿ, ಸಣ್ಣ ಕಾಯಿಲೆ ಎಂದು ಭಾವಿಸುತ್ತಾರೆ. ಇದರಿಂದ ದೊಡ್ಡ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಕ್ಯಾನ್ಸರ್​ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದರಿಂದ ಮುಕ್ತಿ ಪಡೆಯಬಹುದು. ಹಾಗಾದರೆ, ಭಾರತೀಯರಲ್ಲಿ ಕಂಡುಬರುವ ಐದು ರೀತಿಯ ಕ್ಯಾನ್ಸರ್‌ಗಳು ಯಾವುವು? ಅವುಗಳ ಆರಂಭಿಕ ಲಕ್ಷಣಗಳು ಯಾವುದು ಎಂದು ನೋಡೋಣ ಬನ್ನಿ...

ಸ್ತನ ಕ್ಯಾನ್ಸರ್

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ವೈದ್ಯರು ಸೂಚಿಸುವಂತೆ ಇದು ವಯಸ್ಸಾದ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಕಿರಿಯ ವಯಸ್ಸಿನ ಮಹಿಳೆಯರು ಕೂಡಾ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. 
ಮಹಿಳೆಯರೇ ನಿಮ್ಮ ಸ್ತನದಲ್ಲಿ ಗಡ್ಡೆಗಳು ಕಂಡುಬಂದರೆ, ಮೊಲೆತೊಟ್ಟುಗಳಿಂದ ರಕ್ತ ಸ್ರಾವ ಅಥವಾ ಸ್ತನಗಳ ಗಾತ್ರದಲ್ಲಿ ಹಠಾತ್ ಬದಲಾವಣೆಗಳು ಕಂಡುಬಂದರೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಹೋಗಬೇಡಿ. ಇದು ಸ್ತನ ಕ್ಯಾನ್ಸರ್​ನ ಆರಂಭಿಕ ಚಿಹ್ನೆಗಳಾಗಿರಬಹುದು.

ಬಾಯಿ ಕ್ಯಾನ್ಸರ್

ತಂಬಾಕು ಸೇವನೆಯಿಂದಾಗಿ ಪ್ರಪಂಚದಾದ್ಯಂತ ಬಾಯಿಯ ಕ್ಯಾನ್ಸರ್ ವೇಗವಾಗಿ ಹರಡುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಗುಟ್ಕಾ ಮತ್ತು ತಂಬಾಕಿನ ಅತಿಯಾದ ಸೇವನೆ ಆಗಿದೆ. ಆದಾಗ್ಯೂ, ಹೆಚ್ಚಿನ ಜನರು ಈ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದು ಬಾಯಲ್ಲಿ ಹುಣ್ಣಾಗುವುದು, ಅಥವಾ ದದ್ದು ರೀತಿಯಲ್ಲಿ ಕಂಡುಬರುತ್ತದೆ.
ಆರಂಭಿಕ ಲಕ್ಷಣಗಳಲ್ಲಿ ಬಾಯಿಯೊಳಗಿನ ಗಾಯಗಳು ವಾರದವರೆಗೂ ಹಾಗೇ ಇರುವುದು.  ಬಿಳಿ ಅಥವಾ ಕೆಂಪು ಕಲೆಗಳು, ಒರಟಾಗಿರುವುದು ಮತ್ತು ನುಂಗಲು ತೊಂದರೆಯಂತಹ ಸಮಸ್ಯೆಗಳು ಕಂಡುಬಂದರೆ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.

ಗರ್ಭಕಂಠದ ಕ್ಯಾನ್ಸರ್

ಗರ್ಭಕಂಠದ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಈ ಸಮಸ್ಯೆಯನ್ನು ಸಕಾಲಿಕ ತಪಾಸಣೆ ಮತ್ತು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು. ಇದು ಹೆಚ್ಚಾಗಿ ಮುಟ್ಟಿನ ಸಮಯದಲ್ಲಿ ಅಥವಾ ಸಂಭೋಗದ ನಂತರ ರಕ್ತಸ್ರಾವವಾಗುವುದು, ನಿರಂತರ ಬೆನ್ನು ನೋವು ಕಾಣಿಸಿಕೊಳ್ಳಬಹುದು.

ಶ್ವಾಸಕೋಶದ ಕ್ಯಾನ್ಸರ್

ಧೂಮಪಾನ ಮಾಡದವರಲ್ಲಿಯೂ ಸಹ ಶ್ವಾಸಕೋಶದ ಕ್ಯಾನ್ಸರ್ ವೇಗವಾಗಿ ಹರಡುತ್ತಿದೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಅತಿಯಾದ ಧೂಮಪಾನವೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳುತ್ತಾರೆ. ಇದರ ಲಕ್ಷಣಗಳು ನಿರಂತರ ಕೆಮ್ಮು, ರಕ್ತಸಿಕ್ತ ಕಫ, ಉಸಿರಾಟದ ತೊಂದರೆ ಮತ್ತು ಹಠಾತ್​ ತೂಕ ನಷ್ಟದಿಂದ ಕಾಣಿಸಿಕೊಳ್ಳುತ್ತದೆ. ಇದು ಗಂಭೀರ ಹಂತವನ್ನು ತಲುಪಿದಾಗ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. 

ದೊಡ್ಡ ಕರುಳು ಕ್ಯಾನ್ಸರ್

ಜಂಕ್ ಫುಡ್ ಮತ್ತು ಕಡಿಮೆ ಫೈಬರ್ ಆಹಾರಗಳು ಯುವಜನರಲ್ಲಿ ಕೊಲೊನ್ ಕ್ಯಾನ್ಸರ್ (ದೊಡ್ಡ ಕರುಳು) ಪ್ರಕರಣಗಳ ತ್ವರಿತ ಹೆಚ್ಚಿಸುತ್ತಿವೆ. ಇದು ಸಾಮಾನ್ಯವಾಗಿ ಹೊಟ್ಟೆಯ ಸಮಸ್ಯೆಗಳನ್ನು ಗ್ಯಾಸ್​ ಅಥವಾ ಮಲಬದ್ಧತೆ ಎಂದು ತಳ್ಳಿ ಹಾಕುತ್ತಾರೆ. ಈ ಸಮಸ್ಯೆಯು ಮಲವಿಸರ್ಜನೆಯಲ್ಲಿ ತೊಂದರೆ, ರಕ್ತಸಿಕ್ತ ಮಲ, ಹೊಟ್ಟೆ ನೋವು ಮತ್ತು ಹಸಿವಿನ ಕೊರತೆ ಇದರ ಲಕ್ಷಣಗಳಾಗಿವೆ. ಆದರೆ, ಇದನ್ನು ಹಾಗೇ ಬಿಟ್ಟರೆ ಗಂಭೀರ ಸಮಸ್ಯೆಯಾಗಿ ನೋಡಬೇಕಾಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.