ಬೇಸಿಗೆ ಸೆಕೆಯಲ್ಲಿ ನಿದ್ರೆ ಬರದೇ ಒದ್ದಾಡುತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಗಡತ್ತಾಗಿ ಮಲಗಿ! Summer Sleep Tips
- ದೇಶಾದ್ಯಂತ ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ
- ಮಧ್ಯಾಹ್ನದ ವೇಳೆ ಮನೆಯಿಂದ ಹೊರಗಡೆ ಕಾಲಿಡಂತಹ ಪರಿಸ್ಥಿತಿ ಇದೆ
- ಇಡೀ ದಿನ ಸೂರ್ಯನು ಬೆಂಕಿಯ ಉಂಡೆಯಂತೆ ಉರಿಯುತ್ತಿದ್ದಾನೆ
- ಈ ಬೇಸಿಗೆಯಲ್ಲಿ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ಅದು ನಿದ್ರೆಯ ಸಮಸ್ಯೆ
Summer Sleep Tips : ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಗಡೆ ಕಾಲಿಡಂತಹ ಪರಿಸ್ಥಿತಿ ಇದೆ. ಇಡೀ ದಿನ ಸೂರ್ಯನು ಬೆಂಕಿಯ ಉಂಡೆಯಂತೆ ಉರಿಯುತ್ತಿದ್ದಾನೆ. ಹೀಗಾಗಿ, ಅದರ ಪ್ರಭಾವ ರಾತ್ರಿ ವೇಳೆಯೂ ಇರುತ್ತದೆ. ಈ ಬೇಸಿಗೆಯಲ್ಲಿ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ಅದು ನಿದ್ರೆಯ ಸಮಸ್ಯೆ. ಏಕೆಂದರೆ, ಸೂರ್ಯನ ಶಾಖಕ್ಕೆ ಸೆಕೆ ಹೆಚ್ಚಾಗಿ ಮನೆಯಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗುವುದಿಲ್ಲ.
ರಾತ್ರಿ ವೇಳೆಯ ಸೆಕೆಯ ಜೊತೆಗೆ ನಮ್ಮ ದೇಹದ ಉಷ್ಣತೆಯ ಹೆಚ್ಚಳ ಮತ್ತು ಗಾಳಿಯ ಕೊರತೆಯಿಂದಾಗಿ ನಿದ್ರೆಗೆ ಭಂಗ ಉಂಟಾಗುತ್ತಿದೆ. ಸರಿಯಾಗಿ ನಿದ್ರೆ ಆಗದಿದ್ದರೆ, ಮರುದಿನ ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗಬಹುದು. ಆದಾಗ್ಯೂ, ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಸೆಕೆಯ ಹೊಡೆತದಿಂದ ಪರಿಹಾರ ಪಡೆಯಬಹುದು ಮತ್ತು ಆರಾಮವಾಗಿ ನಿದ್ರೆ ಮಾಡಬಹುದು. ಆ ಪರಿಹಾರಗಳು ಯಾವುವು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಕೋಣೆಯ ಹವಾಮಾನ ಮತ್ತು ವಾತಾಯನ
ನೀವು ಮಲಗುವ ಕೋಣೆ ಯಾವಾಗಲೂ ತಂಪಾಗಿ, ಕತ್ತಲೆಯಾಗಿ ಮತ್ತು ಶಾಂತವಾಗಿರಬೇಕು. ಕೋಣೆಯಲ್ಲಿ ಗಾಳಿಯು ಮುಕ್ತವಾಗಿ ಸಂಚರಿಸಲು ಕಿಟಕಿಗಳನ್ನು ತೆರೆದಿಡಬೇಕು ಅಥವಾ ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಬೇಕು. ಕೋಣೆಯಲ್ಲಿನ ಶಾಖವನ್ನು ಕಡಿಮೆ ಮಾಡಲು ಕಿಟಕಿಗಳ ಮೇಲೆ ದಪ್ಪ ಪರದೆಗಳನ್ನು ಬಳಸುವುದು ಅಥವಾ ಸಂಜೆ ಕೋಣೆಯನ್ನು ತಂಪಾಗಿಸುವುದು ಅಂದರೆ, ತಣ್ಣೀರಿನಿಂದ ಮಲಗುವ ಕೋಣೆಯ ನೆಲವನ್ನು ಒರೆಸುವುದು ಒಳ್ಳೆಯದು.
ಬಟ್ಟೆ ಮತ್ತು ಹಾಸಿಗೆ ಆಯ್ಕೆ
ಬಿಸಿ ವಾತಾವರಣದಲ್ಲಿ, ಸಿಂಥೆಟಿಕ್ ಬಟ್ಟೆಗಳ ಬದಲಿಗೆ ಸಡಿಲವಾದ ಹತ್ತಿ (ನೂಲು) ಬಟ್ಟೆಗಳನ್ನು ಧರಿಸಿ. ಏಕೆಂದರೆ, ಹತ್ತಿ ಬಟ್ಟೆಗಳು ಬೆವರು ಹೀರಿಕೊಳ್ಳುತ್ತವೆ ಮತ್ತು ದೇಹದ ಮೂಲಕ ಗಾಳಿಯನ್ನು ಹಾದುಹೋಗಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಹಾಸಿಗೆಯ ಮೇಲೆ ಹತ್ತಿ ಬೆಡ್‌ಶೀಟ್‌ಗಳನ್ನು ಬಳಸುವುದರಿಂದ ದೇಹದ ಉಷ್ಣತೆಯನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ನಾನ ಹಾಗೂ ದೇಹದ ಉಷ್ಣತೆ
ಮಲಗುವ ಮುನ್ನ ತಣ್ಣೀರಿನ ಸ್ನಾನ ಮಾಡುವುದು ಅತ್ಯಂತ ಪರಿಣಾಮಕಾರಿ ವಿಧಾನ. ಇದು ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ ಮತ್ತು ಮೆದುಳನ್ನು ಶಾಂತಗೊಳಿಸುತ್ತದೆ. ಹೀಗಾಗಿ, ನಿದ್ರೆ ಬೇಗನೆ ಬರುತ್ತದೆ.
ಆಹಾರ ಮತ್ತು ಪಾನೀಯಗಳು
ರಾತ್ರಿಯಲ್ಲಿ ಸೇವಿಸುವ ಆಹಾರವು ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಸಾಲೆಗಳು ಮತ್ತು ಬಿಸಿ ಆಹಾರಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ರಾತ್ರಿಯಲ್ಲಿ ಹಗುರವಾದ ಆಹಾರವನ್ನು ಸೇವಿಸಿ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಆದರೆ, ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅದು ಮಧ್ಯದಲ್ಲಿ ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು.
ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿರಿ
ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ಶಾಖವನ್ನು ಹೊರಸೂಸುತ್ತವೆ. ಇದಲ್ಲದೆ, ಈ ಸಾಧನಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರೇರೇಪಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮಲಗುವ ಒಂದು ಗಂಟೆ ಮೊದಲು ಅವುಗಳನ್ನು ಪಕ್ಕಕ್ಕೆ ಇಡುವುದು ಒಳ್ಳೆಯದು.
ಈ ಸಣ್ಣ ಬದಲಾವಣೆಗಳನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ, ನೀವು ನಿಮ್ಮ ದೇಹದ ಉಷ್ಣತೆಯ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ಆಳವಾದ ನಿದ್ರೆಯನ್ನು ಪಡೆಯಬಹುದು, (ಏಜೆನ್ಸೀಸ್).