- ಮದ್ಯ ಸೇವನೆ, ಬೊಜ್ಜು ಮಾತ್ರವಲ್ಲ ಲಿವರ್ ಡ್ಯಾಮೇಜ್ಗೆ ಕಾರಣ
- ಮೈಕ್ರೋಪ್ಲಾಸ್ಟಿಕ್‌ಗಳು ಕೂಡ ಲಿವರ್ ಹಾನಿಗೆ ಒಂದು ಪ್ರಮುಖ ಕಾರಣ
- ಸಂಶೋಧಕರು ಅಧ್ಯಯನದಲ್ಲಿ ಅಚ್ಚರಿಯ ಸಂಗತಿ ರಿವೀಲ್
ಈ ಹಿಂದೆ ಹಲವು ಅಧ್ಯಯನಗಳು, ವಾತಾವರಣದಿಂದ ಹಲವು ವಿಧಾನಗಳ ಮೂಲಕ ದೇಹವನ್ನು ಪ್ರವೇಶಿಸುವ ಮೈಕ್ರೋಪ್ಲಾಸ್ಟಿಕ್‌ಗಳು ಕೇವಲ ಯಾವುದೋ ಒಂದು ಭಾಗಕ್ಕೆ ಅಥವಾ ಅಂಗಗಳಿಗೆ ಮಾತ್ರವಲ್ಲದೇ, ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ತಿಳಿಸಿವೆ. ರಕ್ತ ಹರಿಯುವಿಕೆಯಲ್ಲಿ ಮತ್ತು ಎದೆ ಹಾಲಿನಲ್ಲಿಯೂ ಮೈಕ್ರೋಪ್ಲಾಸ್ಟಿಕ್‌ಗಳು ಕಂಡುಬಂದಿರುವುದು ಆತಂಕಕಾರಿ ವಿಷಯ. ಈಗ, ಮೈಕ್ರೋಪ್ಲಾಸ್ಟಿಕ್‌ಗಳು ಲಿವರ್ ಡ್ಯಾಮೇಜ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಾಬೀತುಪಡಿಸಿರುವ ಅಧ್ಯಯನವೊಂದು ಇದೀಗ ಪ್ರಕಟವಾಗಿದೆ.
ಮಾತೃಭೂಮಿ ವರದಿ ಪ್ರಕಾರ, ಈ ಅಧ್ಯಯನವನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕಳೆದ ವರ್ಷಗಳಲ್ಲಿ ಮನುಷ್ಯನ ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಸುಲಭವಾಗಿ ಪತ್ತೆಯಾಗುತ್ತಿವೆ. ಇದು ತೀರ ಕಳವಳಕಾರಿ ಎಂಬುದು ಎಚ್ಚರಿಕೆಯ ಗಂಟೆ. ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ಗಳು ಮತ್ತು ಹಾರ್ಮೋನುಗಳ ಉತ್ಪಾದನೆ ಮತ್ತು ದೇಹದಿಂದ ವಿಷವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಮಿಕಲ್ ಫ್ಯಾಕ್ಟರಿ ಎಂದೇ ಕರೆಯಲ್ಪಡುವ ನಮ್ಮ ಲಿವರ್ಗೆ ಈಗ ಮೈಕ್ರೋಪ್ಲಾಸ್ಟಿಕ್‌ಗಳ ಸಂಕಷ್ಟ ಎದುರಾಗಿದೆ ಎಂದು ಅಧ್ಯಯನವು ತೋರಿಸಿದೆ.
ಮೈಕ್ರೋಪ್ಲಾಸ್ಟಿಕ್‌ಗಳು ಮಾತ್ರವಲ್ಲದೆ, ಸಣ್ಣ ನ್ಯಾನೊಪ್ಲಾಸ್ಟಿಕ್‌ಗಳು ಕೂಡ ಯಕೃತ್ತಿನಲ್ಲಿ ಒತ್ತಡ ಮತ್ತು ಉರಿಯೂತವನ್ನು ಹೆಚ್ಚಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಅಧ್ಯಯನದ ಮುಂದಾಳತ್ವ ವಹಿಸಿಕೊಂಡಿದ್ದ ಪರಿಸರ ಹೆಪಟಾಲಜಿ ಕೇಂದ್ರದ ನಿರ್ದೇಶಕಿ (Environmental Hepatology Center) ಪ್ರೊಫೆಸರ್ ಶಿಲ್ಪಾ ಚೋಕ್ಷಿ, ಲಿವರ್ ಕಾಯಿಲೆ ವಿಶ್ವಾದ್ಯಂತ ಹೆಚ್ಚುತ್ತಿದ್ದು, 25 ಸಾವುಗಳಲ್ಲಿ ಒಂದಕ್ಕೆ ಇದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮೈಕ್ರೋಪ್ಲಾಸ್ಟಿಕ್‌ಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ ಎಂದು ತೋರಿಸುವ ಒಂದು ಅಧ್ಯಯನವನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ರಕ್ತನಾಳಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಇರುವಿಕೆಯನ್ನು ಕಂಡುಹಿಡಿದ ಸಂಶೋಧಕರು, ಇದು ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ಕ್ಯಾಂಪನಿಯಾ ವಿಶ್ವವಿದ್ಯಾಲಯದ ರಿಸರ್ಚ್, ಈ ಅಧ್ಯಯನದ ಹಿಂದಿರುವ ರೂವಾರಿ.
ಕುತ್ತಿಗೆಯಲ್ಲಿರುವ ಮುಖ್ಯ ರಕ್ತನಾಳದಲ್ಲಿನ ಕೂಡಿರುವ ಕೊಬ್ಬನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದ ಸುಮಾರು ಇನ್ನೂರು ಜನರನ್ನು ಪರೀಕ್ಷಿಸಿದಾಗ ಮೈಕ್ರೋಪ್ಲಾಸ್ಟಿಕ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ, ಶೇ.60ರಷ್ಟು ಮಂದಿ ತಮ್ಮ ಮುಖ್ಯ ಆರ್ಟರಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿರುವುದು ಕಂಡುಬಂದಿದೆ. ತಮ್ಮ ರಕ್ತನಾಳಗಳಲ್ಲಿ ಈ ಅಂಶಗಳಿರುವವರು ಹೃದಯಾಘಾತ, ಪಾರ್ಶ್ವವಾಯು ಅಥವಾ ಸಾವಿಗೆ ಶೇ.4.5ರಷ್ಟು ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಹೇಳುತ್ತಾರೆ.
3 ಮಾರ್ಗಗಳ ಮೂಲಕ ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹದೊಳಗೆ
1. ಆಹಾರ: ಮೀನು, ಉಪ್ಪು, ನೀರು, ತರಕಾರಿಗಳ ಮೂಲಕ ನಮ್ಮ ಹೊಟ್ಟೆಯೊಳಗೆ ಮೈಕ್ರೋಪ್ಲಾಸ್ಟಿಕ್‌ಗಳು
2. ಉಸಿರಾಟ: ಗಾಳಿಯಲ್ಲಿ ತೇಲುವ ಸಣ್ಣ ಕಣಗಳು ನಮ್ಮ ಮೂಗು ಮತ್ತು ಬಾಯಿಯ ಮುಖಾಂತರ ದೇಹ ಸೇರುತ್ತವೆ
3. ಚರ್ಮ: ಲಿಪ್ಸ್ಟಿಕ್, ಮೈಕಾಂತಿಗಾಗಿ ಚರ್ಮಕ್ಕೆ ಹಚ್ಚುವ ಕಾಸ್ಮೆಟಿಕ್ ಉತ್ಪನ್ನಗಳು, ಸ್ಕ್ರಬ್‌ಗಳಿಂದಲೂ ಮೈಕ್ರೋಪ್ಲಾಸ್ಟಿಕ್ ದೇಹ ಪ್ರವೇಶಿಸುತ್ತದೆ.
ಏನು ಮಾಡೋದು?
ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ದಿನಚರಿಯಲ್ಲಿ ಅದಾಗಲೇ ಸೇರಿಬಿಟ್ಟಿದೆ. ನಾವು ದಿನನಿತ್ಯ ಉಪಯೋಗಿಸುವ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಸಿಂಥೆಟಿಕ್ ಬಟ್ಟೆಗಳು, ಕಾಸ್ಮೆಟಿಕ್ಸ್ ಇತ್ಯಾದಿ. ಇವುಗಳ ಬಳಕೆಯನ್ನು ಆದಷ್ಟು ಕಡಿತಗೊಳಿಸಿದರೆ ಉತ್ತಮ. ಇದರ ಬದಲಿಗೆ ಗಾಜು ಅಥವಾ ಸ್ಟೀಲ್ ಬಾಟಲ್ ಬಳಸುವುದು ಒಳ್ಳೆಯದು. ನಮ್ಮ ಜೀವನದಲ್ಲಿ ಆದಷ್ಟು ಅಲ್ಲ, ಸಂಪೂರ್ಣವಾಗಿ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದು ಸರಿಯಾದ ಮಾರ್ಗ. ಕಾರಣ, ಇದು ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ ಮತ್ತು ಪ್ರಕೃತಿಗೂ ಭಾರೀ ಹಾನಿಕಾರಕ ಎಂಬುದನ್ನು ನಾವು ಮರೆಯುವಂತಿಲ್ಲ,(ಏಜೆನ್ಸೀಸ್).