ಬೇಸಿಗೆಯಲ್ಲಿ ನೀವು ತೋರುವ ಈ ಕರುಣೆಯು ಕೂಡ ವಿಷಕಾರಿ ಹಾವಿಗೆ ಆಹ್ವಾನ ನೀಡಿದಂತೆ: ಈ ಬಗ್ಗೆ ಎಚ್ಚರವಿರಲಿ! Snake bites
- ನಮ್ಮ ದೇಶದಲ್ಲಿ ವಿಷಪೂರಿತ ಹಾವು ಕಡಿತದಿಂದ ವರ್ಷಕ್ಕೆ ಸಾವಿರಾರು ಮಂದಿ ಅಸುನೀಗುತ್ತಿದ್ದಾರೆ
- ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡುವ ತಪ್ಪುಗಳೇ ಹಾವುಗಳನ್ನು ನಾವಿರುವಲ್ಲಿಗೆ ಆಹ್ವಾನಿಸುತ್ತಿದ್ದೇವೆ
- ಅದರಲ್ಲೂ ಇದು ಬೇಸಿಗೆ ಕಾಲವಾದ್ದರಿಂದ ಹಾವುಗಳು ತಂಪಿನ ವಾತಾವರಣ ಹುಡುಕಿ ಬರುವುದು ಸಾಮಾನ್ಯ
- ಬೇಸಿಗೆಯಲ್ಲಿ ಹಾವು ಕಡಿತದ ಸಂಖ್ಯೆ ಹೆಚ್ಚಾಗುತ್ತದೆ ಎಂದು ಖ್ಯಾತ ಉರಗ ಪ್ರೇಮಿ ವಾವಾ ಸುರೇಶ್ ಹೇಳಿದ್ದಾರೆ
Snake bites : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ನಮ್ಮ ದೇಶದಲ್ಲಿ ವಿಷಪೂರಿತ ಹಾವು ಕಡಿತದಿಂದ ವರ್ಷಕ್ಕೆ ಸಾವಿರಾರು ಮಂದಿ ಅಸುನೀಗುತ್ತಿದ್ದಾರೆ. ಮನುಷ್ಯರಾದ ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡುವ ತಪ್ಪುಗಳೇ ಹಾವುಗಳನ್ನು ನಾವಿರುವಲ್ಲಿಗೆ ಆಹ್ವಾನಿಸುತ್ತಿದ್ದೇವೆ. ಅದರಲ್ಲೂ ಇದು ಬೇಸಿಗೆ ಕಾಲವಾದ್ದರಿಂದ ಹಾವುಗಳು ತಂಪಿನ ವಾತಾವರಣ ಹುಡುಕಿ ಬರುವುದು ಸಾಮಾನ್ಯ. ಹೀಗೆ ಒಳ್ಳೆಯ ಸ್ಥಳವನ್ನು ಹುಡುಕಿ ಬರುವಾಗ ಮನೆಗಳ ಒಳಗೂ ಎಂಟ್ರಿ ಕೊಡುತ್ತವೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ತುಂಬಾನೇ ಮುಖ್ಯ.
ನೀರು ಇಡುವಾಗ ಎಚ್ಚರಿಕೆ ವಹಿಸಿ
ಬೇಸಿಗೆಯಲ್ಲಿ ಹಾವು ಕಡಿತದ ಸಂಖ್ಯೆ ಹೆಚ್ಚಾಗುತ್ತದೆ ಎಂದು ಖ್ಯಾತ ಉರಗ ಪ್ರೇಮಿ ಹಾಗೂ ಉರಗ ರಕ್ಷಕ ವಾವಾ ಸುರೇಶ್ ಹೇಳಿದ್ದಾರೆ. ಬಿಸಿಲು ಹೆಚ್ಚಿರುವುದರಿಂದ ಅನೇಕ ಜನರು ಪಕ್ಷಿಗಳಿಗಾಗಿ ಸಣ್ಣ ಪಾತ್ರೆಗಳಲ್ಲಿ ನೀರನ್ನು ಇಡುತ್ತಾರೆ. ಆದರೆ, ನೆಲದ ಮೇಲೆ ನೀರು ಇಡುವುದು ತುಂಬಾನೇ ಅಪಾಯಕಾರಿ. ನೆಲದ ಬದಲು ಗೋಡೆಯ ಮೇಲೆ ನೀರನ್ನು ಇಡಿ. ಗೋಡೆಯನ್ನು ಹೊರತುಪಡಿಸಿದರೆ, ಟೆರೇಸ್ ಮೇಲೆ ಇಡಬಹುದು ಅಥವಾ ನೇತುಹಾಕಬಹುದು. ಇದು ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡುವ ಸಮಯ ಆಗಿರುವುದರಿಂದ ಹಾವುಗಳು ನೀರನ್ನು ಹುಡುಕಿಕೊಂಡು ಬರುತ್ತವೆ. ಹೀಗಿರುವಾಗ ಮನೆಯ ನೆಲದ ಮೇಲೆ ನೀರಿಟ್ಟರೆ ಹಾವುಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಾವಾ ಸುರೇಶ್ ಅವರು ಎಚ್ಚರಿಸಿದ್ದಾರೆ.
ಮನೆಯ ಮುಂಚೆ ಸ್ವಚ್ಛವಾಗಿರಲಿ
ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ. ಮನೆಯ ಸುತ್ತಲಿನ ಪರಿಸರದಲ್ಲಿ ಕಸ ಸಂಗ್ರಹಣೆ ಮಾಡುವುದು ಮತ್ತು ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡದೇ ಇರುವುದು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡುವುದು ಮಾಡುತ್ತೇವೆ. ಈ ಒಂದು ಅಭ್ಯಾಸವೂ ಹಾವುಗಳಿಗೆ ಆಹ್ವಾನ ನೀಡಿದಂತೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಹಾವುಗಳು ಇಂತಹ ಜಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಆ ಸ್ಥಳದಲ್ಲಿ ನಾವು ಓಡಾಡಿದರೆ, ಹಾವು ಕಡಿಯುತ್ತದೆ. ಅಂದಹಾಗೆ, ಹಾವುಗಳು ಸುಖಾಸುಮ್ಮನೇ ಕಡಿಯುವುದಿಲ್ಲ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಗೊತ್ತಾದಾಗ ಮಾತ್ರ ಕಚ್ಚುತ್ತವೆ.
ಹಾವು ಕಚ್ಚಿದಾಗ ಏನು ಮಾಡಬೇಕು?
ಹಾವು ಕಚ್ಚಿದ ವ್ಯಕ್ತಿಯನ್ನು ಶಾಂತವಾಗಿ ಮತ್ತು ನಿಶ್ಚಲವಾಗಿ ಇಡಬೇಕು. ಏನಾದರೂ ಹಾವು ಕೈಗೆ ಕಚ್ಚಿದರೆ ಆ ಪ್ರದೇಶವನ್ನು ಜೋಲಿ ಅಥವಾ ಸ್ಪ್ಲಿಂಟ್ ಬಳಸಿ ನಿಶ್ಚಲಗೊಳಿಸಬೇಕು ಮತ್ತು ಹೃದಯದ ಮಟ್ಟಕ್ಕಿಂತ ಕೆಳಗೆ ಇಡಬೇಕು. ಕಚ್ಚಿದ ಸ್ಥಳದ ಬಳಿ ಇರುವ ಯಾವುದೇ ಬಿಗಿಯಾದ ಬಟ್ಟೆ ಅಥವಾ ಆಭರಣಗಳನ್ನು ತೆಗೆದುಹಾಕಬೇಕು. ಹಾವು ಕಚ್ಚಿದ ವ್ಯಕ್ತಿಯು ಎದ್ದು ನಡೆಯಬಾರದು. ಈ ಚಲನೆಯು ವಿಷದ ಹರಡುವಿಕೆಯನ್ನು ವೇಗಗೊಳಿಸುತ್ತದೆ.
ಏನು ಮಾಡಬಾರದು?
ಹಾವು ಕಚ್ಚಿದಾಗ ನೀವು ಎಂದಿಗೂ ಮಾಡಬಾರದ ಕೆಲವು ಕೆಲಸಗಳಿವೆ. ಅವುಗಳೆಂದರೆ, ಹಾವು ಕಚ್ಚಿದಾಗ ಉಂಟಾಗುವ ಗಾಯವನ್ನು ಕತ್ತರಿಸುವುದಾಗಲಿ ಅಥವಾ ಬಾಯಿಯಿಂದ ಹೀರುವುದಾಗಲಿ ಮಾಡಬಾರದು. ಐಸ್ ಅಥವಾ ಟೂರ್ನಿಕೆಟ್ ಹಚ್ಚಬಾರದು. ಆಲ್ಕೋಹಾಲ್ ಅಥವಾ ಕೆಫೀನ್ ನೀಡುವುದು ಮತ್ತು ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದು ಇವೆಲ್ಲವೂ ಮೂರ್ಖತನದ ಕೆಲಸಗಳಾಗಿವೆ. ನೀವು ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ, ನೀವು ತಕ್ಷಣ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ಹಂತಗಳನ್ನು ಅನುಸರಿಸಲು ವಿಫಲವಾದರೆ ಸಾವು ಸಂಭವಿಸುತ್ತದೆ. ಹಾವಿನ ವಿಷದ ಪ್ರಮಾಣ, ಅದರ ಪರಿಣಾಮವು ಜಾತಿಯ ಮೇಲೆ ಮತ್ತು ಕಚ್ಚುವಿಕೆಯ ನಿರ್ದಿಷ್ಟ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಯಾವುದೇ ಹಾವು ಕಡಿತದ ಸಂದರ್ಭದಲ್ಲಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯ. ಆಧುನಿಕ ಆಂಟಿವೆನಮ್ ಅಥವಾ ಪ್ರತಿವಿಷ ಚಿಕಿತ್ಸೆಯು ಸಾಮಾನ್ಯವಾಗಿ ಹೆಚ್ಚಿನ ಹಾವು ಕಡಿತದ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಉತ್ತಮ ಫಲಿತಾಂಶಕ್ಕಾಗಿ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಹೇಳಿದರು, (ಏಜೆನ್ಸೀಸ್).