Smart ways to protect your health
ಸಂಪತ್ತು, ಯಶಸ್ಸು, ಹಣ-ಹೊನ್ನು ಎಷ್ಟೇ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನವೇ ಅರ್ಥಹೀನವಾಗುತ್ತದೆ. ಆರೋಗ್ಯಕರ ದೇಹ ಮತ್ತು ಮನಸ್ಸು ಮಾತ್ರ ಮನುಷ್ಯನಿಗೆ ನಿಜವಾದ ಸಂತೋಷವನ್ನು ನೀಡಬಲ್ಲವು. ರೋಗಗಳಿಂದ ಬಳಲುತ್ತಿರುವ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಸುಖವಾಗಿ ಇರಲಾರ. ಆದ್ದರಿಂದ ಪ್ರತಿದಿನ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಒತ್ತಡರಹಿತ ಜೀವನ ಅತ್ಯಗತ್ಯ. ಪ್ರಸಕ್ತ ವರ್ಷದ ವಿಶ್ವ ಆರೋಗ್ಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಖಟಜಛಿಠಿಜಛ್ಟಿ ್ಛ್ಟ ಜಛಿಚ್ಝಠಿಜ, ಖಠಿಚ್ಞಛ ಡಿಜಿಠಿಜ ಠ್ಚಜಿಛ್ಞಿ್ಚ (ಆರೋಗ್ಯಕ್ಕಾಗಿ ಒಗ್ಗೂಡೋಣ, ವಿಜ್ಞಾನದ ಪರ ನಿಲ್ಲೋಣ) ಎಂಬ ಪರಿಕಲ್ಪನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ದೈನಂದಿನ ಬದುಕಿನಲ್ಲಿ ನಾವು ಗಮನ ಹರಿಸಬಹುದಾದ ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.
ಸ್ಮಾರ್ಟ್ ವಾಚ್ವುನ್!
ಇಂದಿನ ತಾಂತ್ರಿಕ ಯುಗದಲ್ಲಿ ಸ್ಮಾರ್ಟ್ ವಾಚ್ಗಳು ಕೇವಲ ಸಮಯ ನೋಡುವ ಸಾಧನವಾಗಿ ಉಳಿದಿಲ್ಲ, ಅವು ಮನುಷ್ಯನ ಪಾಲಿಗೆ ವೈದ್ಯರಂತೆ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿರುವ ಇಸಿಜಿ ಮತ್ತು ಹಾರ್ಟ್ರೇಟ್ ಮಾನಿಟರ್ ಫೀಚರ್ಗಳು ರಕ್ತದೊತ್ತಡದಲ್ಲಿ ಅಥವಾ ಹೃದಯ ಬಡಿತದಲ್ಲಿ ಏರುಪೇರಾದಾಗ ತಕ್ಷಣ ಎಚ್ಚರಿಕೆ ನೀಡುವ ಮೂಲಕ ಹೃದಯಾಘಾತದ ಮುನ್ಸೂಚನೆಯನ್ನು ಮೊದಲೇ ತಿಳಿಯಲು ಸಹಕಾರಿಯಾಗುತ್ತವೆ. ಅದರಲ್ಲಿರುವ ಫಾಲ್ ಡಿಟೆಕ್ಷನ್ ತಂತ್ರಜ್ಞಾನ ಒಬ್ಬ ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಅಥವಾ ನೆಲಕ್ಕೆ ಬಿದ್ದಾಗ ಅದನ್ನು ಪತ್ತೆ ಹಚ್ಚಿ ತಾನಾಗಿಯೇ ಎಮರ್ಜೆನ್ಸಿ ಕಾಂಟ್ಯಾಕ್ಟ್ಗಳಿಗೆ ಲೊಕೇಶನ್ ಸಮೇತ ಸಂದೇಶ ಕಳುಹಿಸುತ್ತದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟ ಅಳೆಯುವ ಎಸ್ಪಿಒ2 ಸೆನ್ಸರ್ಗಳು ಶ್ವಾಸಕೋಶದ ಗಂಭೀರ ಸಮಸ್ಯೆಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದ್ದು, ಒಟ್ಟಾರೆಯಾಗಿ ಇವು ಮನುಷ್ಯನ ಜೀವರಕ್ಷಕವಾಗಿ ಕೆಲಸ ಮಾಡುತ್ತಿವೆ.
ಒತ್ತಡಕ್ಕೆ ಗುಡ್ಬೈ ಹೇಳಿ...
ಕೆಲಸದ ಸ್ಥಳದಲ್ಲಿ ಒತ್ತಡ ನಿರ್ವಹಿಸುವುದು ವ್ಯಕ್ತಿಯ ವೈಯಕ್ತಿಕ ಅಗತ್ಯ ಮಾತ್ರವಲ್ಲ, ಅದು ವೃತ್ತಿಪರ ಯಶಸ್ಸಿನ ಅಡಿಪಾಯ ಕೂಡ ಹೌದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬರ್ನ್ಔಟ್ ಆಗುವುದನ್ನು ತಪ್ಪಿಸಲು ದಿನದ ಕೆಲಸಗಳನ್ನು ಪ್ರಿಯಾರಿಟೈಸ್ (ಆದ್ಯತೆ) ಮಾಡಿಕೊಳ್ಳುವುದು ಅತಿ ಮುಖ್ಯ. ಯಾವುದನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬಹುದು ಎಂದು ವಿಂಗಡಿಸಿಕೊಳ್ಳಬೇಕು. ಇದರಿಂದ ಗೊಂದಲ, ಆತಂಕ ಕಡಿಮೆಯಾಗುತ್ತದೆ. ಸತತವಾಗಿ ಕೆಲಸ ಮಾಡುವ ಬದಲು ಪ್ರತಿ ಗಂಟೆಗೊಮ್ಮೆ 5 ನಿಮಿಷಗಳ ಮೈಕ್ರೋ ಬ್ರೇಕ್ ತೆಗೆದುಕೊಳ್ಳುವುದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕೆಲಸದ ಹೊರೆ ಹೆಚ್ಚಾದಾಗ ಸಹೋದ್ಯೋಗಿಗಳ ಅಥವಾ ಮೇಲಧಿಕಾರಿಗಳ ಜತೆ ಮುಕ್ತವಾಗಿ ಮಾತನಾಡುವುದು ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ಧ್ಯಾನ ಮಾಡುವುದು, ಕಚೇರಿ ಕೆಲಸ ಮುಗಿದ ನಂತರ ಡಿಜಿಟಲ್ ಡಿಸ್ಕನೆಕ್ಟ್ ಮಾಡುವುದು ಅಗತ್ಯ. ಉಸಿರಾಟದ ಎಕ್ಸರ್ಸೈಜ್ ಮಾಡುವುದು ಒಟ್ಟಾರೆ ಮಾನಸಿಕ ಆರೋಗ್ಯಕ್ಕೆ ಪೂರಕ.
ಕಣ್ಣಿನ ಕಾಂತಿ ಕಾಪಾಡಿಕೊಳ್ಳಿ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಪರದೆಗಳ ಅತಿಯಾದ ಬಳಕೆ ಡಿಜಿಟಲ್ ಐ ಸ್ಟ್ರೇನ್ ಎಂಬ ಹೊಸ ಸಮಸ್ಯೆಗೆ ಕಾರಣವಾಗಿದ್ದು ಸತತವಾಗಿ ಸ್ಕ್ರೀನ್ ನೋಡುವುದರಿಂದ ಕಣ್ಣುಗಳು ಆಯಾಸಗೊಳ್ಳುವುದು, ದೃಷ್ಟಿ ಮಂಜಾಗುವುದು ಮತ್ತು ಡ್ರೖೆ ಐ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಲು ತಜ್ಞರು 20-20-20 ನಿಯಮವನ್ನು ಸೂಚಿಸುತ್ತಾರೆ. ಅಂದರೆ ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದ ವಸ್ತುವನ್ನು 20 ಸೆಕೆಂಡ್ಗಳ ಕಾಲ ನೋಡುವುದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಇದರೊಂದಿಗೆ ಸ್ಕ್ರೀನ್ನ ಬ್ರೖೆಟ್ನೆಸ್ ಕಡಿಮೆ ಮಾಡುವುದು, ಮಲಗುವ ಮುನ್ನ ಮೊಬೈಲ್ ಬಳಸದಿರುವುದು ಮತ್ತು ಕಣ್ಣುಗಳ ರಕ್ಷಣೆಗಾಗಿ ಬ್ಲ್ಯೂಲೈಟ್ ಫಿಲ್ಟರ್ ಇರುವ ಆಂಟಿ ಗ್ಲೇರ್ ಕನ್ನಡಕಗಳನ್ನು ಅಥವಾ ಸ್ಕ್ರೀನ್ ಪೊ›ಟೆಕ್ಟರ್ಗಳನ್ನು ಬಳಸುವುದು ಕಣ್ಣಿನ ಸಮಸ್ಯೆಗಳನ್ನು ತಡೆಯಲು ಇರುವ ಸುಲಭ ಮಾರ್ಗಗಳು.
ನಿದ್ರೆ ಐಷಾರಾಮವೋ, ಅನಿವಾರ್ಯವೋ?
‘ಚೆನ್ನಾಗಿ ನಿದ್ರೆ ಮಾಡ್ರೀ...’ ಎಂದರೆ ಕೆಲವರು ‘ಅಯ್ಯೋ ಅದು ವೇಸ್ಟ್ ಆಫ್ ಟೈಮ್..’ ಎಂದೋ, ‘ಅಷ್ಟು ಲಕ್ಷುರಿ ನಮಗೆಲ್ಲಿದೆ...’ ಎಂದೋ ಪ್ರತಿಕ್ರಿಯಿಸುತ್ತಾರೆ. ಆದರೆ ವೈಜ್ಞಾನಿಕವಾಗಿ 8 ಗಂಟೆಗಳ ನಿದ್ರೆ ಐಷಾರಾಮವಲ್ಲ, ಅದು ದೇಹಕ್ಕೆ ಅತ್ಯಂತ ಅನಿವಾರ್ಯ. ನಿದ್ರೆಯ ಸಮಯದಲ್ಲಿ ಮೆದುಳು ಮತ್ತು ದೇಹ ಕೆಲವು ರಿಪೇರಿ ಕೆಲಸಗಳನ್ನು ಮಾಡಿಕೊಳ್ಳುತ್ತವೆ. ಗಾಢ ನಿದ್ರೆಯಿಂದ ಸ್ಮರಣಶಕ್ತಿ ಚುರುಕಾಗುತ್ತದೆ. ಏಕಾಗ್ರತೆಗೆ ಮೆದುಳನ್ನು ಸಜ್ಜುಗೊಳಿಸುತ್ತದೆ. ಹಾರ್ವೇನ್ಗಳ ಸಮತೋಲನ, ರೋಗನಿರೋಧಕ ಶಕ್ತಿಯ ಹೆಚ್ಚಳ ಮತ್ತು ಸ್ನಾಯುಗಳ ಬೆಳವಣಿಗೆಗೆ ಶಕ್ತಿ ನೀಡುತ್ತದೆ. ಸತತವಾಗಿ ನಿದ್ರೆಯ ಕೊರತೆ ಆಗುತ್ತಿದ್ದರೆ ಒತ್ತಡ, ಆತಂಕ ಖಚಿತ. ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ಹೃದ್ರೋಗ ಸಮಸ್ಯೆಗಳೂ ಉಂಟಾಗುತ್ತವೆ. ನಿಮ್ಮ ಸ್ಲೀಪ್ ಕ್ವಾಲಿಟಿ ಮತ್ತು ಡೀಪ್ಸ್ಲೀಪ್ ಅವಧಿಯನ್ನು ನಿಖರವಾಗಿ ಅಳೆಯಲು ಸ್ಮಾರ್ಟ್ ಸಾಧನಗಳನ್ನು ಬಳಸಿಕೊಂಡು ಉತ್ತಮ ಬೆಡ್ಟೈಮ್ ರೂಟಿನ್ ಅಳವಡಿಸಿಕೊಳ್ಳುವುದು ಆರೋಗ್ಯಕರ ಜೀವನದ ರಹಸ್ಯ.
ಎಷ್ಟು ನೀರು ಕುಡಿಯಬೇಕು?
ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕೆಂದು ಹಲವರು ಹೇಳುತ್ತಾರೆ. ಆದರೆ ಅದು ಎಲ್ಲರಿಗೂ ಕಡ್ಡಾಯವಲ್ಲ. ವ್ಯಕ್ತಿಯ ತೂಕ, ದೈಹಿಕ ಚಟುವಟಿಕೆ, ಆಯಾ ಸ್ಥಳದ ಹವಾಮಾನದ ಮೇಲೆ ಇದು ಅವಲಂಬಿತವಾಗಿರುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ದೇಹದ ಹೈಡ್ರೇಶನ್ ಕಾಪಾಡಲು ನೀರು ಸಹಕಾರಿ. ಆದರೆ ಅತಿಯಾಗಿ ನೀರು ಕುಡಿಯುವುದು ಅಂದರೆ ಓವರ್ಹೈಡ್ರೇಶನ್ನಿಂದ ಕಿಡ್ನಿಗಳ ಮೇಲೆ ಒತ್ತಡವುಂಟಾಗಿ ರಕ್ತದಲ್ಲಿನ ಸೋಡಿಯಂ ಮಟ್ಟ ಕಡಿಮೆ ಆಗಬಹುದು. ನಿಮ್ಮ ದೇಹಕ್ಕೆ ಎಷ್ಟು ನೀರು ಬೇಕು ಎಂಬುದನ್ನು ತಿಳಿಯಲು ಬಾಯಾರಿಕೆಯೇ ಅತ್ಯುತ್ತಮ ಸಂಕೇತ. ಎ.ಸಿ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ 2ರಿಂದ 2.5 ಲೀ. ನೀರು ಸಾಕಾಗಬಹುದು. ಹೈಡ್ರೇಶನ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳಲು ನೀವು ಸ್ಮಾರ್ಟ್ ವಾಟರ್ ಬಾಟಲ್ ಬಳಸಬಹುದು. ಅಥವಾ ನೀರು ಕುಡಿಯುವುದನ್ನು ನೆನಪಿಸುವ ಮೊಬೈಲ್ ಆಪ್ಗಳನ್ನು ಬಳಸಬಹುದು. ಅವು ಬಿಜಿ ಲೈಫ್ಸ್ಟೈಲ್ನವರಿಗೆ ಅತಿ ಉಪಯುಕ್ತ.
ಡಿಜಿಟಲ್ ಉಪವಾಸ...
ಇಂದಿನ ಸ್ಮಾರ್ಟ್ಫೋನ್ ಯುಗದಲ್ಲಿ ನಿಮಿಷ ನಿಮಿಷಕ್ಕೂ ನೋಟಿಫಿಕೇಶನ್ಗಳು ನಮ್ಮ ಏಕಾಗ್ರತೆಯನ್ನು ಭಂಗಗೊಳಿಸುತ್ತಿವೆ. ಅನಗತ್ಯ ಆತಂಕಕ್ಕೂ ಕಾರಣವಾಗುತ್ತಿವೆ. ಇದನ್ನು ನಿಯಂತ್ರಿಸಲು ‘ಡಿಜಿಟಲ್ ಡಿಟಾಕ್ಸ್’ ಅತ್ಯಗತ್ಯ. ದಿನದಲ್ಲಿ ಕನಿಷ್ಠ 1 ಗಂಟೆ ಕಾಲ ಫೋನ್ನಿಂದ ದೂರವಿರುವುದು, ಮಲಗುವ 1 ಗಂಟೆ ಮೊದಲು ಮೊಬೈಲ್ ಮುಟ್ಟದಿರುವುದು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ಸ್ಮಾರ್ಟ್ಫೋನ್ಗಳಲ್ಲಿರುವ ‘ಫೋಕಸ್ ಮೋಡ್’ ಬಳಸುವುದರಿಂದ ಕೆಲಸದ ಸಮಯದಲ್ಲಿ ಅನಗತ್ಯವಾಗಿ ಸೋಶಿಯಲ್ ಮೀಡಿಯಾ ಬಳಸುವುದನ್ನು ತಡೆಯಬಹುದು. ವಾರಾಂತ್ಯದಲ್ಲಿ ಸಂಪೂರ್ಣವಾಗಿ ಇಂಟರ್ನೆಟ್ನಿಂದ ದೂರವಿರುವ ‘ಸೈಬರ್ ಉಪವಾಸ’ ರೂಢಿಸಿಕೊಳ್ಳುವುದು ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ.
ಕೆಲಸವೇ ವ್ಯಾಯಾಮ
ಜಿಮ್ೆ ಹೋಗಿ ಭಾರ ಎತ್ತುವುದೇ ವ್ಯಾಯಾಮವಲ್ಲ. ದೈನಂದಿನ ಮನೆ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕೂಡ ಉತ್ತಮ ದೈಹಿಕ ಚಟುವಟಿಕೆಯೇ. ಮನೆಯನ್ನು ಗುಡಿಸುವುದು, ಕೈತೋಟದ ಕೆಲಸ ಮಾಡುವುದು ಸ್ನಾಯುಗಳ ಚಲನೆಗೆ ಮತ್ತು ಕ್ಯಾಲೊರಿ ದಹಿಸಲು ಸಹಾಯ ಮಾಡುತ್ತದೆ. ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸುವುದು ಹೃದಯದ ಆರೋಗ್ಯಕ್ಕೆ ಅತ್ಯುತ್ತಮ. ಕಚೇರಿಯಲ್ಲಿ ಫೋನ್ನಲ್ಲಿ ಮಾತನಾಡುವಾಗ ಅತ್ತಿತ್ತ ನಡೆಯುವುದು ಅಥವಾ ಹತ್ತಿರದ ಅಂಗಡಿಗಳಿಗೆ ಹೋಗುವಾಗ ವಾಹನ ಬಿಟ್ಟು ನಡೆದುಕೊಂಡು ಹೋಗುವುದು ದೇಹದ ಮೆಟಬಾಲಿಸಂ ಹೆಚ್ಚಿಸಲು ನೆರವಾಗುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷ ವೇಗದ ನಡಿಗೆ ರೂಢಿಸಿಕೊಳ್ಳುವುದು ದೀರ್ಘಕಾಲದ ಕಾಯಿಲೆಗಳಿಂದ ದೂರವಿರಲು ಇರುವ ಸರಳ ಮಾರ್ಗ.
ಮಕ್ಕಳಿರಲವ್ವ ಮೈದಾನದ ತುಂಬ...!
ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಪರದೆಗಳಿಗೆ ಅಂಟಿಕೊಳ್ಳುತ್ತಿರುವುದು ಗಂಭೀರ ಚಿಂತನೆಯ ವಿಷಯ. ಈ ಸ್ಕ್ರೀನ್ ಅಡಿಕ್ಷನ್ನಿಂದಾಗಿ ದೈಹಿಕ ಚಟುವಟಿಕೆಯ ಕೊರತೆ ಮತ್ತು ಚೈಲ್ಡ್ಹುಡ್ ಒಬೆಸಿಟಿ ಹೆಚ್ಚಾಗುತ್ತಿದೆ. ಡಿಜಿಟಲ್ ಪೇರೆಂಟಿಂಗ್ ಇಂದಿನ ಅವಶ್ಯಕತೆಗಳಲ್ಲೊಂದು. ಮಕ್ಕಳ ಸ್ಕ್ರೀನ್ ಟೈಮ್ ಮಿತಿಗೊಳಿಸಿ ಅವರನ್ನು ಹೊರಾಂಗಣ ಕ್ರೀಡೆ, ಈಜು ಅಥವಾ ಸೈಕ್ಲಿಂಗ್ನಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು. ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಟ್ರೆಕ್ಕಿಂಗ್ ಹೋಗುವುದು, ಕುಂಟೆಬಿಲ್ಲೆ ಅಥವಾ ಲಗೋರಿಯಂತಹ ಸಾಂಪ್ರದಾಯಿಕ ಆಟಗಳನ್ನು ಆಡುವುದು, ಗಿಡಕ್ಕೆ ನೀರು ಹಾಕುವಂತಹ ಮನೆಗೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ.
ಧಂ ಎಳೆಯಬೇಕಿಲ್ಲ, ಕೂತ್ಕೊಂಡ್ರೆ ಸಾಕು!
ಸಿಟಿಂಗ್ ಈಸ್ ದಿ ನ್ಯೂ ಸ್ಮೋಕಿಂಗ್ (ಬಹಳ ಹೊತ್ತು ಕುಳಿತುಕೊಳ್ಳುವುದು ಧೂಮಪಾನಕ್ಕೆ ಸಮಾನ) ಎಂಬ ಮಾತು ಇಂದಿನ ಜಡ ಜೀವನಶೈಲಿಯ ಅಪಾಯಕ್ಕೆ ಸಾಕ್ಷಿ. ಏಕೆಂದರೆ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ದೇಹದ ಮೆಟಬಾಲಿಸಂ ಅನ್ನು ನಿಧಾನಗೊಳಿಸಿ ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರತಿ 30 ನಿಮಿಷಕ್ಕೊಮ್ಮೆ ಎದ್ದು ಕನಿಷ್ಠ 2 ನಿಮಿಷ ನಡೆಯುವ ಅಥವಾ ದೇಹವನ್ನು ಸ್ಟ್ರೆಚ್ ಮಾಡುವುದನ್ನು ರೂಢಿಸಿಕೊಳ್ಳಬೇಕು. ದೈನಂದಿನ ಚಟುವಟಿಕೆಯನ್ನು ಟ್ರಾ್ಯಕ್ ಮಾಡಲು ಮತ್ತು ಹೆಚ್ಚು ಹೊತ್ತು ಕುಳಿತಿದ್ದರೆ ಎಚ್ಚರಿಸಲು ಸೆಡೆಂಟರಿ ಅಲರ್ಟ್ ಫೀಚರ್ ಇರುವ ಸ್ಮಾರ್ಟ್ ವಾಚ್ಗಳು ಬಂದಿವೆ. ‘ಸ್ಟಾ್ಯಂಡ್ ರಿಮೈಂಡರ್’ ನೀಡುವ ಮೂಲಕ, ಚಟುವಟಿಕೆಯಿಂದ ಇರುವಂತೆ ನಿಮ್ಮನ್ನು ಪ್ರೇರೇಪಿಸುತ್ತವೆ.
ನಿಯಮಿತ ತಪಾಸಣೆ
ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ವರ್ಷಕ್ಕೊಮ್ಮೆ ‘ಹೋಲ್ ಬಾಡಿ ಚೆಕ್ಅಪ್’ ಒಳ್ಳೆಯದು. ವೈದ್ಯಕೀಯ ವೆಚ್ಚ ಗಗನಕ್ಕೆ ಏರುತ್ತಿರುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸೂಕ್ತ ಹೆಲ್ತ್ ಇನ್ಶೂರೆನ್ಸ್ ಮಾಡಿಸುವುದು ಆರ್ಥಿಕ ಭದ್ರತೆ ನೀಡುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಆಗಾಗ ಪರೀಕ್ಷಿಸಿಕೊಳ್ಳುವುದರಿಂದ ಯಾವುದೇ ಗಂಭೀರ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆರೋಗ್ಯ ತಪಾಸಣೆಯ ವರದಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಂಡರೆ ತುರ್ತು ಸಂದರ್ಭದಲ್ಲಿ ವೈದ್ಯರಿಗೆ ಸರಿಯಾದ ಮಾಹಿತಿ ನೀಡಲು ಸಹಕಾರಿಯಾಗುತ್ತದೆ.