Irregular Sleep Makes Heart Attack 
ಆರೋಗ್ಯ

ಬೇಕಾಬಿಟ್ಟಿಯಾಗಿ ಯಾವ್ಯಾವುದೋ ಟೈಂನಲ್ಲಿ ಮಲಗುವ ಅಭ್ಯಾಸವಿದ್ರೆ ಇಂದೇ ಬಿಟ್ಬಿಡಿ; ಇದು ಈ ಎರಡು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ!..Irregular Sleep

ಪ್ರಮುಖ ಮುಖ್ಯಾಂಶಗಳು

  • ನಿತ್ಯ ಯಾವ್ಯಾವುದೋ ಸಮಯದಲ್ಲಿ ನಿದ್ದೆ ಮಾಡುವುದು ಹೃದಯ ಸಮಸ್ಯೆಗೆ ಕಾರಣವಾಗುತ್ತದೆ
  • ಆಘಾತಕಾರಿ ಸತ್ಯ ಬಯಲು ಮಾಡಿದ ​ಹತ್ತು ವರ್ಷಗಳ ಕಾಲ ನಡೆಸಿದ ಸಂಶೋಧನೆ
  • ​ಬೆಳಿಗ್ಗೆ ಏಳುವ ಸಮಯಕ್ಕಿಂತ ರಾತ್ರಿ ಮಲಗುವ ಸಮಯದ ಸ್ಥಿರತೆ ಮುಖ್ಯ ಎನ್ನುತ್ತಾರೆ ವೈದ್ಯರು
Irregular Sleep Makes Heart Attack:ಮನಸ್ಸಿಗೆ ಶಾಂತಿ ಹಾಗೂ ದೇಹದ ಚೇತರಿಕೆಗೆ, ಒತ್ತಡದಿಂದ ನಿರುಮ್ಮಳರಾಗಿಲು, ಮರುದಿನದ ಸಾಹಸದ ಭರವಸೆಗೆ ​ನಿದ್ರೆ ಮುಖ್ಯ. ದಿನಕ್ಕೆ ಆರೆಳು ಗಂಟೆ ನಿದ್ದೆ ಬೇಕೆ ಬೇಕು ಎನ್ನುತ್ತಾರೆ ತಜ್ಞರು. ಆದರೆ, ಇಂದಿನ ಬ್ಯುಸಿ ಜೀವನದ ಶೆಡ್ಯೂಲ್​ನಲ್ಲಿ ಸಿನಿಮಾ, ಮೊಬೈಲ್​ ಬಳಕೆ ಮಾಡುತ್ತಾ ನಿದ್ದೆ ಕಡಿಮೆ ಮಾಡಲಾಗುತ್ತದೆ. ಆದರೆ, ಸಂಶೋಧನೆಯೊಂದರ ಪ್ರಕಾರ ನಿತ್ಯ ಎಷ್ಟು ಗಂಟೆಗೆ ನಿದ್ರಿಸುತ್ತೇವೆ ಅನ್ನೋದು ಹೃದಯದ ಆರೋಗ್ಯಕ್ಕೆ ಮುಖ್ಯ ಎಂದು ಹೇಳಲಾಗುತ್ತಿದೆ.

ಅಧ್ಯಯನದಲ್ಲಿರುವ ವಿಚಾರವೇನು?

ಆಯಾ ಸಮಯಕ್ಕೆ,ಕಾಲಕ್ಕೆ ಏನಾಗಬೇಕೋ ಅದು ನಡೆದೆ ತೀರಬೇಕು ಅಂತಾರೆ ಹಿರಿಯರು, ಇದಕ್ಕೆ ಪೂರಕವಾಗಿ ಫಿನ್ ಲ್ಯಾಂಡ್ ನ ಓಲು ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ವರದಿಯೊಂದು ಹೊರಬಿದ್ದಿದೆ. ಸುಮಾರು 3,000ಕ್ಕೂ ಹೆಚ್ಚು ಜನರ ಮೇಲೆ 10 ವರ್ಷಗಳ ಕಾಲ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದು ಬಂದ ವಿಚಾರವೆಂದರೆ, ದಿನನಿತ್ಯ ನಿದ್ದೆ ಸಮಯದಲ್ಲಿ ಬದಲಾವಣೆಗಳಾದರೆ, ಇದು ಆರೋಗ್ಯಕ್ಕೆ ಮಾರಕ ಎನ್ನುವದನ್ನು ಇದರಲ್ಲಿ ಉಲ್ಲೇಖಿಸಿದ್ದಾರೆ.

ಬೆಡ್​​ ಟೈಂನ ಸ್ಥಿರತೆ ಮುಖ್ಯ

ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕೆಲಸ ಹಾಗೂ ಮೊಬೈಲ್​ ಬಳಕೆಯಿಂದ ರಾತ್ರಿ ಮಲಗುವ ಸಮಯ ಏರುಪೇರಾಗುತ್ತದೆ. ಒಂದು ದಿನ ರಾತ್ರಿ 10 ಗಂಟೆಗೆ, ಮರುದಿನ ರಾತ್ರಿ 12 ಗಂಟೆಗೆ ಮಲಗುವ ಪ್ರವೃತ್ತಿ ಆರೋಗ್ಯಕ್ಕೆ ಉತ್ತಮವಾದದ್ದಲ್ಲ. ಇದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತೀರಿ ಎನ್ನುತ್ತಾರೆ ವೈದ್ಯರು. ವಿಶೇಷವಾಗಿ ನಿದ್ರೆಯ ಸಮಯದಲ್ಲಿ 2 ಗಂಟೆಗಳಿಗಿಂತ ಹೆಚ್ಚು ವ್ಯತ್ಯಾಸವಿದ್ದರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕಡಿಮೆ ನಿದ್ದೆ ಮಾಡಬೇಡಿ

ಎಂಟರಿಂದ ಏಳು ಗಂಟೆ ನಿದ್ದೆ ಮಾಡುವುದನ್ನು ತಪ್ಪಿಸಿದರೆ ಭವಿಷ್ಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಳಿಗ್ಗೆ ಏಳುವ ಸಮಯಕ್ಕಿಂತ ರಾತ್ರಿ ಮಲಗುವ ಸಮಯದ ಸ್ಥಿರತೆ ಮುಖ್ಯ ಎನ್ನುವುದು ಈ ಅಧ್ಯಯನದಿಂದ ತಿಳಿದುಬಂದಿದೆ.

​ತಜ್ಞರು ಹೇಳೋದೇನು?

ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆಯ ವೈದ್ಯರೊಬ್ಬರ ಪ್ರಕಾರ 'ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಉಂಟಾದಾಗ ಅದು ದೇಹಕ್ಕೆ 'ಜೆಟ್ ಲ್ಯಾಗ್' ಆದಂತಹ ಅನುಭವ ನೀಡುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗುವುದು, ಹಾರ್ಮೋನ್ ಏರುಪೇರು, ಉರಿಯೂತ ಮತ್ತು ಚಯಾಪಚಯ ಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ದೀರ್ಘಕಾಲದಲ್ಲಿ ಹೃದಯಕ್ಕೆ ಹಾನಿ ಮಾಡುತ್ತದೆ' ಎಂದು ಹೇಳಲಾಗಿದೆ.

​ಹೃದಯದ ಆರೋಗ್ಯಕ್ಕಾಗಿ ಏನು ಮಾಡಬೇಕು?

  • ​ವಾರದ ಎಲ್ಲಾ ದಿನಗಳೂ ಒಂದೇ ನಿರ್ದಿಷ್ಟ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಿ.
  • ​ಕನಿಷ್ಠ 7 ರಿಂದ 8 ಗಂಟೆಗಳ ಗಾಢ ನಿದ್ರೆ ಪಡೆಯಿರಿ.
  • ಮಲಗುವ ಮುನ್ನ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ತಪ್ಪಿಸಲು ಮರೆಯಬೇಡಿ, (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.