- ಎಐ ಆನಿಮೇಷನ್ ವಿಡಿಯೋಗಳು ಮೆದುಳು ದುರ್ಬಲತೆಗೆ ಕಾರಣವಾಗುವ ಸಾಧ್ಯತೆ
- ಕ್ರಿಯೇಟಿವ್ ಎನಿಸಿದರೂ ನೋಡಿದ್ದೇ ನೋಡುವ ವಿಡಿಯೋಗಳು ಮೆದುಳಿಗೆ ಅಪಾಯಕಾರಿ
- ಮೊಬೈಲ್ ನೋಡುತ್ತಾ ಸಮಯ ವ್ಯರ್ಥ ಮಾಡುವುದುನ್ನು ತಪ್ಪಿಸೋದು ಹೇಗೆ?
AI Food Animation: ನಾನು ಗೋಬಿ ನನ್ನನ್ನು ತಿಂದರೆ, ನಿಮ್ಮ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ನಾನು ಪಾನಿಪುರಿ ಕರುಳಿಗೆ ತೊಂದರೆ ಕೊಡುತ್ತೇನೆ. ನಾನು ತುಳಸಿ ನನ್ನನ್ನು ನೀರಿನಲ್ಲಿ ಕುಡಿಯಿರಿ. ಹೀಗೆ ಇನ್ಸ್ಟಾಗ್ರಾಂನಲ್ಲಿ ಪಿಜ್ಜಾ, ತರಹೇವಾರಿ ತರಕಾರಿಗಳು, ಧಾನ್ಯಗಳು ತಮ್ಮ ಬಗ್ಗೆ ತಾವೇ ಉಪದೇಶ ಕೊಡುವ Food Animation ರೀಲ್ಸ್ಗಳು ಇತ್ತೀಚೆಗೆ ವೈರಲ್ ಆಗುತ್ತಿವೆ.
ಇಡ್ಲಿ ಮತ್ತು ಸಾಂಬಾರು, ರಾಜ್ಮಾ ಮತ್ತು ಚವಾಲ್, ಮಿರ್ಚಿ ಮತ್ತು ರಸ್ಮಲೈ ಪ್ರೇಮಕತೆಗಳು ಒಂದು ಕಡೆಯಾದರೆ, ಕೋರ್ಟ್ ಕಟೆಕಟೆಯಲ್ಲಿ ಕಡಲೆ ಬೀಜ ಹಾಗೂ ಬಾದಾಮಿ ನಿಂತಿರುವ ವಿಡಿಯೋಗಳು ಮತ್ತೊಂದು ಕಡೆ. ಇವುಗಳನ್ನು ನೋಡೋದು ಕಣ್ಣಿಗೆ, ಮನಸ್ಸಿಗೆ, ಮೆದುಳಿಗೆ ವ್ಯರ್ಥ ಎಂದು ಗೊತ್ತಿದ್ದರೂ ಸಹ ಎಂತ ಕ್ರಿಯೇಟಿವ್ ಜನ ಇದ್ದಾರಪ್ಪ..ಏನೆಲ್ಲ ಮಾಡ್ತಾರೆ ಎಂದು ನೋಡಿದ್ದನ್ನೇ ನೋಡುತ್ತಾ ದಿನವೆಲ್ಲ ಕಳೆದು ಬಿಡುತ್ತೇವೆ.
ಇಂತಹ ತರ್ಕ ಹೀನ ಕಾಂಟೆಂಟ್ಗಳು ಲಕ್ಷಾಂತರ ಜನರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಟ್ಟಿಹಾಕಿದೆ. ನೋಡಿದ್ದೆ ನೋಡುವ ರೀಲ್ಸ್ಗಳಿಂದ ಮೆದುಳಿನ ಕೊಳೆತ(brain rot) ಅಂದರೆ ನಿಮ್ಮ ಮೆದುಳು ದುರ್ಬಲವಾಗುವ ಸಾಧ್ಯತೆ ಇದೆ. ಇವು ವ್ಯರ್ಥವಾದದ್ದು ಎಂದು ಗೊತ್ತಿದ್ದರೂ ಜನ ಸ್ಕ್ರಾಲ್ ಮಾಡೋದ್ಯಾಕೆ? ಇದರಿಂದ ಕಳೆದುಕೊಂಡಿದ್ದೆಷ್ಟು? ಎಚ್ಚೆತ್ತು ಕೊಳ್ಳೋದಾದ್ರು ಹೇಗೆ?
ಸೋಂಬೇರಿ ಮಾಡುವ ಫುಡ್ ಆನಿಮೇಷನ್ ಮಾಯೆ?
ಎಐ ನಿಂದ ಕ್ರಿಯೇಟ್ ಮಾಡಿರುವ Food Animation ವಿಚಿತ್ರ ವಿಡಿಯೋಗಳು ನೋಡಲು ಕಣ್ಣಿಗೆ ಮನರಂಜಕ. ತಲೆಬುಡ ಇರದ ಈ ರೀಲ್ಸ್ನ್ನು ಕುತೂಹಲಕ್ಕಾಗಿ ಜನರು ನೋಡಿ ನೆಚ್ಚಿಕೊಳ್ಳುತ್ತಿದ್ದಾರೆ. ಒಂದು ವಿಡಿಯೋ ನೋಡಿದರೆ ಸಾಕು ಇನ್ಸ್ಟಾಗ್ರಾಮ್ ಅಲ್ಗಾರಿದಮ್ ಮತ್ತೆ ಮತ್ತೆ ಅಂತದ್ದೇ ನೂರಾರು ಕಾಂಟೆಂಟ್ ಕಣ್ಣಿಗೆ ಕಾಣುವಂತೆ ಮಾಡುತ್ತವೆ.
ಆನಿಮೇಷನ್ ವಿಡಿಯೋಗಳು ಎಷ್ಟು ಅಪಾಯಕಾರಿ?
ಬೇಸರವಾದಾಗ ಮನರಂಜನೆಗಾಗಿ ಮೊಬೈಲ್ ನೋಡ್ಬೇಕು ಅಥವಾ ಟಿವಿ ನೋಡ್ಬೇಕು ಅನ್ನೋದೇನೋ ಹೌದು. ಆದರೆ, ಆಹಾರದ ಬಗ್ಗೆ ಹಾಗೂ ಯಾವ ಡಿಟರ್ಜೆಂಟ್ ಬಳಸಿದರೆ ಬಟ್ಟೆ ಕ್ಲೀನ್ ಆಗುತ್ತದೆ. ತಲೆಗೆ-ಮುಖಕ್ಕೆ ಏನು ಹಚ್ಚಿಕೊಳ್ಳಬೇಕು ಎನ್ನುವ ಕಾಂಟೆಂಟ್ ಇರುವ ಎಐ ನಿರ್ಮಿತ ಆನಿಮೇಷನ್ ವಿಡಿಯೋಗಳು ಮನಸ್ಸಿಗೆ ಮನರಂಜನೆ ಕೊಡುವಂತದ್ದಲ್ಲ ಎನ್ನುತ್ತಾರೆ ತಜ್ಞ ವೈದ್ಯರು.
ತಜ್ಞರು ಹೇಳೋದೇನು?
ಇಂಡಿಯಾ ಟುಡೇ ವರದಿ ತಯಾರಿಸಿರುವ ಪ್ರಕಾರ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯ ಡಾ. ಅಸ್ತಿಕ್ ಜೋಶಿ ಅವರು ಹೇಳಿರುವುದು ಹೀಗೆ, ರೀಲ್ಸ್ ಮತ್ತು ಶಾರ್ಟ್ನಲ್ಲಿ ಬರುವ ಪುನರಾವರ್ತಿತ ವಿಡಿಯೋಗಳು ಮೆದುಳಿನಲ್ಲಿ 'ಡೋಪಮೈನ್' ಬಿಡುಗಡೆ ಮಾಡುತ್ತದೆ. ಇದು ವಿಡಿಯೋಗಳಿಗೆ ಅಡಿಕ್ಟ್ ಆಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಮನಸ್ಸು ಮತ್ತು ಮೆದುಳು ತೀರ ಆಯಾಸದಲ್ಲಿದ್ದಾಗ, ಅತಿ ಕಡಿಮೆ ಶ್ರಮ ಬೇಡುವ ಕ್ರಿಯೇಟಿವ್ ಕಂಟೆಂಟ್ಗಳನ್ನೇ ಬೇಡುತ್ತದೆ. ಹೀಗಾಗಿ ಅಡಿಕ್ಟ್ ಆಗುತ್ತಾರೆ. ಥಟ್ಟನೇ ಫೋನ್ ಬಳಕೆ ಇಳಿಕೆ ಮಾಡುವ ಬದಲಿಗೆ ಕ್ರಮೇಣವಾಗಿ ಕಡಿಮೆ ಮಾಡಿ ಎಂದು ಡಾ. ಶ್ರುತಿ ಶರ್ಮಾ ಅವರು ಹೇಳಿದ್ದಾರೆ.
ಆನಿಮೇಷನ್ ಕಂಟೆಂಟ್ ವಿಡಿಯೋಗಳು ಎಷ್ಟು ಅಪಾಯಕಾರಿ ಮಟ್ಟಕ್ಕೆ ಮೆದುಳನ್ನು ದೂಡುತ್ತದೆ ಎಂದರೆ ಫೋನ್ ಬಿಟ್ಟು ಇರಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಗೆ ತಳ್ಳುತ್ತದೆ. ಇದನ್ನು ನಡವಳಿಕೆಯ ವ್ಯಸನ (Behavioural Addiction) ಎಂದು ಕರೆಯುತ್ತಾರೆ. ಜೊತೆಗೆ, ವಿಡಿಯೋ ನೋಡುತ್ತಾ ಕುಳಿತರೆ ನಿದ್ರೆ, ಕೆಲಸ ಹಾಗೂ ಕೆಲವೊಮ್ಮೆ ಸಂಬಂಧವನ್ನೇ ಕಡಿದುಕೊಳ್ಳಲು ಇವು ನಾಂದಿಯಾಗಬಹುದು.
ಎಐನಿಂದ ಕ್ರಿಯೇಟ್ ಮಾಡುವ ಈ ಆನಿಮೇಷನ್ ವಿಡಿಯೋಗಳನ್ನು ನೋಡದಿರಲು ಏನು ಮಾಡ್ಬೇಕು ಎಂದು ಯೋಚಿಸುತ್ತಿದ್ದರೆ ಹೀಗೆ ಮಾಡಿ:
- ಇಷ್ಟೇ ಸಮಯ ಫೋನ್ ನೋಡಬೇಕು ಎನ್ನುವ ನಿಯಮವನ್ನು ನಿಮಗೆ ನೀವೆ ಕೊಟ್ಟುಕೊಳ್ಳಿ
- ನಿಮ್ಮ ಫೋನ್ಗೆ ಬರುವ ಸಂದೇಶಗಳ ನೋಟಿಫಿಕೇಶನ್ ಆಫ್ ಅಥವಾ ಸೈಲೆಂಟ್ ಮಾಡಿ
- ಹೆಚ್ಚಿನ ಸಮಯವನ್ನು ರೀಲ್ಸ್ ನೋಡುವುದರಲ್ಲೇ ಕಳೆಯುವ ಬದಲಿಗೆ ಪುಸ್ತಕ ಓದುವುದು, ವ್ಯಾಯಾಮಕ್ಕೆ ಮೀಸಲಿಡಿ, (ಏಜೆನ್ಸೀಸ್)