Pair Iron Rich Foods With This For Better Absorption
- ಕಬ್ಬಿಣಾಂಶವಿರುವ ಆಹಾರವನ್ನು ಯಾವುದರ ಜೊತೆ ತಿನ್ನುತ್ತೇವೆ ಎನ್ನುವುದು ಮುಖ್ಯ.
- ಪೌಷ್ಟಿಕತಜ್ಞೆ ಪಾಲಕ್ ನಾಗ್ಪಾಲ್ರಿಂದ ಪ್ರಯೋಜನಕಾರಿ ಮಾಹಿತಿ.
- ವಿಟಮಿನ್ ಸಿಯುಕ್ತ ಆಹಾರದೊಂದಿಗೆ ಕಬ್ಬಿಣಾಂಶವುಳ್ಳ ಆಹಾರ ಸೇವಿಸಿ.
Pair Iron Rich Foods With This For Better Absorption:
ಮನೆಯೂಟ ಸೇವನೆ ಮಾಡ್ತಿದ್ದೇವೆ ಎಂದ ಮಾತ್ರಕ್ಕೆ ಪೌಷ್ಠಿಕಾಂಶ ಆಹಾರವನ್ನೇ ನಮ್ಮೊಳಗೆ ಸೇರಿಸಿಕೊಳ್ಳುತ್ತಿದ್ದೇವೆ ಎನ್ನುವ ಅರ್ಥವಲ್ಲ. ನಮ್ಮ ತಟ್ಟೆಯಲ್ಲಿ ಫೈಬರ್, ಕಬ್ಬಿಣಾಂಶ, ವಿಟಮಿನ್ವುಕ್ತ ಆಹಾರಗಳು ಇರಬೇಕು ಎನ್ನುವುದು ಮುಖ್ಯವಾಗುತ್ತದೆ. ಜೊತೆಗೆ ಇವುಗಳನ್ನು ಸೇವಿಸುವಾಗ ಅವುಗಳೊಂದಿಗೆ ಯಾವ ಪದಾರ್ಥವಿರಬೇಕು ಎನ್ನುವುದು ಮುಖ್ಯವಾಗುತ್ತದೆ. ಆ ಬಗ್ಗೆ ಪೌಷ್ಟಿಕತಜ್ಞೆ ಪಾಲಕ್ ನಾಗ್‌ಪಾಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಬ್ಬಿಣಾಂಶದ ಆಹಾರವನ್ನು ದೇಹಕ್ಕೆ ಇಳಿಸಿಕೊಳ್ಳುವುದು ಒಂದು ಭಾಗವಷ್ಟೇ. ಸಸ್ಯ ಆಧಾರಿತ ಕಬ್ಬಿಣಾಂಶದ ಮೂಲಗಳನ್ನು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳೊಂದಿಗೆ ಜೋಡಿಸುವುದರಿಂದ ದೇಹವು ಹೆಚ್ಚಿನ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಮ್ಮ ಪೋಸ್ಟ್ನಲ್ಲಿ ಪಾಲಕ್ ನಾಗ್‌ಪಾಲ್ ತಿಳಿಸಿದ್ದಾರೆ.
ಯಾವುದರ ಜೊತೆಗೆ ಕಬ್ಬಿಣಾಂಶವುಳ್ಳ ಆಹಾರ ಸೇವಿಸಬೇಕು?
ಪಾಲಾಕ್ ಸೊಪ್ಪು ಮತ್ತು ದಾಲ್ ಮೇಲೆ ಸ್ವಲ್ಪ ನಿಂಬೆ ರಸವನ್ನು ಹಿಂಡಿಕೊಳ್ಳಬಹುದು.
ರಾಜ್ಮಾದಿಂದ ಯಾವುದಾದರೂ ಖಾದ್ಯ ತಯಾರಿ ಮಾಡಿಕೊಂಡು ಇದಕ್ಕೆ ಟೊಮೆಟೊಗಳನ್ನು ಸೇರಿಸಬಹುದು, ಬೇಕಿದ್ದರೆ ಸ್ವಲ್ಪ ನಿಂಬೆ ರಸವನ್ನೂ ಬಳಸಬಹುದು. ಕಡಳೆ ಕಾಳು ಅಥವಾ ಚನ್ನಾ ಕಾಳನ್ನು ನಿಂಬೆ ಅಥವಾ ನೆಲ್ಲಿಕಾಯಿ ಜೊತೆ ತಿನ್ನಬಹುದು. ಹೆಸರು ಬೇಳೆ ಇದನ್ನು ಟೊಮೆಟೊ ಅಥವಾ ಕ್ಯಾಪ್ಸಿಕಂ ಜೊತೆ ಸವಿಯಬಹುದು. ಸಜ್ಜೆ ರೊಟ್ಟಿಯನ್ನು ವಿಟಮಿನ್ ಸಿ ಸಮೃದ್ಧವಾಗಿರುವ ತರಕಾರಿ ಭಕ್ಷ್ಯದೊಂದಿಗೆ ಇದನ್ನು ಸೇವಿಸಲು ಪ್ರಯತ್ನಿಸಿ. ಮೊಳಕೆ ಕಾಳುಗಳನ್ನು ನೆನಸಿಟ್ಟು ತಿನ್ನುತ್ತಿದ್ದೀರಿ ಎಂದರೆ ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ತಿನ್ನುವುದು ಉತ್ತಮ.
ಈ ಜೋಡಿಗಳು ಹೇಗೆ ಕೆಲಸ ಮಾಡ್ತವೆ?
ವಿಟಮಿನ್ ಸಿ ನಾನ್ ಹೀಮ್ ಕಬ್ಬಿಣಾಂಶವನ್ನು ಕರುಳಿನಲ್ಲಿ ಸುಲಭವಾಗಿ ಹೀರಿಕೊಳ್ಳುವಂತೆ ಸಹಾಯ ಮಾಡುತ್ತದೆ. ಸಸ್ಯ ಆಧಾರಿತ ಆಹಾರಗಳಿಂದ ಕಬ್ಬಿಣಾಂಶವು ದೊರೆತಾಗ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಆದ್ದರಿಂದ 'ನಾನು ಸಾಕಷ್ಟು ಕಬ್ಬಿಣಾಂಶವನ್ನು ತಿನ್ನುತ್ತಿದ್ದೇನೆಯೇ?' ಎಂದು ಯೋಚಿಸುವ ಬದಲು, 'ನನ್ನ ಕಬ್ಬಿಣಾಂಶದ ಆಹಾರದ ಜೊತೆಗೆ ನಾನು ಏನು ತಿನ್ನುತ್ತಿದ್ದೇನೆ?' ಎಂದು ಯೋಚಿಸಿ" ಎಂದು ಪೌಷ್ಟಿಕತಜ್ಞೆ ವಿವರಿಸಿದ್ದಾರೆ. ಇದು ಕಬ್ಬಿಣಾಂಶದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ವಿನಃ, ಅಧಿಕ ಕೊರತೆ ಇದ್ದರೆ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ.
ಆಹಾರದಿಂದ ಹೆಚ್ಚಿನ ಕಬ್ಬಿಣಾಂಶವನ್ನು ಪಡೆಯಲು ಹೆಲ್ತ್‌ಲೈನ್ ಕೆಲವು ಸರಳ ಮಾರ್ಗಗಳನ್ನು ಸೂಚಿಸುತ್ತದೆ. ತೆಳು ಕೆಂಪು ಮಾಂಸವು ಹೀಮ್ ಕಬ್ಬಿಣದ ಉತ್ತಮ ಮೂಲವಾಗಿದೆ, ಇದನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ.
- ಕೋಳಿ ಮತ್ತು ಮೀನು ಸಹ ಈ ರೀತಿಯ ಕಬ್ಬಿಣಾಂಶವನ್ನು ಒದಗಿಸುತ್ತವೆ.
- ಸಸ್ಯ ಆಧಾರಿತ ಆಹಾರಗಳಿಗಾಗಿ, ಊಟದಲ್ಲಿ ವಿಟಮಿನ್ ಸಿ ಸೇರಿಸುವುದರಿಂದ ದೇಹವು ಹೆಚ್ಚು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಎಲೆಗಳ ತರಕಾರಿಗಳಿಗೆ ನಿಂಬೆ ರಸವನ್ನು ಸೇರಿಸುವುದು ಪ್ರಯೋಜನಕಾರಿ. ಆದರೆ, ಅಧಿಕ ಕಬ್ಬಿಣಾಂಶವಿರುವ ಊಟದೊಂದಿಗೆ ಚಹಾ, ಕಾಫಿ ಅಥವಾ ಹಾಲನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಅವು ದೇಹವು ಹೀರಬಹುದಾದ ಕಬ್ಬಿಣಾಂಶದ ಪ್ರಮಾಣವನ್ನು ಕಡಿಮೆ ಮಾಡಬಹುದು, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.