- 40 ವರ್ಷಗಳ ನಂತರ, ಪುರುಷರ ದೇಹವು ಹಲವಾರು ಜೈವಿಕ ಬದಲಾವಣೆಗಳಿಗೆ ಒಳಗಾಗುತ್ತದೆ.
- ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಮಟ್ಟವು ಪ್ರತಿ ವರ್ಷಕ್ಕೆ ಸುಮಾರು 1 ಪ್ರತಿಶತದಷ್ಟು ಕಡಿಮೆಯಾಗಲು ಪ್ರಾರಂಭಿಸುತ್ತದೆ
- ಚಯಾಪಚಯ ಕ್ರಿಯೆ, ಸ್ನಾಯುವಿನ ಶಕ್ತಿ, ಲೈಂಗಿಕ ಸಾಮರ್ಥ್ಯ ಮತ್ತು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
- 40 ರ ನಂತರ ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಮತ್ತು ವ್ಯಾಯಾಮ ಬಹಳ ಮುಖ್ಯ
Mens Health: 40 ವರ್ಷಗಳ ನಂತರ, ಪುರುಷರ ದೇಹವು ಹಲವಾರು ಜೈವಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ವೈದ್ಯರ ಪ್ರಕಾರ, ಈ ವಯಸ್ಸಿನ ನಂತರ, ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಮಟ್ಟವು ಪ್ರತಿ ವರ್ಷಕ್ಕೆ ಸುಮಾರು 1 ಪ್ರತಿಶತದಷ್ಟು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆ, ಸ್ನಾಯುವಿನ ಶಕ್ತಿ, ಲೈಂಗಿಕ ಸಾಮರ್ಥ್ಯ ಮತ್ತು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ 40 ರ ನಂತರ ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಮತ್ತು ವ್ಯಾಯಾಮ ಬಹಳ ಮುಖ್ಯ ತಿಳಿಸುತ್ತಾರೆ.
ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದಾಗ ಏನಾಗುತ್ತದೆ?
40 ವರ್ಷದ ನಂತರ ಕಡಿಮೆಯಾಗುವ ಟೆಸ್ಟೋಸ್ಟೆರಾನ್ನ್ನು ಕೆಲವೊಮ್ಮೆ ಆಂಡ್ರೋಪಾಸ್ ಎಂದು ಕರೆಯಲಾಗುತ್ತದೆ. ಇದು ಲೈಂಗಿಕ ಬಯಕೆ ಕಡಿಮೆಯಾಗುವುದು, ಅತಿಯಾದ ಆಯಾಸ, ಖಿನ್ನತೆಯಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ.
ತೂಕ ಹೆಚ್ಚಾಗುವುದು ಮತ್ತು ಸ್ನಾಯುಗಳ ನಷ್ಟ
ಪುರುಷರಲ್ಲಿ ವಯಸ್ಸಾದಂತೆ, ನಮ್ಮ ಚಯಾಪಚಯ ದರವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಈ ವೇಳೆ ಮೊದಲಿನಂತೆ ಆಹಾರಗಳನ್ನು ಸೇವಿಸಿದರೂ ಕೂಡಾ ಹೊಟ್ಟೆಯ ಸುತ್ತ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮತ್ತು ಸ್ನಾಯುಗಳ ದ್ರವ್ಯರಾಶು ಕಡಿಮೆಯಾಗಿ, ಮೂಳೆಗಳು ದುರ್ಬಲಗೊಳ್ಳುತ್ತವೆ.
ಹೃದಯ ಕಾಯಿಲೆ ಮತ್ತು ಮಧುಮೇಹ ಅಪಾಯ
40 ರ ನಂತರ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳನ್ನು ನೀವೇನಾದರೂ ನಿಯಂತ್ರಿಸದಿದ್ದರೆ, ಹೃದಯಾಘಾತ ಅಥವಾ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರ ಜೊತೆಗೆ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗಳು, ಮೂತ್ರದಲ್ಲಿ ಸೋಂಕು, ಕ್ಯಾನ್ಸರ್‌ನಂತಹ ಅಪಾಯ ಹೆಚ್ಚಾಗುತ್ತದೆ.
40 ವರ್ಷಗಳ ನಂತರ ದಾಟಿದ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕೊಲೊನ್ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯರು ತಿಳಿಸುತ್ತಾರೆ.
40 ದಾಟಿದ ನಂತರ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ!
1. ನಿಯಮಿತ ವ್ಯಾಯಾಮ
ಪ್ರತಿದಿನ 30 ನಿಮಿಷಗಳ ಕಾಲ ನಡೆಯುವುದು, ಓಡುವುದು, ಸೈಕ್ಲಿಂಗ್ ಅಥವಾ ಭಾರ ಎತ್ತುವಂತಹ ವ್ಯಾಯಾಮಗಳನ್ನು ಮಾಡುವುದರಿಂದ ಇದು ಸ್ನಾಯುಗಳು ಮತ್ತು ಮೂಳೆಗಳನ್ನು ಬಲವಾಗಿರಿಸುತ್ತದೆ. ಜೊತೆಗೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. ಸಮತೋಲಿತ ಆಹಾರ
ಪ್ರತಿನಿತ್ಯ ಕೊಬ್ಬು, ಸಕ್ಕರೆ ಅಧಿಕವಾಗಿರುವ ಆಹಾರಗಳ ಸೇವನೆಯನ್ನು ತಪ್ಪಿಸಿರಿ. ಬದಲಿಗೆ ಹಣ್ಣುಗಳು, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಮೀನು, ಮೊಟ್ಟೆಗಳು ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇವು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
3. ಆರೋಗ್ಯ ತಪಾಸಣೆ
ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್, ಯಕೃತ್ತಿನ ಕಾರ್ಯ ಮತ್ತು ಪ್ರಾಸ್ಟೇಟ್ ತಪಾಸಣೆಗಳನ್ನು ವರ್ಷಕ್ಕೊಮ್ಮೆ ಮಾಡಿಕೊಳ್ಳುವುದರಿಂದ ಮುಂದೆ ಆಗುವಂತಹ ಸಮಸ್ಯೆಗಳನ್ನು ತಡೆಯಬಹುದು.
4. ಧೂಮಪಾನ ಮತ್ತು ಮದ್ಯಪಾನವನ್ನು ಬಿಟ್ಟುಬಿಡಿ
ಧೂಮಪಾನವು ಹೃದಯ ಕಾಯಿಲೆ, ಅಸ್ತಮದಂತಹ ಕಾಯಿಲೆ ಅಪಾಯವನ್ನು ಹೆಚ್ಚಿಸಬಹುದು. ಆದರಿಂದ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಬಿಡುವುದರಿಂದ ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಬಹುದು.
5. ಸಾಕಷ್ಟು ನಿದ್ರೆ ಮತ್ತು ಮಾನಸಿಕ ಆರೋಗ್ಯ ರಕ್ಷಣೆ
ಪ್ರತಿಯೊಬ್ಬ ಮನುಷ್ಯನು ದಿನಕ್ಕೆ 7-8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ದೀರ್ಘಕಾಲ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.