Oral Cancer ಸಾಂದರ್ಭಿಕ ಚಿತ್ರ 
ಆರೋಗ್ಯ

ವಿಶ್ವದ ಹತ್ತಾರು ರಾಷ್ಟ್ರಗಳಿಗಿಂತ ಭಾರತದಲ್ಲೇ ಹೆಚ್ಚು: ಪುರುಷರಲ್ಲಿ ಬಾಯಿಯ ಕ್ಯಾನ್ಸರ್ ಹೆಚ್ಚುತ್ತಿರುವುದರ ಹಿಂದಿನ ರಹಸ್ಯವೇನು? Oral Cancer

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆಗಳು ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚಾಗುತ್ತಲೇ ಇವೆ
  • 1990 ಮತ್ತು 2019 ರ ನಡುವೆ ಭಾರತದಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು ಶೇಕಡಾ 21 ರಷ್ಟು ಇಳಿಕೆ
  • ಇದೇ ಅವಧಿಯಲ್ಲಿ ಈ ಕ್ಯಾನ್ಸರ್‌ನಿಂದ ಉಂಟಾಗುವ ಮರಣದ ಪ್ರಮಾಣದಲ್ಲಿ ಶೇಕಡಾ 32 ರಷ್ಟು ಇಳಿಕೆ
Oral Cancerಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆಗಳು ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚಾಗುತ್ತಲೇ ಇವೆ. ಐಸಿಎಂಆರ್​ ಮತ್ತು ಗ್ಲೋಬೊಕ್​ನಂತಹ ಅಂತರರಾಷ್ಟ್ರೀಯ ದತ್ತಾಂಶಗಳ ಪ್ರಕಾರ, 1990 ಮತ್ತು 2019 ರ ನಡುವೆ ಭಾರತದಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು ಶೇಕಡಾ 21 ರಷ್ಟು ಇಳಿಕೆ ಕಂಡುಬಂದಿದೆ. ಇದೇ ಅವಧಿಯಲ್ಲಿ ಈ ಕ್ಯಾನ್ಸರ್‌ನಿಂದ ಉಂಟಾಗುವ ಮರಣದ ಪ್ರಮಾಣದಲ್ಲಿ ಶೇಕಡಾ 32 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿವೆ.
ಆದಾಗ್ಯೂ, ಅರ್ಜೆಂಟೀನಾ, ಚೀನಾ, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಟರ್ಕಿ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಿಗೆ ಹೋಲಿಸಿದರೆ ಭಾರತದಲ್ಲಿ ಪುರುಷರಲ್ಲಿ ಬಾಯಿಯ ಕ್ಯಾನ್ಸರ್ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ವರದಿಯ ಪ್ರಕಾರ, 1998–2017ರ ನಡುವೆ ಪುರುಷರಲ್ಲಿ ಬಾಯಿಯ ಕ್ಯಾನ್ಸರ್​ ಪ್ರಮಾಣವು ಪ್ರತಿ ವರ್ಷ ಸುಮಾರು ಶೇ. 1.20 ರಷ್ಟು ಹೆಚ್ಚುತ್ತಿದ್ದು, ಇದು ಮೊದಲಿಗಿಂತ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಂಡುಬಂದಿದೆ. 

ಅಂಕಿಅಂಶಗಳು ಏನು ಹೇಳುತ್ತವೆ?

ಜರ್ನಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಪುರಷರಲ್ಲಿ ಸ್ತನ ಕ್ಯಾನ್ಸರ್​ ಮತ್ತು ಬಾಯಿಯ ಕ್ಯಾನ್ಸರ್​ ಸ್ಥಿರವಾಗಿ ಹೆಚ್ಚುತ್ತಿದೆ. ಆದರೆ, ಶ್ರೀಮಂತ ದೇಶಗಳಲ್ಲಿ ಬಾಯಿಯ ಕ್ಯಾನ್ಸರ್​ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದೆ. 
ವಯೋಮಾನದ ನಿರ್ದಿಷ್ಟ ದತ್ತಾಂಶವು ಭಾರತದಲ್ಲಿ 40 ವರ್ಷ ವಯಸ್ಸಿನವರೆಗಿನ ಪುರುಷರು ಮತ್ತು ಮಹಿಳೆಯರಲ್ಲಿ ಬಾಯಿಯ ಕ್ಯಾನ್ಸರ್ ಪ್ರಮಾಣವು ಸರಿಸುಮಾರು ಒಂದೇ ಆಗಿರುತ್ತದೆ ಎಂದು ತೋರಿಸುತ್ತದೆ. ಆದಾಗ್ಯೂ, 40 ವರ್ಷದ ನಂತರ ಪುರುಷರಲ್ಲಿ ಈ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. 
ಇತರ ಸಂಶೋಧನೆಗಳು ಭಾರತದಲ್ಲಿ ಬಾಯಿಯ ಕ್ಯಾನ್ಸರ್‌ನ ಸರಾಸರಿ ಸಂಭವವು 100,000 ಕ್ಕೆ ಸುಮಾರು 10.4 ಪ್ರಕರಣಗಳು ಎಂದು ಸೂಚಿಸುತ್ತದೆ. ಆದರೆ, ಈ ಪ್ರಮಾಣವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿದೆ. ಈ ಪ್ರಮಾಣವು ವಿಶೇಷವಾಗಿ ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಸಾಮಾನ್ಯವಾಗಿದೆ.
2024 ರಲ್ಲಿ ಭಾರತದಲ್ಲಿ 1.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 8,74,404 ಸಾವುಗಳು ದಾಖಲಾಗಿವೆ. ಆದಾಗ್ಯೂ, ಈ ಪ್ರವೃತ್ತಿಗಳು ಮುಂದುವರೆದರೆ, 2045 ರ ವೇಳೆಗೆ ಸುಮಾರು 2.46 ಮಿಲಿಯನ್​​ಗೆ​​ ತಲುಪುವ ನಿರೀಕ್ಷೆ ಇದೆ. 2024 ರಲ್ಲಿ ಪುರುಷರಲ್ಲಿ ಮಾತ್ರ 1,13,000 ಕ್ಕೂ ಹೆಚ್ಚು ಹೊಸ ಬಾಯಿಯ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿದೆ. 2022 ರಲ್ಲಿ  ಜಾಗತಿಕವಾಗಿ ಸುಮಾರು 20 ಮಿಲಿಯನ್ ಕ್ಯಾನ್ಸರ್ ಪ್ರಕರಣಗಳು ಮತ್ತು 9.7 ಮಿಲಿಯನ್ ಸಾವುಗಳು ದಾಖಲಾಗಿವೆ. 

ಪ್ರಮುಖ ಅಪಾಯಕಾರಿ ಅಂಶಗಳು ಯಾವುವು?

ಬಾಯಿಯ ಕ್ಯಾನ್ಸರ್‌ಗೆ ತಂಬಾಕು ಅತಿ ದೊಡ್ಡ ಕಾರಣವಾಗಿದೆ. ಅದರ ಜೊತೆಗೆ ಸಿಗರೇಟ್, ಬೀಡಿ, ಗುಟ್ಕಾ ಸೇರಿವೆ. ಕೆಲವು ಸಂದರ್ಭಗಳಲ್ಲಿ, HPV ವೈರಸ್ ಕೂಡ ಅಪಾಯವನ್ನು ಹೆಚ್ಚಿಸುತ್ತಿದ್ದು, ಸ್ಕ್ವಾಮಸ್​  ಸೆಲ್ ಕಾರ್ಸಿನೋಮವು ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಬಾಯಿಯ ಕ್ಯಾನ್ಸರ್ ಆಗಿದ್ದು, ಎಲ್ಲಾ ಪ್ರಕರಣಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಇದೆ ಎಂದು ಸಂಶೋಧನೆ ತೋರಿಸುತ್ತದೆ.
ಭಾರತೀಯ ಪುರುಷರಲ್ಲಿ, ಬಾಯಿಯ ಕ್ಯಾನ್ಸರ್ ಗಂಭೀರ ಮತ್ತು ನಿರಂತರ ಆರೋಗ್ಯ ಸಮಸ್ಯೆಯಾಗಿದ್ದು, ಇದು ನಿರಂತರವಾಗಿ ಸೇವಿಸುವ ತಂಬಾಕು ಬಳಕೆಯೇ ಇದಕ್ಕೆ ಕಾರಣ ಎಂದು ಡಾ. ಪ್ರಶಾಂತ್ ಮಾಥುರ್ ತಿಳಿಸಿದ್ದಾರೆ. ಆದಾಗ್ಯೂ, ಬಾಲ್ಯದಿಂದಲೇ ಗುಟ್ಕಾ, ಪಾನ್, ಖೈನಿ, ಮದ್ಯಪಾನ ಮತ್ತು ವೀಳ್ಯದೆಲೆ ಅಗಿಯುವಂತಹ ಹೊಗೆರಹಿತ ತಂಬಾಕು ಸೇವನೆಯು ಈ ರೀತಿಯ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. 

ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಬಾಯಿಯ ಕ್ಯಾನ್ಸರ್ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ತಂಬಾಕು ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಎಂದು ವೈದ್ಯರು ಸೂಚಿಸುತ್ತಾರೆ. ಇದರ ಜೊತೆಗೆ ನಿಯಮಿತವಾಗಿ ಮೌಖಿಕ ಪರೀಕ್ಷೆಗಳನ್ನು ಮಾಡಿಕೊಳ್ಳುವುದು, ಬಿರುಕುಗಳು, ಹುಣ್ಣುಗಳು ಮತ್ತು ಕಲೆಗಳನ್ನು ನಿರ್ಲಕ್ಷಿಸದಿರುವುದು ಮತ್ತು ಸಮಯಕ್ಕೆ ಸರಿಯಾಗಿ ದಂತವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯವಾಗಿರುತ್ತದೆ (ಏಜೆನ್ಸೀಸ್​). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.