ಸಾಂದರ್ಭಿಕ ಚಿತ್ರ 
ಆರೋಗ್ಯ

ಚಳಿಗಾಲದಲ್ಲಿ ಶಿಶುಗಳಿಗೆ ಎಣ್ಣೆ ಮಸಾಜ್ ಮಾಡುವಾಗ ಹುಷಾರ್! ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.. Baby bathing

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.
  • ಮಕ್ಕಳ ಚರ್ಮ ಒಣಗುತ್ತದೆ, ಬಿರುಕು ಮೂಡುತ್ತದೆ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ.
  • ಚಳಿಗಾಲದಲ್ಲಿ ನವಜಾತ ಶಿಶುಗಳ ಚರ್ಮದ ಬಗ್ಗೆ ಹೆಚ್ಚಾಗಿ ಆರೈಕೆ ಮಾಡುವುದು ಮುಖ್ಯ
  • , ಸಾಮಾನ್ಯವಾಗಿ ಮಕ್ಕಳಿಗೆ ಪ್ರತಿದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ.
Baby bathing: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಪೋಷಕರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಮಕ್ಕಳ ಚರ್ಮ ಒಣಗುತ್ತದೆ, ಬಿರುಕು ಮೂಡುತ್ತದೆ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ವಾಸ್ತವವಾಗಿ ಚಳಿಗಾಲದಲ್ಲಿ ನವಜಾತ ಶಿಶುಗಳ ಚರ್ಮದ ಬಗ್ಗೆ ಹೆಚ್ಚಾಗಿ ಆರೈಕೆ ಮಾಡುವುದು ಮುಖ್ಯವಾಗಿರುತ್ತದೆ. ತಂಪಾದ ಗಾಳಿ, ತಂಪಾದ ನೆಲ ಮತ್ತು ಸೀಮಿತ ಸೂರ್ಯನ ಬೆಳಕು ಮಕ್ಕಳನ್ನು ಶೀತ ಮತ್ತು ಜ್ವರಕ್ಕೆ ಒಳಗಾಗುವಂತೆ ಮಾಡುತ್ತದೆ. ಆದರಿಂದ ಕಾಳಜಿ ವಹಿಸುವುದು ಮುಖ್ಯವಾಗಿರುತ್ತದೆ.
ಈ ರೀತಿಯ ಪರಿಸ್ಥಿತಿ ಎದುರಾದಾಗ, ಸಾಮಾನ್ಯವಾಗಿ ಮಕ್ಕಳಿಗೆ ಪ್ರತಿದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಆದರೆ, ನವಜಾತು ಶಿಶುಗಳಿಗೆ ಎಣ್ಣೆ ಹಚ್ಚುವುದರಿಂದ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ಸರಿಯಾದ ಎಣ್ಣೆ, ತಾಪಮಾನ ಮತ್ತು ಸಮಯವನ್ನು ಪರಿಗಣಿಸಿದಾಗ ಮಾತ್ರ ಮಗು ಮಸಾಜ್‌ನ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ನಾವಿಂದು ಮಗುವಿಗೆ ಹೇಗೆ ಮಸಾಜ್​ ಮಾಡಬೇಕು ಎಂದು ತಿಳಿಸಿಕೊಡಲಿದ್ದೇವೆ.

ಮಗುವಿನ ವಯಸ್ಸಿಗೆ ಅನುಗುಣವಾಗಿ ಸರಿಯಾದ ಎಣ್ಣೆಯನ್ನು ಆರಿಸಿಕೊಳ್ಳಿ!

ಮಾನವನ ದೇಹದ ಚರ್ಮವು ಎಲ್ಲರಲ್ಲೂ ಒಂದೇ ಪ್ರಕಾರದಂತೆ ಇರುವುದಿಲ್ಲ. ನವಜಾತು ಶಿಶುಗಳಲ್ಲಿ ಒಂದು ರೀತಿಯಲ್ಲಿದ್ದರೆ, ವಯಸ್ಕರಲ್ಲಿ ಚರ್ಮವು ಒಂದು ರೀತಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ನವಜಾತು ಶಿಶುಗಳ ಚರ್ಮವು ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನುಅವರಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಚರ್ಮಕ್ಕೆ ಹಚ್ಚಿ ಮಸಾಜ್​ ಮಾಡುವುದರಿಂದ ಇದು ಬೇಗನೆ ಹೀರಲ್ಪಡುತ್ತದೆ.
ಆದಾಗ್ಯೂ, ಮಗು 2 ವಯಸ್ಸಿನ ಮೇಲಿದ್ದರೆ, ಅದಕ್ಕೆ ಸಾಸಿವೆ ಎಣ್ಣೆಯನ್ನು ಸಹ ಬಳಸಬಹುದು. ಸಾಸಿವೆ ಎಣ್ಣೆ ಬಳಸುವುದರಿಂದ ಇದು ದೇಹವನ್ನು ಬೆಚ್ಚಗಿಡುತ್ತದೆ. ಇದನ್ನು ಸ್ವಲ್ಪ ಬಿಸಿ ಮಾಡಿ ಬೆಚ್ಚಗಾದ ನಂತರ ನಿಮ್ಮ ಮಗುವಿನ ಚರ್ಮಕ್ಕೆ ಹಚ್ಚಿ ಮಸಾಜ್​ ಮಾಡಿ.

ನೀವು ತಣ್ಣನೆಯ ಎಣ್ಣೆಯನ್ನು ಏಕೆ ಹಚ್ಚಬಾರದು?

ಅನೇಕ ಜನರು ತಮ್ಮ ಮಗುವಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ಎಣ್ಣೆಯನ್ನು ತಂದು ನೇರವಾಗಿ ಹಚ್ಚಲು ಪ್ರಾರಂಭಿಸುತ್ತಾರೆ. ಈ ರೀತಿಯಾಗಿ ತಣ್ಣಗಿರುವ ಎಣ್ಣೆಯನ್ನು ತಂದು ಹಚ್ಚುವುದರಿಂದ ಮಗುವಿಗೆ ಶೀತ ಬಂದು ಅನಾನುಕೂಲವಾಗಬಹುದು. ಆದ್ದರಿಂದ, ನಿಮ್ಮ ಮಗುವಿಗೆ ಮಸಾಜ್ ಮಾಡುವ ಮೊದಲು ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸುವುದನ್ನು ಮರೆಯಬೇಡಿ.

ಮಸಾಜ್ ಮಾಡಲು ಉತ್ತಮ ಸಮಯ ಯಾವುದು?

ಬೆಳಿಗ್ಗೆ ಮಸಾಜ್ ಮಾಡಲು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಸಮಯದಲ್ಲಿ ಶಿಶುಗಳ ದೇಹವು ಹೆಚ್ಚು ಉಲ್ಲಾಸ ಮತ್ತು ವಿಶ್ರಾಂತಿಯನ್ನು ಪಡೆಯಲು ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನ ಮಸಾಜ್​ ಮಾಡುವುದರಿಂದ ಸೂರ್ಯನು ದೇಹಕ್ಕೆ ಸೌಮ್ಯವಾದ ಉಷ್ಣತೆಯನ್ನು ನೀಡುತ್ತಾನೆ. ಇದು ಮಗುವಿಗೆ ಶೀತ ಬರದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.
ಬೆಳಿಗ್ಗೆ ಸ್ನಾನ ಮಾಡುವ ಮೊದಲು ನಿಮ್ಮ ಮಗುವಿಗೆ ಮಸಾಜ್ ಮಾಡುವುದರಿಂದ ಇದು ಮಕ್ಕಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಹಾಗೆಯೇ ಮಗುವಿನ ಇಡೀ ದೇಹವು ವಿಶ್ರಾಂತಿಯನ್ನು ಪಡೆಯುತ್ತದೆ. ಎಣ್ಣೆ ಹಚ್ಚಿ ಮಸಾಜ್​ ಮಾಡುವುದರಿಂದ ರಕ್ತದ ಹರಿವು ಸುಧಾರಿಸುವುದರಿಂದ ಮಗುವಿನ ಆರೋಗ್ಯವು ಚೆನ್ನಾಗಿದ್ದು, ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೆಳಗ್ಗೆ ನಿಮ್ಮ ಮಗುವಿಗೆ ಮಸಾಜ್ ಮಾಡುವುದರಿಂದ ಇದು ಚನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಮಗು ಚೆನ್ನಾಗಿ ನಿದ್ರೆ ಮಾಡಿದರೆ, ಅದು ಎಚ್ಚರವಾದಾಗ ದಿನವನ್ನು ಸಂತೋಷದಿಂದ ಕಳೆಯುತ್ತದೆ. ಇಲ್ಲದಿದ್ದರೆ, ಕಿರಿಕಿರಿ ಮಾಡಲು ಪ್ರಾರಂಭಿಸುತ್ತದೆ.

ಮಸಾಜ್ ನಂತರ ಮಗುವನ್ನು ಶೀತದಿಂದ ರಕ್ಷಿಸುವುದು ಹೇಗೆ?

ಮಸಾಜ್ ನಂತರ ಮಕ್ಕಳ ಚರ್ಮವು ತೆರೆದಿರುತ್ತದೆ. ಆದರಿಂದ ಅವುಗಳನ್ನು ರಕ್ಷಿಸುವುದು ಬಹಳ ಮುಖ್ಯವಾಗಿರುತ್ತದೆ. ಮಸಾಜ್​ ಮಾಡಿ ಸ್ನಾನ ಮಾಡಿಸಿದ ನಂತರ ನಿಮ್ಮ ಮಗುವಿಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ನಿಮ್ಮ ಮಗುವಿನ ಚರ್ಮಕ್ಕೆ ಎಣ್ಣೆ ಹಚ್ಚಿ 15-20 ನಿಮಿಷಗಳ ಕಾಲ ಬಿಡುವುದರಿಂದ ಇದು ಸಂಪೂರ್ಣವಾಗಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದು ಮಗುವನ್ನು ಶೀತದಿಂದ ರಕ್ಷಿಸುತ್ತದೆ.

ಮಸಾಜ್ ನಿಮ್ಮ ಮಗುವನ್ನು ಆರೋಗ್ಯವಾಗಿಡುತ್ತದೆಯೇ?

ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಸರಿಯಾದ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ಮಗುವಿನ ಆರೋಗ್ಯವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ಇದು ದೇಹವನ್ನು ಬಲಪಡಿಸುವುದಲ್ಲದೇ, ನಿದ್ರೆ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.