ನಗರದ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಪ್ರೇರಿತ್ ರಾವ್ ಸಲಹೆ
ಬೆಂಗಳೂರಿನಲ್ಲಿ ಬೇಸಿಗೆ ಉಷ್ಣತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಹೈಡ್ರೇಷನ್ ಸಮಸ್ಯೆಗಳು ಹೆಚ್ಚುತ್ತಿವೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಕೇವಲ ದೌರ್ಬಲ್ಯ ಅಥವಾ ತಲೆನೋವು ಮಾತ್ರವಲ್ಲದೆ ಕಂಠ ಮತ್ತು ಧ್ವನಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮೆಡಿಕವರ್ ಆಸ್ಪತ್ರೆಯ ಕನ್ಸಲ್ಟಂಟ್ ಸರ್ಜನ್ ಡಾ. ಪ್ರೇರಿತ್ ರಾವ್ ತಿಳಿಸಿದ್ದಾರೆ.
ನಗರದ ಮೆಡಿಕವರ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಡಿಹೈಡ್ರೇಷನ್ ಸಂಬಂಧಿತ ಸಮಸ್ಯೆಗಳಿಗಾಗಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಉಷ್ಣತೆಯ ಅವಧಿಯಲ್ಲಿ ಓಆರ್‌ಎಸ್ ಬಳಕೆ ಶೇ. 60% ರಷ್ಟು ಹೆಚ್ಚಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಅದೇ ರೀತಿ, ಬಿಸಿಲಿನ ಸಮಯದಲ್ಲಿ ಡಿಹೈಡ್ರೇಷನ್, ಜ್ವರ ಮತ್ತು ದೌರ್ಬಲ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ 20% ಹೇರಿಕೆಯಾಗಿದೆ ಎಂದು ಹೇಳಿದರು.
ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಕಂಠ ಒಣಗುತ್ತದೆ ಮತ್ತು ವೋಕಲ್ ಕಾರ್ಡ್‌ಗಳಿಗೆ ಅಗತ್ಯವಾದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಧ್ವನಿ ಗರಗರಿಸುವುದು, ಗಂಟಲು ಉರಿ ಮತ್ತು ಮಾತನಾಡುವಾಗ ದಣಿವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ ಅವರು ಡಿಹೈಡ್ರೇಷನ್‌ನಿಂದ ಗಂಟಲು ಒಣಗುವುದು, ಪದೇಪದೇ ಗಂಟಲು ಸ್ವಚ್ಛಗೊಳಿಸುವ ಅಭ್ಯಾಸ, ಧ್ವನಿ ಕಡಿಮೆಯಾಗುವುದು ಮತ್ತು ನೋವು ಕಾಣಿಸಬಹುದು. ಇದು ಮುಂದುವರಿದರೆ ವೋಕಲ್ ಕಾರ್ಡ್ ಉರಿಯೂತಕ್ಕೂ ಕಾರಣವಾಗಬಹುದು. ಶಿಕ್ಷಕರು, ಗಾಯಕರು, ಕಾಲ್ ಸೆಂಟರ್ ಉದ್ಯೋಗಿಗಳು ಮತ್ತು ಹೆಚ್ಚು ಮಾತನಾಡುವವರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಮಕ್ಕಳು ಮತ್ತು ವೃದ್ಧರು ಕೂಡ ಬೇಗನೆ ಡಿಹೈಡ್ರೇಷನ್‌ಗೆ ಒಳಗಾಗುತ್ತಾರೆ ಎಂದು ವಿವರಿಸಿದರು.
ಹೆಚ್ಚಿನ ಸಮಯ ಹವಾ ನಿಯಂತ್ರಣ ಕೊಠಡಿಯಲ್ಲಿ ಇರುವವರಲ್ಲಿ ಗಂಟಲು ಒಣಗುವ ಸಮಸ್ಯೆ ಹೆಚ್ಚಾಗುತ್ತದೆ. ಎಸಿ ತೇವಾಂಶವನ್ನು ಕಡಿಮೆ ಮಾಡುತ್ತಿದ್ದು, ಕಂಠವನ್ನು ಇನ್ನಷ್ಟು ಒಣಗಿಸುತ್ತದೆ. ಇದನ್ನು ತಪ್ಪಿಸಲು ದಿನಕ್ಕೆ ಕನಿಷ್ಠ 2.53 ಲೀಟರ್ ನೀರು ಕುಡಿಯಬೇಕು. ಹೆಚ್ಚು ಬೆವರುತ್ತಿದ್ದರೆ ಓಆರ್‌ಎ ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸಬೇಕು. ಕಾಫಿ, ಟೀ ಮತ್ತು ತಂಪು ಪಾನೀಯ ಬಳಕೆ ಮಾಡಬಾರದು.ಎಸಿ ಕೊಠಡಿಯಲ್ಲಿ ತೇವಾಂಶ ಕಾಪಾಡಲು ನೀರಿನ ಪಾತ್ರೆ ಇಡುವುದು ಸಹಾಯಕ. ನೀರಿನಾಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸುವುದು ಮತ್ತು ಧ್ವನಿಗೆ ವಿಶ್ರಾಂತಿ ನೀಡುವುದು ಮುಖ್ಯ ಎಂದರು.