ಮನುಷ್ಯನಿಗೆ ಕೆಲವೊಮ್ಮೆ ಮಾನಸಿಕ ಒತ್ತಡಗಳು ಎದುರಾಗು ವುದು ಸಹಜ. ಅದನ್ನು ಕೆಲವರು ಸಮರ್ಥವಾಗಿ ಎದುರಿಸುತ್ತಾರೆ. ಇನ್ನು ಹಲವರು ಎಡವುತ್ತಾರೆ. ಅದರಲ್ಲೂ ಕೆಲವರಿಗೆ ಅದೊಂದು ದೊಡ್ಡ ಸಮಸ್ಯೆ ತರಹ ಅನುಭವವಾಗುತ್ತದೆ. ಹಾಗಾದಾಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಾಮಾನ್ಯ. ಈ ವೇಳೆ ಅವರ ವರ್ತನೆಯಲ್ಲಿ ಕಂಡು ಬರುವ ಬದಲಾವಣೆ ಅತಿರೇಕ ಸ್ವರೂಪ ಪಡೆದಾಗ ಎಲ್ಲರಿಗೂ ಒಂದು ತರಹದ ಹಿಂಸೆ ಸೃಷ್ಟಿಯಾಗುತ್ತದೆ. ಈಗ ನಾನು ಹೇಳಲು ಹೊರಟ ಪ್ರಕರಣದಲ್ಲೂ ಆಗಿದ್ದು ಅದುವೇ.
ಮನೆ ಸೊಸೆಗೆ ಎಲ್ಲರೂ ತಾನು ಹೇಳಿದ್ದನ್ನೇ ಕೇಳಬೇಕು ಮತ್ತು ಪಾಲಿಸಬೇಕು ಎನ್ನುವ ಹಠ. ಇಲ್ಲದಿದ್ದರೆ ಮನಸ್ಸಿಗೆ ಅದೇನೋ ಕಳವಳ. ಆಕ್ರೋಶ. ಯಾರಾದರೂ ಮಾತು ಕೇಳದಿದ್ದರೆ ಮೈ ಕೈ ಎಲ್ಲಾ ಬಡಿದುಕೊಳ್ಳುವುದು, ಕೂದಲು ಕೆದರಿಕೊಂಡು ಚೀರಾಟ, ಕೂಗಾಟ ಮಾಡುವುದು ಆಕೆಯ ದೈನಂದಿನ ವರ್ತನೆಯಾಗಿತ್ತು. ಪತಿ ಹಾಗೂ ಅತ್ತೆ ಮಾವ ಕೂಡ ಕೆಲ ದಿನ ಕಾದು ನೋಡಿದರು. ಅವರ ಸಹನೆಯ ಕಟ್ಟೆ ಕೂಡ ಒಡೆಯಿತು. ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕಿದ್ದ ಅವರು ಮೊರೆ ಹೋದದ್ದು ಮೌಢ್ಯಕ್ಕೆ ಎನ್ನುವುದು ವಿಪರ್ಯಾಸದ ಸಂಗತಿ.
ಹೌದು, ಎಐ ತಂತ್ರಜ್ಞಾನದ ಯುಗದಲ್ಲೂ ನಾವಿನ್ನೂ ಮೌಢ್ಯಗಳ ಮೊರೆ ಹೋಗುತ್ತಿದ್ದೇವೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಸಾಕಷ್ಟು ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗದಲ್ಲಿದ್ದರೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಬದಲು ಗಾಳಿ ಶಾಖ, ದೆವ್ವ ಬಿಡಿಸುವುದು ಮೊದಲಾದ ಮೌಢ್ಯಗಳ ಮೊರೆ ಹೋಗಿದ್ದು ಮತ್ತು ಹೋಗುತ್ತಿರುವುದು ಬೇಸರದ ಸಂಗತಿ. ಅದರ ಬದಲು ಮನೋವೈದ್ಯರ ಬಳಿ ಹೋಗಿದ್ದರೆ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿರಲೇ ಇಲ್ಲ. ಎಲ್ಲಾ ಕಡೆ ಓಡಾಡಿ ಕೊನೆಗೆ ಪರಿಹಾರ ಕಾಣದೆ ಯಾರದೋ ಸಲಹೆ ಮೇರೆಗೆ ನನ್ನ ಬಳಿ ಬಂದಾಗ ನನಗೆ ಅಚ್ಚರಿ ಮತ್ತು ಗಾಬರಿ ಎರಡೂ ಆಯಿತು. ಅಚ್ಚರಿ ಏಕೆಂದರೆ ಕಲಿತವರು ಹೀಗೆ ಮೌಢ್ಯಗಳ ಬೆನ್ನು ಹತ್ತಿದ್ದಕ್ಕೆ ಮತ್ತು ಗಾಬರಿ ಎಂದರೆ ಆ ಗೃಹಿಣಿಯ ಕೈ ಮೇಲೆಲ್ಲಾ ಆದ ಗಾಯಗಳನ್ನು ನೋಡಿ.
ಗೃಹಿಣಿಯ ಪತಿ ಆಕೆಯನ್ನು ಕರೆದುಕೊಂಡು ಬಂದರು. ಆಕೆಯನ್ನು ನೋಡಿದಾಕ್ಷಣ ಕೈ ಮೇಲೆ ಏನಿದು ಗಾಯದ ಕಲೆ ಎಂದು ಕೇಳಿದೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಪತಿ ‘ಏನು ಮಾಡೋದು ಡಾಕ್ಟರೇ, ನನಗಂತೂ ಜೀವನವೇ ಸಾಕಾಗಿ ಹೋಗಿದೆ. ಮದುವೆಯಾದ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಈಗ ಕೆಲ ವರ್ಷಗಳಿಂದ ಈಕೆ ತಾನು ಹೇಳಿದ್ದೇ ಆಗಬೇಕೆಂದು ಎಲ್ಲದಕ್ಕೂ ಪಟ್ಟು ಹಿಡಿಯುತ್ತಾಳೆ. ತಪ್ಪಿದಲ್ಲಿ ಎದುರಿದ್ದವರ ಕಥೆ ಮುಗಿಯಿತು ಅಷ್ಟೇ. ಇಲ್ಲದಿದ್ದರೆ ಅಸಹಾಯಕಳಾಗಿ ತನ್ನ ಕೈ ಮೇಲೆ ಈ ತರಹ ಗಾಯ ಮಾಡಿಕೊಳ್ಳುತ್ತಾಳೆ’ ಎಂದು ವಾಸ್ತವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಎಲ್ಲವನ್ನೂ ಕೂಲಂಕಷವಾಗಿ ಆಲಿಸಿದ ನಾನು ಎಷ್ಟು ವರ್ಷದಿಂದ ಈ ತರಹ ಆಡುತ್ತಿದ್ದಾರೆ? ಎಲ್ಲಿ ತೋರಿಸಿದ್ದೀರಿ ಎಂದೆಲ್ಲಾ ಕೇಳಿ ಕೊನೆಗೆ ಅದಕ್ಕೆ ವೈಜ್ಞಾನಿಕ ಪರಿಹಾರ ಸೂಚಿಸಿದೆ.
ಮನೋವಿಜ್ಞಾನದಲ್ಲಿ ಇದಕ್ಕೆ ಹೊಂದಾಣಿಕೆ ಸಮಸ್ಯೆ ಎಂದು ಕರೆಯಲಾಗುತ್ತದೆ. ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಹಾಗೂ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಬೇಗ ಗುಣಮುಖವಾಗಿಸಬಹುದು. ಅದರ ಬದಲು ಪತ್ತೆ ಹಚ್ಚುವಲ್ಲೇ ವಿಳಂಬವಾದರೆ ಸಮಸ್ಯೆ ಉಲ್ಬಣ ಪಕ್ಕಾ. ಈ ಪ್ರಕರಣದಲ್ಲಿ ಆಗಿರುವುದು ಕೂಡ ಅದುವೇ. ವೃತ್ತಿಪರ ಆಪ್ತ ಸಮಾಲೋಚನೆ ಮತ್ತು ಒತ್ತಡ ನಿರ್ವಹಣೆ ತಂತ್ರವೊಂದೇ ಇದಕ್ಕೆ ಪರಿಹಾರ. ಹೊಸ ಪರಿಸರದಲ್ಲಿ ಹೊಂದಾಣಿಕೆ ಆಗದಿದ್ದಾಗ ಉಂಟಾಗುವ ಮಾನಸಿಕ ತುಮುಲಗಳಿಂದಾಗಿ ಈ ತರಹದ ಉದ್ವೇಗ, ಅತಿರೇಕದ ವರ್ತನೆ ಶುರುವಾಗುತ್ತದೆ. ಸ್ಥಿರ ಮತ್ತು ಸಮತೋಲಿತ ಸ್ಥಿತಿ ಹೊಂದುವ ಮೂಲಕ ಈ ಸಮಸ್ಯೆಗೆ ಮುಕ್ತಿ ಕಾಣಿಸಬಹುದಾಗಿದೆ. ಇದು ಕೆಲವರಲ್ಲಿ ಸವಾಲು ಸೃಷ್ಟಿಸಬಹುದು ಯಾವುದಕ್ಕೂ ಮನೋವೈದ್ಯರ ಸಲಹೆ, ಸಮಾಲೋಚನೆಯೇ ಇದಕ್ಕೆ ಅಂತಿಮ ಪರಿಹಾರ.