Screen Time Effects on Kids
- ಮಕ್ಕಳಲ್ಲಿ ಹೆಚ್ಚುತ್ತಿರುವ ಹತ್ತಿರದ ದೃಷ್ಟಿ ದೋಷದ ಸಮಸ್ಯೆ, ಸ್ಕ್ರೀನ್ ಟೈಂ ಕಡಿಮೆ ಮಾಡಿ
- ಕಣ್ಣಿನ ಆಯಾಸ ಕಡಿಮೆ ಮಾಡಲು ಸರಳ ಮತ್ತು ಪರಿಣಾಮಕಾರಿ ವಿಧಾನ
- ನೈಸರ್ಗಿಕ ಸೂರ್ಯನ ಬೆಳಕು ಮಕ್ಕಳ ಕಣ್ಣಿನ ದೃಷ್ಟಿ ದೋಷವನ್ನು ತಡೆಯುತ್ತದೆ
- ಮಲಗುವ ಮುನ್ನ ಮೊಬೈಲ್ ಬಳಕೆ ಬಿಟ್ಟು ಒಂದು ಗಂಟೆಯ ಮೊದಲೇ ಪುಸ್ತಕ ಓದಿ
Screen Time Effects on Kids: ಕೋವಿಡ್ ಕಾಲದಲ್ಲಿ ಶುರುವಾದ ಆನ್ಲೈನ್ ಕ್ಲಾಸ್ಗಳ ಪರಿಪಾಟಲು.. ಈಗ ಮೊಬೈಲ್ ಜೀವನದ ಸರ್ವಸ್ವ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಆನ್ ಮಾಡಿ ರೀಲ್ಸ್ ನೋಡುವುದು, ಫೇಸ್ಬುಕ್, ಕಾರ್ಟೂನ್, ಗೇಮ್ ಸೇರಿದಂತೆ ಆನ್ಲೈನ್ ಪ್ಲಾಟ್ಫಾರ್ಮ್ಗಳ ಬಳಕೆ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಇದು ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಕಣ್ಣಿನ ದೃಷ್ಟಿ ಮೇಲೆಯೂ ಮಾರಕ ಪರಿಣಾಮವನ್ನು ಬೀರುತ್ತಿದೆ.
ಡಿಜಿಟಲ್ ಐ ಸ್ಟ್ರೈನ್ನಿಂದ ಮಕ್ಕಳಲ್ಲಿ ದೃಷ್ಟಿ ದೋಷ ಮತ್ತು 'ಮಯೋಪಿಯಾ' (ಹತ್ತಿರದ ದೃಷ್ಟಿ ದೋಷ) ಸಮಸ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಹಾಗೂ ಇದರಿಂದ ಮಕ್ಕಳ ಕಣ್ಣಿನ ಬಗ್ಗೆ ಪೋಷಕರು ಹೇಗೆ ಕಾಳಜಿ ವಹಿಸಬೇಕೆಂದು ಜನರಲ್ ನೇತ್ರವಿಜ್ಞಾನ, ವೈದ್ಯಕೀಯ ರೆಟಿನಾ ಮತ್ತು ಫ್ಯಾಕೋ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ನೇತ್ರಶಾಸ್ತ್ರಜ್ಞ ಡಾ. ನೇಹಾ ವಸ್ತಾ ಹೇಳಿಕೊಂಡಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.
ಹೆಚ್ಚು ಸ್ಕ್ರೀನ್ ನೋಡಿದ್ರೆ ಏನಾಗುತ್ತದೆ?
ಡಿಜಿಟಲ್ ಐ ಸ್ಟ್ರೈನ್ ಅಪಾಯಕಾರಿ. ಇದು ಮಕ್ಕಳಲ್ಲಿ ತಲೆ ನೋವು, ಡ್ರೈ ಐ, ದೃಷ್ಟಿ ಮಂದವಾಗುವಂತೆ ಮಾಡುತ್ತದೆ. ಇದಕ್ಕೂ ಆತಂಕಕಾರಿ ವಿಚಾರ ಏನೆಂದರೆ, ಮಕ್ಕಳಲ್ಲಿ myopia pandemic ಕಾಡುತ್ತದೆ ಇದರಿಂದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಸಮಸ್ಯೆ ಕೇವಲ ಪರದೆಯ ಸಮಯವಲ್ಲ, ಆದರೆ ಮಕ್ಕಳು ಡಿಜಿಟಲ್ ಸಾಧನಗಳನ್ನು ಎಷ್ಟು ಸಮಯ ಮತ್ತು ಎಷ್ಟು ನಿಕಟವಾಗಿ ಬಳಸುತ್ತಾರೆ ಎಂಬುದು. ಮಕ್ಕಳ ಕಣ್ಣು ಇನ್ನು ಎಳೆಯದಾದ ಕಾರಣ ದೃಷ್ಟಿ ದೋಷ ಬೇಗನೆ ಕಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಮಕ್ಕಳ ಕಣ್ಣಿನ ಆರೋಗ್ಯ ಕಾಪಾಡಲು ಪಾಲಕರು ಪಾಲಿಸಬೇಕಾದ ರೂಲ್ಸ್ ಬಗ್ಗೆ ಮಾಹಿತಿ ಇಲ್ಲಿದೆ
ವಯಸ್ಸಿನ ಆಧಾರದ ಮೇಲೆ ಸ್ಕ್ರೀನ್ ಟೈಮ್ ಹೀಗಿರಲಿ
- 0-2 ವರ್ಷ: ಯಾವುದೇ ಸ್ಕ್ರೀನ್ ಬಳಕೆ ಬೇಡ (ವಿಡಿಯೋ ಕಾಲ್ ಹೊರತುಪಡಿಸಿ).
- 2-5 ವರ್ಷ: ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ (ಶೈಕ್ಷಣಿಕ ಉದ್ದೇಶಕ್ಕಾಗಿ).
- 5-18 ವರ್ಷ: ದಿನಕ್ಕೆ ಗರಿಷ್ಠ 2 ಗಂಟೆಗಳ ಕಾಲ ಮಾತ್ರ ಮನರಂಜನೆಗಾಗಿ ಸ್ಕ್ರೀನ್ ಬಳಸಬಹುದು
ಮಕ್ಕಳ ದೃಷ್ಟಿ ಕಾಪಾಡೋಕೆ ಏನ್ಮಾಡ್ಬೇಕು?
- 20-20-20 ನಿಯಮ ಪಾಲಿಸಿ
- ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಿ, ಹೆಚ್ಚಾಗಿ ಹಸಿರ ಪರಿಸರ ಅಥವಾ ಹತ್ತಿರದಲ್ಲೇ ಇರುವ ಮರವನ್ನು ನೋಡಿ. ಕನಿಷ್ಠ 20 ಸೆಕೆಂಡ್ನಿಮ್ಮ ಕಣ್ಣನ್ನು ಮಿಟುಕಿಸಿ ಇದು ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ.
- ಸ್ಕ್ರೀನ್ ಮತ್ತು ಕಣ್ಣಿನ ನಡುವೆ ಕನಿಷ್ಠ 30-40 ಸೆಂ.ಮೀ ಅಂತರವಿರಲಿ.
- ಕತ್ತಲೆಯಲ್ಲಿ ಹಾಗೂ ಮಲಗುವಾಗ ಲೈಟ್ ಹಾರಿಸಿ ಮೊಬೈಲ್ ಬಳಸಬೇಡಿ, ಸರಿಯಾದ ಬೆಳಕಿರುವ ಕೋಣೆಯಲ್ಲಿ ಮಾತ್ರ ಬಳಸಿ.
- ದಿನಕ್ಕೆ ಕನಿಷ್ಠ 2 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ಆಟವಾಡುವುದು ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.
- ಮಲಗುವ ಒಂದು ಗಂಟೆ ಮುಂಚಿತವಾಗಿ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸಲು ಹೋಗಲೇ ಬೇಡಿ. ಆಗ ಪುಸ್ತಕ ಅಥವಾ ನೆಚ್ಚಿನವರೊಂದಿಗೆ ಮಾತನಾಡಿ.
- ನಿಮ್ಮ ಮಕ್ಕಳು ನೀವು ಗಮನಿಸಿದಾಗ ಕಣ್ಣು ಉಜ್ಜುವುದು ಅಥವಾ ಪದೇ ಪದೇ ತಲೆನೋವು ಎಂದು ಹೇಳುತ್ತಿದ್ದರೆ ಕಡೆಗಣಿಸದೆ ಕೂಡಲೇ ವೈದ್ಯರನ್ನು ಸಂಪರರ್ಕಿಸಲು ಹಿಂಜರಿಯವೇಡಿ.