ಬಾಟಲಿಯಲ್ಲಿರುವ ಹಳೆಯ ನೀರನ್ನು ಕುಡಿಯುವುದು ಸುರಕ್ಷಿತವೇ? ಅಸಲಿ ಸತ್ಯ ಇಲ್ಲಿದೆ ನೋಡಿ... Bottled Water  
ಆರೋಗ್ಯ

ಬಾಟಲಿಯಲ್ಲಿರುವ ಹಳೆಯ ನೀರನ್ನು ಕುಡಿಯುವುದು ಸುರಕ್ಷಿತವೇ? ಅಸಲಿ ಸತ್ಯ ಇಲ್ಲಿದೆ ನೋಡಿ... Bottled Water

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲ ಶೇಖರಿಸಿಡುವುದು ಆರೋಗ್ಯಕ್ಕೆ ಹಾನಿಕಾರಕ
  • ಒಂದು ವಾರಕ್ಕೂ ಹಳೆಯದಾದ ಬಾಟಲ್ ನೀರನ್ನು ಕುಡಿಯುವುದರಿಂದ ಬ್ಯಾಕ್ಟೀರಿಯಾ ಬೆಳೆಯಬಹುದು
  • ಪ್ಲಾಸ್ಟಿಕ್ ಬದಲು ಸ್ಟೀಲ್ ಅಥವಾ ಗಾಜಿನ ಬಾಟಲಿಗಳನ್ನು ಬಳಸುವುದು ಉತ್ತಮ ಅಭ್ಯಾಸ
  • ದೇಹ ಸೇರುವ ಮೈಕ್ರೋಪ್ಲಾಸ್ಟಿಕ್ ಕಣಗಳು ವಿವಿಧ ಗಂಭೀರ ರೋಗಗಳಿಗೆ ಕಾರಣವಾಗಬಹುದು
Bottled Water : ಬಾಟಲಿ ನೀರನ್ನು ಸಾಕಷ್ಟು ಮಂದಿ ಬಳಸುತ್ತಾರೆ. ವಿಶೇಷವಾಗಿ ಪ್ರಯಾಣ ಮಾಡುವಾಗ ಬಾಟಲಿ ನೀರನ್ನು ಅವಲಂಬಿಸದೆ ಬೇರೆ ದಾರಿಯಿಲ್ಲ. ಹೆಚ್ಚಿನ ಜನರು ತಾವು ಖರೀದಿಸಿದ ಸಂಪೂರ್ಣ ಬಾಟಲಿ ನೀರನ್ನು ಒಂದೇ ಬಾರಿಗೆ ಕುಡಿಯುವುದಿಲ್ಲ. ಉಳಿದ ಬಾಟಲಿ ನೀರನ್ನು ತಮ್ಮ ಬ್ಯಾಗ್​ಗಳು, ಕಾರುಗಳು, ಸ್ಕೂಟರ್‌ಗಳು ಮತ್ತು ರೆಫ್ರಿಜರೇಟರ್‌ಗಳಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವು ದಿನಗಳ ಬಳಿಕ ಮತ್ತೆ ಅದನ್ನು ಬಳಸುತ್ತಾರೆ. ಆದರೆ ಒಂದು ವಾರಕ್ಕಿಂತ ಹೆಚ್ಚು ಹಳೆಯದಾದ ಬಾಟಲಿ ನೀರನ್ನು ಕುಡಿಯಬಾರದು ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ.
ಯಾವುದೇ ಕಾರಣಕ್ಕೂ ಒಂದು ವಾರದವರೆಗೆ ಇಡಲಾದ ಬಾಟಲ್​ ನೀರನ್ನು ಕುಡಿಯಬಾರದು. ಏಕೆಂದರೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲ ಸಂಗ್ರಹಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗಬಹುದು. ಹೀಗಾಗಿ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಗಾಜಿನ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸುವುದು ಉತ್ತಮ. ಇವು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತವೆ.
ತುಂಬಾ ಹಳೆಯದಾದ ಬಾಟಲಿ ನೀರನ್ನು ಕುಡಿಯದಿರುವುದು ಆರೋಗ್ಯ ದೃಷ್ಟಿಯಿಂದ ತುಂಬಾ ಉತ್ತಮ. ಅಧ್ಯಯನ ಮಾಡುವವರು ಮತ್ತು ಕೆಲಸಕ್ಕೆ ಹೋಗುವವರು ಪ್ಲಾಸ್ಟಿಕ್​ ಬಾಟಲಿಗಳನ್ನು ಹೊರತುಪಡಿಸಿ, ಫ್ಲಾಸ್ಕ್ ಅಥವಾ ಇನ್ನಾವುದಾದರೂ ವಸ್ತುಗಳಲ್ಲಿ ನೀರನ್ನು ಕೊಂಡೊಯ್ಯುವುದು ಉತ್ತಮ. ಆದರೆ, ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ, ಇವುಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ತೊಳೆಯಬೇಕು.
ನೀರಿನ ಮೂಲಕ ದೇಹವನ್ನು ಪ್ರವೇಶಿಸುವ ಶೇ.90 ರಷ್ಟು ಮೈಕ್ರೋಪ್ಲಾಸ್ಟಿಕ್‌ಗಳು ಮಲದ ಮೂಲಕ ಹೊರಹಾಕಲ್ಪಡುತ್ತವೆ. ಆದರೆ, ಉಳಿದ ಶೇ.10 ರಷ್ಟು ಮೈಕ್ರೋಪ್ಲಾಸ್ಟಿಕ್​ಗಳು ರಕ್ತಪ್ರವಾಹದ ಮೂಲಕ ಮೂತ್ರಪಿಂಡಗಳನ್ನು ತಲುಪುತ್ತದೆ. ಇದು ವಿವಿಧ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ನೀರಿನ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ನಿಮಗೇ ಒಳ್ಳೆಯದು.
ಅಂದಹಾಗೆ, ಬಾವಿಗಳಿಂದ ನೀರು ಕುಡಿಯುವುದು ಉತ್ತಮ. ಆದರೆ, ವಿವಿಧ ಮೂಲಗಳಿಂದ ಸಂಗ್ರಹಿಸಿದ ಬಾಟಲ್​ ನೀರನ್ನು ಆರೋಗ್ಯದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಸೋಂಕುರಹಿತಗೊಳಿಸಿದಾಗ ಮಾತ್ರ ಬಾಟಲ್ ನೀರು ಶುದ್ಧವಾಗುತ್ತದೆ. ಇಲ್ಲವಾದಲ್ಲಿ ಅದು ಅಪಾಯಕಾರಿಯಾಗುತ್ತದೆ. ಆದ್ದರಿಂದ, ಅಧಿಕಾರಿಗಳು ವಿವಿಧ ಕಂಪನಿಗಳಿಂದ ಬಾಟಲ್ ನೀರನ್ನು ಸಂಗ್ರಹಿಸಿ ಪರೀಕ್ಷಿಸಲು ಮತ್ತು ಅದರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ, (ಏಜೆನ್ಸೀಸ್​).