ಬೆಂಗಳೂರು: ಸುಮಾರು ನಾಲ್ಕು ವರ್ಷಗಳ ಹಿಂದೆ, ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಿದ್ದರು. ಅವರು ಆಗಲೇ ಎರಡು ಹಂತದ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆದಿದ್ದರು. ಮುಂದಿನ ಚಿಕಿತ್ಸೆಯ ಆಯ್ಕೆಗಳು ಸೀಮಿತವಾಗಿದ್ದರಿಂದ, ಅವರ ಕುಟುಂಬದಲ್ಲಿ ಆತಂಕ ಮನೆಮಾಡಿತ್ತು. ಈ ಸಂದರ್ಭದಲ್ಲಿ ನಾವು ಇಮ್ಯೂನೋಥೆರಪಿ ಚಿಕಿತ್ಸೆಯನ್ನು ಆರಂಭಿಸಿದೆವು. ಎಂಟು ತಿಂಗಳ ಬಳಿಕ ನಡೆಸಿದ ಸ್ಕ್ಯಾನ್ನಲ್ಲಿ ಕ್ಯಾನ್ಸರ್ ಗಡ್ಡೆಯ ಗಾತ್ರ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂತು. ತಮ್ಮ ಮಗಳ ಮದುವೆಯಲ್ಲಿ ಭಾಗವಹಿಸಬಹುದೇ ಎಂದು ಅವರು ನನ್ನನ್ನು ಕೇಳಿದಾಗ, ಖಂಡಿತವಾಗಿಯೂ ಭಾಗವಹಿಸಿ, ಸಂತೋಷದಿಂದ ನೃತ್ಯವನ್ನೂ ಮಾಡಿ ಎಂದು ಹೇಳಿದ್ದೆ.
ವೈದ್ಯಕೀಯ ಕ್ಯಾನ್ಸರ್ ತಜ್ಞನಾಗಿ, ಇಮ್ಯೂನೋಥೆರಪಿ ರೋಗಿಗಳ ಜೀವನದಲ್ಲಿ ತರಬಲ್ಲ ಬದಲಾವಣೆಗೆ ಈ ಅನುಭವ ಒಂದು ಉದಾಹರಣೆಯಾಗಿದೆ.
ದೀರ್ಘಕಾಲದವರೆಗೆ, ಮುಂದುವರಿದ ಹಂತದ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಸವಾಲುಗಳಲ್ಲಿ ಒಂದಾಗಿತ್ತು. ಕೀಮೋಥೆರಪಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರೂ, ವೇಗವಾಗಿ ವಿಭಜನೆಯಾಗುವ ಕೆಲವು ಆರೋಗ್ಯಕರ ಕೋಶಗಳ ಮೇಲೂ ಪರಿಣಾಮ ಬೀರಬಹುದು. ಇದರಿಂದ ಆಯಾಸ, ವಾಕರಿಕೆ ಮತ್ತು ಕೂದಲು ಉದುರುವಿಕೆಯಂತಹ ಅಡ್ಡಪರಿಣಾಮಗಳು ಉಂಟಾಗಬಹುದು. ಕೆಲವು ರೋಗಿಗಳಲ್ಲಿ ಚಿಕಿತ್ಸೆ ಉತ್ತಮ ಫಲಿತಾಂಶ ನೀಡಿದರೂ, ಕ್ಯಾನ್ಸರ್ ಅನ್ನು ದೀರ್ಘಕಾಲದವರೆಗೆ ನಿಯಂತ್ರಣದಲ್ಲಿಡುವುದು ಸವಾಲಿನ ಕೆಲಸವಾಗಿತ್ತು.
ಇಂತಹ ಸಂದರ್ಭದಲ್ಲಿ, ಇಮ್ಯೂನೋಥೆರಪಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮತ್ತೊಂದು ಮಹತ್ವದ ಆಯ್ಕೆಯಾಗಿ ಹೊರಹೊಮ್ಮಿದೆ. ಈ ಚಿಕಿತ್ಸೆಯು ದೇಹದ ಸ್ವಂತ ರೋಗನಿರೋಧಕ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ, ಕ್ಯಾನ್ಸರ್ ಕೋಶಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಕೆಲವು ಕ್ಯಾನ್ಸರ್ ಕೋಶಗಳು ರೋಗನಿರೋಧಕ ವ್ಯವಸ್ಥೆಯ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಇಮ್ಯೂನೋಥೆರಪಿಯ ಕೆಲವು ಔಷಧಿಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸುವ ಮೂಲಕ, ರೋಗನಿರೋಧಕ ಕೋಶಗಳು ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.
ಇತ್ತೀಚಿನ ವರ್ಷಗಳಲ್ಲಿ, ಮೆಲನೋಮಾ (ಚರ್ಮದ ಕ್ಯಾನ್ಸರ್ನ ಒಂದು ವಿಧ), ಶ್ವಾಸಕೋಶದ ಕ್ಯಾನ್ಸರ್ ಮತ್ತು ಯಕೃತ್ತಿನ ಕ್ಯಾನ್ಸರ್ ಸೇರಿದಂತೆ ಹಲವು ಕ್ಯಾನ್ಸರ್ಗಳ ಚಿಕಿತ್ಸೆಯಲ್ಲಿ ಇಮ್ಯೂನೋಥೆರಪಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ. ಸೂಕ್ತ ರೋಗಿಗಳಲ್ಲಿ ಈ ಚಿಕಿತ್ಸೆಯು ಕ್ಯಾನ್ಸರ್ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಬದುಕುಳಿಯುವ ಅವಧಿಯನ್ನು ಹೆಚ್ಚಿಸಲು ನೆರವಾಗಬಹುದು.
ರಕ್ತದ ಕೆಲವು ಕ್ಯಾನ್ಸರ್ಗಳ ಚಿಕಿತ್ಸೆಯಲ್ಲಿಯೂ CAR-T ಸೆಲ್ ಥೆರಪಿ ಹೊಸ ಸಾಧ್ಯತೆಗಳನ್ನು ತೆರೆದಿದೆ. ಈ ಚಿಕಿತ್ಸಾ ವಿಧಾನದಲ್ಲಿ, ರೋಗಿಯ ರೋಗನಿರೋಧಕ ಕೋಶಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಮಾರ್ಪಡಿಸಲಾಗುತ್ತದೆ. ಬಳಿಕ, ಕ್ಯಾನ್ಸರ್ ಕೋಶಗಳನ್ನು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುವಂತೆ ಸಿದ್ಧಪಡಿಸಿದ ಈ ಕೋಶಗಳನ್ನು ಮತ್ತೆ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ.
ಆದರೆ, ಇಮ್ಯೂನೋಥೆರಪಿ ಎಲ್ಲ ರೋಗಿಗಳಲ್ಲೂ ಒಂದೇ ರೀತಿಯ ಫಲಿತಾಂಶ ನೀಡುವುದಿಲ್ಲ. ಕ್ಯಾನ್ಸರ್ನ ವಿಧ, ಅದರ ಹಂತ, ನಿರ್ದಿಷ್ಟ ಜೈವಿಕ ಲಕ್ಷಣಗಳು ಮತ್ತು ರೋಗಿಯ ಒಟ್ಟಾರೆ ಆರೋಗ್ಯದ ಆಧಾರದ ಮೇಲೆ ಚಿಕಿತ್ಸೆಯ ಪರಿಣಾಮ ಬದಲಾಗಬಹುದು. ಕೆಲವೊಮ್ಮೆ, ರೋಗನಿರೋಧಕ ವ್ಯವಸ್ಥೆಯ ಅತಿಯಾದ ಪ್ರತಿಕ್ರಿಯೆಯಿಂದ ಆರೋಗ್ಯಕರ ಅಂಗಗಳ ಮೇಲೂ ಪರಿಣಾಮ ಉಂಟಾಗಬಹುದು. ಹೀಗಾಗಿ, ಚಿಕಿತ್ಸೆಯ ಅವಧಿಯಲ್ಲಿ ವೈದ್ಯಕೀಯ ಮೇಲ್ವಿಚಾರಣೆ ಅತ್ಯಗತ್ಯ. ಭಾರತದಲ್ಲಿ ಈ ಚಿಕಿತ್ಸೆಯ ವೆಚ್ಚವೂ ಅನೇಕ ರೋಗಿಗಳಿಗೆ ಸವಾಲಾಗಿ ಉಳಿದಿದೆ.
ಇಮ್ಯೂನೋಥೆರಪಿ ಕ್ಯಾನ್ಸರ್ಗೆ ಸಂಪೂರ್ಣ ಪರಿಹಾರವಲ್ಲ. ಆದಾಗ್ಯೂ, ಸೂಕ್ತ ರೋಗಿಗಳಲ್ಲಿ ರೋಗವನ್ನು ದೀರ್ಘಕಾಲದವರೆಗೆ ನಿಯಂತ್ರಣದಲ್ಲಿಡಲು ಮತ್ತು ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಇದು ನೆರವಾಗಬಹುದು. ಮುಂದುವರಿದ ಹಂತದ ಕ್ಯಾನ್ಸರ್ ಎಂದರೆ ಭರವಸೆ ಕಳೆದುಕೊಳ್ಳಬೇಕು ಎಂದಲ್ಲ ಎಂಬುದನ್ನು ಈ ಚಿಕಿತ್ಸೆಯ ಬೆಳವಣಿಗೆ ತೋರಿಸಿಕೊಟ್ಟಿದೆ.
ವೈದ್ಯಕೀಯ ಸಂಶೋಧನೆ ಮುಂದುವರಿದಂತೆ, ಕ್ಯಾನ್ಸರ್ ಚಿಕಿತ್ಸೆಯು ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ವೈಯಕ್ತಿಕಗೊಳಿಸಿದ ಮತ್ತು ಪರಿಣಾಮಕಾರಿ ವಿಧಾನಗಳತ್ತ ಸಾಗುತ್ತಿದೆ. ಕ್ಯಾನ್ಸರ್ನ ಸ್ವರೂಪಕ್ಕೆ ಅನುಗುಣವಾಗಿ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದು, ಅದರ ಪ್ರಯೋಜನಗಳು ಮತ್ತು ಸಂಭವನೀಯ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ತಜ್ಞ ವೈದ್ಯರ ಸಲಹೆ ಪಡೆಯುವುದು ರೋಗಿಗಳಿಗೆ ಅತ್ಯಂತ ಮುಖ್ಯವಾಗಿದೆ.
- ಡಾ. ಪ್ರಸಾದ್ ನಾರಾಯಣನ್, ಲೀಡ್ ಕನ್ಸಲ್ಟೆಂಟ್ಮೆ, ಡಿಕಲ್ ಆಂಕಾಲಜಿ, ಹೆಮ್ಯಾಟೋ-ಆಂಕಾಲಜಿ ಮತ್ತು ಬಿಎಂಟಿ (BMT), ಮಣಿಪಾಲ್ ಆಸ್ಪತ್ರೆಗಳು, ಯಲಹಂಕ, ಬೆಂಗಳೂರು