- ಏಪ್ರಿಲ್ ಅಂತ್ಯಕ್ಕೇ ದೇಶದ ಹಲವು ಭಾಗಗಳಲ್ಲಿ ಸೂರ್ಯನ ಶಾಖ ಅತಿಯಾಗುತ್ತಿದೆ
- ಮೇ ತಿಂಗಳು ಆರಂಭವಾಗುವ ಮೊದಲೇ ತಾಪಮಾನವು 40-42 ಡಿಗ್ರಿ ಸೆಲ್ಸಿಯಸ್ ತಲುಪಿದೆ
- ಪ್ರತಿಯೊಬ್ಬ ಆರೋಗ್ಯಕರ ವ್ಯಕ್ತಿಯೂ ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಬೇಕು
- ಅಳತೆಗೂ ಮೀರಿ ನೀರನ್ನು ಕುಡಿಯುವುದರಿಂದ ಆಯಾಸ, ತಲೆನೋವು ಉಂಟಾಗುತ್ತದೆ
Daily Water Goal: ಏಪ್ರಿಲ್ ಅಂತ್ಯಕ್ಕೇ ದೇಶದ ಹಲವು ಭಾಗಗಳಲ್ಲಿ ಸೂರ್ಯನ ಶಾಖ ಅತಿಯಾಗುತ್ತಿದೆ. ಮೇ ತಿಂಗಳು ಆರಂಭವಾಗುವ ಮೊದಲೇ ತಾಪಮಾನವು 40-42 ಡಿಗ್ರಿ ಸೆಲ್ಸಿಯಸ್ ತಲುಪಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದ್ದು, ಈ ದಿನಗಳಲ್ಲಿ ನಾವು ತೆಗೆದುಕೊಳ್ಳಬೇಕಾದ ಮೊದಲ ಸಲಹೆಯೆಂದರೆ ಅದುವೇ ಸಾಕಷ್ಟು ನೀರು ಕುಡಿಯುವುದು.
ಪ್ರತಿಯೊಬ್ಬ ಆರೋಗ್ಯಕರ ವ್ಯಕ್ತಿಯೂ ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ, ವಿಜ್ಞಾನದ ಪ್ರಕಾರ ಲೆಕ್ಕವೇ ಬೇರೆ ಇದೆ. ಏನಂತೀರಾ? ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕಾರ, ಚಟುವಟಿಕೆಯ ಮಟ್ಟ ಮತ್ತು ತೂಕವನ್ನು ಅವಲಂಬಿಸಿ ನೀರಿನ ಅವಶ್ಯಕತೆಗಳು ಬದಲಾಗುತ್ತವೆ.
ಆದಾಗ್ಯೂ, ಅಳತೆಗೂ ಮೀರಿ ನೀರನ್ನು ಕುಡಿಯುವುದರಿಂದ ಆಯಾಸ, ತಲೆನೋವು ಮತ್ತು ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುತ್ತದೆ. ಹಾಗಿದ್ದರೆ, ತೂಕದ ಆಧಾರದ ಮೇಲೆ ಪ್ರತಿಯೊಬ್ಬರೂ ಎಷ್ಟು ನೀರನ್ನು ಕುಡಿಯಬೇಕು ಎಂದು ನೋಡೋಣ ಬನ್ನಿ..
ತೂಕದಿಂದ ನೀರಿನ ಪ್ರಮಾಣವನ್ನು ನಿರ್ಧರಿಸುವುದು ಹೇಗೆ ?
ಮಿಸೌರಿ ವಿಶ್ವವಿದ್ಯಾನಿಲಯ ನಡೆಸಿದ ವರದಿಯ ಪ್ರಕಾರ, ಜಲಸಂಚಯನಕ್ಕೆ ಒಂದೇ ರೀತಿಯ ನಿಯಮವಿಲ್ಲ, ಮತ್ತು ಅದು ಸಂಪೂರ್ಣವಾಗಿ ನಿಮ್ಮ ದೇಹದ ತೂಕವನ್ನು ಅವಲಂಬಿಸಿರುತ್ತದೆ. ಹಾಗಾಗಿ ನಿಮ್ಮ ಮನೆಯಿಂದಲೇ ನಿಮ್ಮ ದೇಹಕ್ಕೆ ಎಷ್ಟು ಲೀಟರ್ ನೀರು ಬೇಕು ಎಂದು ಲೆಕ್ಕ ಹಾಕಲು ಸರಳ ಸೂತ್ರವನ್ನು ಸಂಶೋಧನೆ ತಿಳಿಸಿದೆ. ನಿಮ್ಮ ತೂಕ ÷ 30 = ಒಟ್ಟು ಲೀಟರ್.
ಉದಾಹರಣೆಗೆ, ನಿಮ್ಮ ತೂಕ 60 ಕಿಲೋಗ್ರಾಂಗಳಾಗಿದ್ದರೆ, 30 ಅನ್ನು 2 ರಿಂದ ಭಾಗಿಸಿದಾಗ 2 ಬರುತ್ತದೆ. ಇದರರ್ಥ ನೀವು ದಿನಕ್ಕೆ ಕನಿಷ್ಠ 2 ಲೀಟರ್ ನೀರು ಕುಡಿಯಬೇಕು. ಆದಾಗ್ಯೂ, ನೀವೇನಾದರೂ 90 ಕೆಜಿ ಇದ್ದರೆ ಕನಿಷ್ಟ 3 ಲೀಟರ್ ನೀರು ಬೇಕಾಗುತ್ತದೆ.
ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚು!
ಈ ಸೂತ್ರವು ಒಂದು ಮೂಲಭೂತ ಅವಶ್ಯಕತೆಯನ್ನು ಒದಗಿಸುತ್ತದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ, ಗಣಿತದಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು. ನೀವೇನಾದರೂ ಬಿಸಿಲಿನಲ್ಲಿ ಓಡಾಡುತ್ತಿದ್ದರೆ, ಇಲ್ಲವೇ ವ್ಯಾಯಾಮ ಮಾಡುತ್ತಿದ್ದರೆ ಬೆವರಿನ ಮೂಲಕ ಕಳೆದು ಹೋದ ಎಲೆಕ್ಟ್ರೋಲೈಟ್ಗಳನ್ನು ಪುನಃ ತುಂಬಿಸಲು ನೀವು ಅರ್ಧ ಗಂಟೆಗೆ ಸುಮಾರು 350 ಮಿಲಿ ನೀರನ್ನು ಕುಡಿಯಲೇಬೇಕು. ಜೊತೆಗೆ ಬಹಳಷ್ಟು ಕೆಫೀನ್ ಸೇವಿಸುವುದಾದರೆ, ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸುವುದರಿಂದ ನಿಮಗೆ ಹೆಚ್ಚಿನ ನೀರು ಬೇಕಾಗಬಹುದು.
ಬಾಯಾರಿಕೆಯಾಗುವವರೆಗೂ ಕಾಯಬೇಡಿ
ಜನರು ತಮ್ಮ ಗಂಟಲು ಒಣಗಿದಂತೆ ಭಾಸವಾದಾಗ ನೀರಿಗಾಗಿ ಹಂಬಲಿಸುತ್ತಾರೆ. ಆದರೆ, ಇದನ್ನು ವೈದ್ಯರು ಎಚ್ಚರಿಕೆ ಸೂಚನೆ ಎಂದು ಪರಿಗಣಿಸುತ್ತಾರೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು (NIH) ನಡೆಸಿದ ಅಧ್ಯಯನದ ಪ್ರಕಾರ, ಬಾಯಾರಿಕೆ ಎಂದರೆ ನಿಮ್ಮ ದೇಹವು ಈಗಾಗಲೇ ಶೇ. 1-2 ರಷ್ಟು ನಿರ್ಜಲೀಕರಣಗೊಂಡಿದೆ ಎಂದು ಹೇಳುತ್ತದೆ. ಹಾಗಾಗಿ ಆಗ್ಗಾಗ ನೀರು ಕುಡಿಯುವುದು ಮುಖ್ಯವಾಗಿರುತ್ತದೆ. ಸರಿಯಾದ ಜಲಸಂಚಯನವು ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುವುದಲ್ಲದೆ, ತೂಕ ನಷ್ಟ ಮತ್ತು ಹೊಳೆಯುವ ಚರ್ಮಕ್ಕೂ ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.