ಸಕ್ಕರೆ ಕಾಯಿಲೆಯನ್ನು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ. ಏಕೆಂದರೆ ಇದು ಕಿಡ್ನಿ, ನರ ಇತ್ಯಾದಿಗಳನ್ನು ಹಾಳು ಮಾಡುವ ಸಂದರ್ಭದಲ್ಲಿ ನಮಗೆ ಗೊತ್ತೇ ಆಗುವುದಿಲ್ಲ. ಪೂರ್ತಿಯಾಗಿ ನರಗಳು ಹಾಳಾದ ನಂತರ ಉರಿ ಪ್ರಾರಂಭವಾಗಿ ತೊಂದರೆಯನ್ನು ಅನುಭವಿಸುತ್ತೇವೆ. ಇದಕ್ಕೆ ಡಯಾಬಿಟಿಕ್ ನ್ಯೂರೋಪತಿ ಎನ್ನುತ್ತಾರೆ. ಅಂದರೆ ಇದರ ಪರಿಹಾರಕ್ಕೆ ನಾವು ಮೊದಲು ಮಾಡಿಕೊಳ್ಳಬೇಕಿರುವುದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದು. ಆದ್ದರಿಂದ ಊಟದಲ್ಲಿ ಸಾಧ್ಯವಾದಷ್ಟು ಎಲ್ಲ ರೀತಿಯ ಪೋಷಕಾಂಶಗಳನ್ನು ಸೇವಿಸುವ ರೂಢಿಯನ್ನು ಬೆಳೆಸಿಕೊಳ್ಳಬೇಕು.
ವಿಶೇಷವಾಗಿ ಕಾಬೋಹೈಡ್ರೇಟ್ಗಳು ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳ ಸೇವನೆಯನ್ನು ಕಡಿಮೆ ಮಾಡಿ ಬದಲಿಗೆ ಸೊಪ್ಪು, ಹಣ್ಣು, ತರಕಾರಿಗಳು, ನಟ್ಗಳು, ತುಪ್ಪ, ಗಾಣದ ಎಣ್ಣೆ, ಬೇಳೆ, ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಹಣ್ಣುಗಳಲ್ಲಿ ಯಥೇಚ್ಛವಾಗಿ ರೋಗ ನಿರೋಧಕಗಳು ಇರುವ ಕಾರಣ ಅವು ನರಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನರಗಳ ದುರಸ್ತಿಗೆ ಮುಖ್ಯವಾಗಿ ಬೇಕಿರುವುದು ವಿಟಮಿನ್ ಬಿ12. ಸಸ್ಯಾಹಾರಿಗಳಲ್ಲಿ ದೊಡ್ಡ ಪ್ರಮಾಣದ ವಿಟಮಿನ್ ಬಿ12 ಇರುವ ಆಹಾರ ಸಿಗುವುದು ಕಷ್ಟ. ಆದರೂ ಹಾಲು, ಮೊಸರು ಮತ್ತು ನಟ್ಗಳ ಮೂಲಕ ಅದನ್ನು ಪಡೆಯಬಹುದು. ಮಾಂಸಾಹಾರಿಗಳಿಗೆ ಸುಲಭವಾಗಿ ಮಾಂಸಾಹಾರದಲ್ಲಿ ಸಿಕ್ಕಿಬಿಡುತ್ತದೆ. ವಿಟಮಿನ್ ಸಿ ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ಎಂಬ ಹೆಗ್ಗಳಿಕೆ ಹೊಂದಿದೆ. ಹಾಗಾಗಿ ನಾವು ಸಾಧ್ಯವಾದಷ್ಟು ಹುಳಿ ಹಣ್ಣುಗಳು, ನೆಲ್ಲಿಕಾಯಿ ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಬೇಕು.
ಆಯುರ್ವೆದದಲ್ಲಿ ನೆಲ್ಲಿಕಾಯಿಗೆ ಸದಾಪಥ್ಯ, ವಯಸ್ಥಾಪಕ ಅಂದರೆ ಇದು ನಿತ್ಯ ಸೇವನೆಗೆ ಯೋಗ್ಯವಾದದ್ದು ಮತ್ತು ನಮ್ಮ ಮುಪ್ಪನ್ನು ದೂರ ಮಾಡುವಂಥದ್ದು ಎಂದಿದ್ದಾರೆ. ಹಾಗಾಗಿ ಇದರ ನಿತ್ಯ ಬಳಕೆ ಮಾಡಿದರೆ ಸುಲಭವಾಗಿ ನಾವು ಇಂತಹ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು. ವಿಟಮಿನ್ ಕೆ ಕೂಡ ಅತ್ಯಂತ ಅನಿವಾರ್ಯವಾದದ್ದು. ಏಕೆಂದರೆ ಇದರಿಂದ ನರಗಳ ಮೇಲೆ ಆದ ಕೆಲವು ರೀತಿಯ ವಿಶೇಷ ತೊಂದರೆಗಳು ದುರಸ್ತಿಯಾಗಲು ಸಾಧ್ಯವಾಗುತ್ತದೆ. ಇದು ನಮಗೆ ಸೊಪ್ಪುಗಳು ಮತ್ತು ತರಕಾರಿಗಳಿಂದ ಸಿಗುತ್ತದೆ. ಮುಂದಿನದು ವಿಟಮಿನ್ ಬಿ6. ಇದು ಶೇಂಗಾ ಬೀಜ, ಸೋಯಾಬೀನ್, ಓಟ್ಸ್ ಮುಂತಾದವುಗಳಲ್ಲಿ ಸುಲಭವಾಗಿ ಸಿಗುತ್ತದೆ. ಸಕ್ಕರೆಯ ಅಂಶ ಚೆನ್ನಾಗಿ ಹತೋಟಿಯಲ್ಲಿ ಇದ್ದರೂ ಪಾದದಲ್ಲಿ ಉರಿ ಆಗುತ್ತಿದ್ದರೆ ಸ್ವಲ್ಪ ಮಟ್ಟಿಗೆ ಬಾಳೆಹಣ್ಣನ್ನು ಕೂಡ ಸೇವಿಸಬಹುದು.
ಏಕೆಂದರೆ ಇದರಲ್ಲಿ ವಿಟಮಿನ್ ಬಿ6 ಹೇರಳವಾಗಿದೆ. ಆದರೆ ಸಕ್ಕರೆಯ ಅಂಶ ಜಾಸ್ತಿ ಇದ್ದರೆ ತೊಂದರೆ ಆಗಬಹುದು. ದೇಹದಲ್ಲಿರುವ ಉರಿಯೂತ ವನ್ನು ಕಡಿಮೆ ಮಾಡಲು ಅತ್ಯುತ್ತಮವಾದ ದ್ರವ್ಯವೆಂದರೆ ಒಮೆಗಾ 3 ಫ್ಯಾಟಿ ಆಸಿಡ್. ಪ್ರತಿನಿತ್ಯ ಇದನ್ನು ಸೇವಿಸಿದರೆ ಕಾಲುಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗಿ ಉರಿ ಯೂತ ಕಡಿಮೆಯಾಗಿ ನರಗಳು ಸುಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಹೀಗೆ ಆಹಾರದಲ್ಲಿ ಪೋಷಕಾಂಶಗಳನ್ನು ಸೇವಿಸುವುದರ ಜೊತೆಗೆ ಬಾಹ್ಯ ಚಿಕಿತ್ಸೆಗಳಿಂದ ಕೂಡ ಸಮಸ್ಯೆಯ ನಿವಾರಣೆ ಮಾಡಿಕೊಳ್ಳ ಬಹುದು. ಬೆಚ್ಚಗಿನ ನೀರಿಗೆ ಎಪ್ಸಮ್ ಸಾಲ್ಟ್ ಹಾಕಿ ಪಾದಗಳನ್ನು ಮುಳುಗಿಸಿ ಇಟ್ಟುಕೊಳ್ಳುವುದರಿಂದ ರಕ್ತಸಂಚಾರ ಚೆನ್ನಾಗಿ ಆಗಿ ಉರಿ ಕಡಿಮೆಯಾಗಲು ಅನುಕೂಲವಾಗುತ್ತದೆ.
ಪಿಂಡ ತೈಲ, ಚಂದನ ಬಲಲಾಕ್ಷಾದಿ ತೈಲ ಮುಂತಾದ ಆಯುರ್ವೆದ ತೈಲಗಳಿಂದ ಪಾದಕ್ಕೆ ಚೆನ್ನಾಗಿ ಅಭ್ಯಂಗ ಮಾಡಿಕೊಂಡರೆ ಅನುಕೂಲವಾಗುತ್ತದೆ. ಹುತ್ತದ ಮಣ್ಣು ತಂದು ನೀರಿನಲ್ಲಿ ಕಲಸಿ ಅದಕ್ಕೆ ಸ್ವಲ್ಪ ಲೋಳೆಸರ ಸೇರಿಸಿ ಪಾದಗಳಿಗೆ ಲೇಪ ಮಾಡಿಕೊಳ್ಳುವುದರಿಂದ ಕೂಡ ತ್ವರಿತ ಉಪಶಮನ ಸಾಧ್ಯವಾಗುತ್ತದೆ. ಒಂದು ವೇಳೆ ಇಷ್ಟೆಲ್ಲಾ ಮಾಡಿಕೊಂಡ ನಂತರವೂ ಉರಿ ಶಮನವಾಗದೇ ಹೋದರೆ ಅಥವಾ ಉರಿಯ ಜೊತೆಗೆ ಕಾಲಲ್ಲಿ ಸ್ಪರ್ಶಜ್ಞಾನದ ಕೊರತೆ ಅನ್ನಿಸುವುದು, ನಡೆಯುವಾಗ ಸಮತೋಲನ ತಪ್ಪಿದಂತೆ ಅನ್ನಿಸುವುದು, ಜೋಮು, ನೋವು ಮುಂತಾದ ಲಕ್ಷಣಗಳು ಕಾಣಿಸುವುದು ಆಗುತ್ತಿದ್ದರೆ ಡಯಾಬಿಟಿಕ್ ನ್ಯೂರೋಪತಿ ಹೆಚ್ಚಾಗಿದೆ ಎಂದು ಪರಿಗಣಿಸಿ ಸುಮಾರು 10 ದಿನಗಳ ಸೂಕ್ತ ಪ್ರಕೃತಿ ಚಿಕಿತ್ಸೆ ಮಾಡಿಕೊಂಡರೆ ಪೂರ್ತಿಯಾಗಿ ಗುಣವಾಗಲುಸಾಧ್ಯವಾಗುತ್ತದೆ.